ಶನಿವಾರಸಂತೆ, ಜು. ೬: ಚೌಡನಹಳ್ಳಿ ಗ್ರಾಮದ ಸರ್ವೆ ನಂ. ೩೭/೧೬ರಲ್ಲಿ ಒಟ್ಟು ೨ ಎಕರೆ ಜಾಗವನ್ನು ನಿವೇಶನ ರಹಿತರಿಗೆ ಜಾಗ ವಿತರಿಸಲು ಕಾಯ್ದಿರಿಸಿದೆ. ಕಸವಿಲೇವಾರಿ ಘಟಕ ನಿರ್ಮಿಸಲು ೫೦ ಸೆಂಟ್ ಜಾಗ ಕಾಯ್ದಿರಿಸಿದ ಜಾಗದ ಮಧ್ಯೆ ಬರುತ್ತಿದ್ದು, ನಿವೇಶನದ ಮಧÀ್ಯದಲ್ಲಿ ಕಸ ವಿಲೇವಾರಿ ಘಟಕ ಪ್ರಾರಂಭಿಸಲು ಚೌಡನಹಳ್ಳಿ ಗ್ರಾಮಸ್ಥರು ತಕರಾರು ಮಾಡಿ ಕಾಮಗಾರಿ ಮಾಡದಂತೆ ತಡೆ ಮಾಡಿದ್ದರು.

ಇದೀಗ ನಿಡ್ತ ಗ್ರಾ.ಪಂ. ಅಧ್ಯಕ್ಷೆ ಯಶೋಧ, ಸದಸ್ಯರಾದ ಕಾರ್ತಿಕ್, ರೋಹಿಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಹಾಗೂ ಗ್ರಾಮಸ್ಥರು ಸೇರಿ ನಡೆಸಿದ ಸಭೆಯಲ್ಲಿ ನಿವೇಶನ ರಹಿತರಿಗೆ ಕಾಯ್ದಿರಿಸಿದ ೨ ಎಕರೆ ಜಾಗದ ಮುಂಭಾಗ ನಿವೇಶನ ರಹಿತರಿಗೆ ಜಾಗ, ಹಿಂಭಾಗ ಕಸ ವಿಲೇವಾರಿ ಘಟಕ ಹಾಗೂ ಸ್ಮಶಾನ ಕ್ಕಾಗಿ ಕಾಯ್ದಿರಿಸಲು ಗ್ರಾಮಸ್ಥರ ಒಪ್ಪಿಗೆ ಯ ಮೇರೆ ಸ್ಥಳದಲ್ಲಿದ್ದ ಕಂದಾಯ ನಿರೀಕ್ಷಕ ಮಂಜುನಾಥ, ಗ್ರಾಮಲೆಕ್ಕಿಗ ರಾದ ಸಂತೋಷ್ ಅವರುಗಳ ಉಪಸ್ಥಿತಿಯಲ್ಲಿ ಜಾಗವನ್ನು ಗುರುತಿಸಲಾಯಿತು. ಸರ್ವೆ ಇಲಾಖೆ ಯಿಂದ ನಿಖರವಾದ ನಕಾಶೆಯನ್ನು ಮಾಡಿಸಿಕೊಡುವಂತೆ ಕಂದಾಯ ನಿರೀಕ್ಷಕರಿಗೆ ಗ್ರಾಮಸ್ಥರು ಕೋರಿಕೆ ಸಲ್ಲಿಸಿದರು.