ವೀರಾಜಪೇಟೆ, ಜು. ೬: ನದಿಗಳ ಹಂಗಿಲ್ಲದೇ ಯಾವೊಬ್ಬ ಮನುಷ್ಯನು ಬದುಕಲಾರ. ಅದರಲ್ಲೂ “ಊರಿಗೊಂದು ಕೆರೆಯಾದರೆ ಬಾವಿಗೆಲ್ಲಾ ನೀರೇ ನೀರು” ಎನ್ನುವ ಸಾಂಪ್ರದಾಯಿಕ ವಿಜ್ಞಾನವೂ ಚಾಲ್ತಿಯಲ್ಲಿದೆ.
ವೀರಾಜಪೇಟೆ ನಗರವನ್ನು ದೊಡ್ಡವೀರರಾಜೇಂದ್ರ ಕೊಡಗಿನ ಎರಡನೇ ಮುಖ್ಯಪಟ್ಟಣವಾಗಿ ೧೭೯೨ರಲ್ಲಿ ನಿರ್ಮಿಸಿದರು. ಇದಕ್ಕೆ ವೀರರಾಜೇಂದ್ರಪೇಟೆ ಎಂದು ಹೆಸರಿಟ್ಟರು. ನಗರ ಕಟ್ಟಿದಮೇಲೆ ಇಲ್ಲಿ ವಾಸಿಸಲು ಬೇಕಾದ ಆಯಾ ವರ್ಣಗಳಿಗನುಗುಣವಾಗಿ ಕುಲಕಸುಬು ಮಾಡುವ ಅನೇಕ ಜಾತಿ ಜನಾಂಗವನ್ನು ಇಲ್ಲಿಗೆ ಬರಮಾಡಿಕೊಂಡು ಅವರಿಗೆ ಆಶ್ರಯ ಕಲ್ಪಿಸಿದರು.
ಬರೇ ಜನ ಬಂದರೇ ಸಾಕೇ ಅವರಿಗೆ ಜೀವನ ನಡೆಸಲು ಬೇಕಾದ ನೀರಿಗಾಗಿ ವೀರಾಜಪೇಟೆಯಲ್ಲಿ ಕೆರೆಗಳ ನಿರ್ಮಾಣವನ್ನು ದೊಡ್ಡವೀರರಾಜೇಂದ್ರ ಮಾಡಿಸಿದರು. ಪಂಪ್ ಕೆರೆ ನಗರಕ್ಕೆ ನೀರು ಕೊಡುವ ಬಹುಮುಖ್ಯ ಉದ್ದೇಶದ ಜೊತೆಗೆ ಬೆಟ್ಟಗಳು ಸಂದಿಸುವ ಜಾಗದಲ್ಲಿ ಕಟ್ಟೆ ಕಟ್ಟಿ ಕೆರೆಯನ್ನು ನಿರ್ಮಿಸಲಾಯಿತು.
ಇನ್ನು ಛತ್ರಕೆರೆಯನ್ನು ಕುಳುವಂಡ ಮನೆತನದವರು ಅಂದಿನ ಕಾಲಕ್ಕೆ ಆಗರ್ಭ ಶ್ರೀಮಂತರಾಗಿದ್ದು, ತೀರ್ಥರೂಪಿಣಿ ಕಾವೇರಿ ಸನ್ನಿಧಾನಕ್ಕೆ ದಕ್ಷಿಣ ಕೊಡಗಿನಿಂದ ಬರುವ ಜನರಿಗೆ ದಣಿವಾರಿಸಿಕೊಳ್ಳಲೆಂದು ಒಂದು ಛತ್ರವನ್ನು ನಿರ್ಮಿಸಿದರಂತೆ. ಆಗ ಬರುವ ಜನ ಮತ್ತು ಜಾನುವಾರುಗಳಿಗೆ ಜೀವಜಲದಂತೆ ದಣಿವಾರಿಸಿಕೊಳ್ಳಲು ಛತ್ರಕೆರೆಯನ್ನು ನಿರ್ಮಾಣ ಮಾಡಲಾಯಿತು. ಹಾಗಾಗಿ ಛತ್ರದ ಸಮೀಪವಿದ್ದ ಕಾರಣ ಇದನ್ನು ಛತ್ರಕೆರೆ ಎಂದು ಕರೆಯಲಾಯಿತು ಎನ್ನುವುದು ಪ್ರತೀತಿ. ನಿಂತಲ್ಲೇ ನೀರು ನಿಂತು ಪಾಚಿಗಟ್ಟಿವೆ, ಕೆರೆಯ ಅಚ್ಚುಕಟ್ಟು ಪ್ರದೇಶಗಳೆಲ್ಲಾ ಮನೆಗಳಾಗಿವೆ. ಯಾವ ಕೆರೆಯಲ್ಲಿ ನೀರು ಹರಿದು ಬರುವ ಜಾಗ ಕಾಣುವುದಿಲ್ಲ, ನೀರು ಹೊರಹೋಗುವ ವ್ಯವಸ್ಥೆಗಳು ಸಮರ್ಪಕವಾಗಿಲ್ಲ.
ಎಲ್ಲಾ ಕೆರೆಗಳು ಪಟ್ಟಣ ಪಂಚಾಯತಿ ಸುಪರ್ದಿಯಲ್ಲಿವೆ. ಗೌರಿಕೆರೆ ಮತ್ತು ಛತ್ರಕೆರೆ ಮಾತ್ರ ಕಾಲಾಂತರದಲ್ಲಿ ಅನೇಕರ ಹೋರಾಟದ ಫಲವಾಗಿ ಕೆರೆಯ ಸುತ್ತಲೂ ತಂತಿಯ ಹೊದಿಕೆ ಅಳವಡಿಸಲಾಗಿದೆ. ಆದರೆ, ವೀರಾಜಪೇಟೆಯ ಪ್ರಮುಖ ಕೆರೆಯಾದ ಛತ್ರಕೆರೆ ಇನ್ನೇನು ಸಾಯುವ ಕೊನೆ ಹಂತ ತಲುಪಿದೆ ಎಂದರೇ ತಪ್ಪಾಗಲಾರದು. ನಗರದ ಜನತೆ, ಪಟ್ಟಣ ಪಂಚಾಯತಿ ಒಟ್ಟಾಗಿ ಸೇರಿ ಈ ಕೆರೆಗಳಿಗೆ ಶುಭ ವಿದಾಯ ಹೇಳುವ ಘಳಿಗೆ ಈ ಛತ್ರಕೆರೆ ವಿಚಾರದಲ್ಲಿ ಅತ್ಯಂತ ಸನಿಹದಲ್ಲೇ ಬರಬಹುದು. ಕೆಲವೊಂದು ಕೆರೆಗಳ ಅಭಿವೃದ್ಧಿಗೆ ಯತ್ನಿಸಲಾಗಿದೆ. ಆದರೆ, ಆ ಯತ್ನ ದಿಕ್ಕು ತಪ್ಪಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ವೀರಾಜಪೇಟೆ ನಗರವು, ಕೇರಳ ಕಡೆಗೊಂದಷ್ಟು, ಮಡಿಕೇರಿ ಕಡೆಗೊಂದಿಷ್ಟು ಇತ್ತ ಗೋಣಿಕೊಪ್ಪ ಕಡೆಗೊಂದಷ್ಟು ಚಾಚುತ್ತ ಬೆಳೆಯುತ್ತಿದೆ. ನಡು ನಡುವೆ ಲೇಔಟ್ಗಳು, ನಗರಕ್ಕೆ ಹೊಂದಿಕೊAಡAತೆ ಅಯ್ಯಪ್ಪ ಹಾಗೂ ಮಲೆತಿರಿಕೆ ಬೆಟ್ಟಗಳು ಇವೆ. ಜೊತೆಗೆ ಸದ್ಯದಲ್ಲೆ ವೀರಾಜಪೇಟೆ ಪುರಸಭೆ ದರ್ಜೆಗೂ ಏರಲ್ಲಿದ್ದು ನಗರದ ವ್ಯಾಪ್ತಿ ಮತ್ತು ವಿಸ್ತೀರ್ಣ ಇನ್ನೂ ಹೆಚ್ಚಾಗಲಿದೆ.
ಸುತ್ತಲೂ ಫೆನ್ಸ್ ಅಳವಡಿಸಲಾಗಿದೆ. ಆ ಬೇಲಿ ನಿರ್ಮಿಸಿ ದಶಕÀ ಕಳೆದಿದೆ. ನೆಪಮಾತ್ರಕ್ಕೆ ಈ ಕೆರೆಯನ್ನು ಮೀನು ಸಾಕಾಣಿಕೆ ಮಾಡಲು ಖಾಸಗಿ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಆದರೆ ಈ ಪಾಳುಬಿದ್ದ ಸ್ಥಿತಿಯಲ್ಲಿರುವ ಕೆರೆಯಲ್ಲಿ ಮೀನುಗಳು ಎಷ್ಟರಮಟ್ಟಿಗೆ ಸಾಕಾಣಿಕೆ ಆಗುತ್ತಿದೆ ಎಂಬದು ಪ್ರಶ್ನೆಯಾಗಿದೆ.
ಕಣ್ಣೆದುರಿಗೆ ಇರುವ ಛತ್ರಕೆರೆ ನೀರನ್ನು ಎಷ್ಟು ಚೆನ್ನಾಗಿ ಪಟ್ಟಣ ಪಂಚಾಯತಿ ಬಳಕೆ ಮಾಡಬೇಕಿತ್ತು? ಆ ನೀರಿಗೆ ಭವಿಷ್ಯ ಮತ್ತು ವರ್ತಮಾನದಲ್ಲೂ ಎಷ್ಟು ಬೆಲೆಯಿದೆ. ಏಕೆಂದರೆ, ಸೇತುವೆ ಮೇಲೆ ಉಕ್ಕಿ ಹರಿವಷ್ಟು ನೀರು ಬೇತ್ರಿ ಹೊಳೆಯಲ್ಲಿದ್ದರೂ, ಅದು ಮಳೆಗಾಲದ ನಾಲ್ಕು ದಿನಕ್ಕೆ ಸೀಮಿತ, ಮಳೆ ಮುಗಿದ ಮೇಲೆ ಹೊಳೆಯ ಹರಿವು ಕ್ಷೀಣವಾಗುತ್ತದೆ. ಆಗ ನಗರಕ್ಕೆ ಪ್ರತಿನಿತ್ಯ ಬೇಕಾದ ೨೫ ಲಕ್ಷ ಲೀಟರ್ ಸರಬರಾಜು ಮಾಡಲು ಆಗುವುದಿಲ್ಲ. ಬಾವಿಗಳ ನೀರಿನ ಮಟ್ಟ ತುಂಬಬೇಕಾದರೆ, ಕೆರೆಗಳ ಆರೋಗ್ಯ ಚೆನ್ನಾಗಿರಬೇಕು.
ಹಾಗಾಗೀ ನಗರದ ಈ ಪ್ರಮುಖ ಕೆರೆಯನ್ನು ಸರಿಯಾಗಿ ನೋಡಿಕೊಂಡರೆ ನಗರದಲ್ಲಿರುವ ತೆರೆದ ಬಾವಿಗಳು, ಕೊಳವೆಬಾವಿಗಳು ನಿಶ್ಚಿತವಾಗಿ ನೀರಿನಿಂದ ತುಂಬಿಕೊಳ್ಳುತ್ತವೆ, ಬತ್ತುವುದಿಲ್ಲ ಎನ್ನುವುದು ಅಂರ್ತಜಲ ತಜ್ಞರ ಅಭಿಮತವಾಗಿದೆ.
ಆದರೆ, ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಕೆರೆಗಳ ಅಭಿವೃದ್ಧಿ ನಿರ್ಲಕ್ಷಿಸಿದಂತೆ ಕಾಣುತ್ತಿದೆ. ಛತ್ರಕೆರೆಯೇ ಕಾಣದಷ್ಟು ಎತ್ತರಕ್ಕೆ ಕಳೆಗಿಡಗಳು ಬೆಳೆದು, ನೀರೆಲ್ಲಾ ಪಾಚಿಮಯವಾಗಿದ್ದರೂ ಕೂಡಾ ಒಮ್ಮೆಯೂ ಈ ಕೆರೆಯ ಪಕ್ಕಕ್ಕೂ ಹೋಗಿ ನೋಡಿ ಬರುವುದಿಲ್ಲ. ಆದರಿಂದ ದಶಕಗಳ ಹಿಂದೆ ಅಂದಿನ ಅಧ್ಯಕ್ಷರ ಆಸಕ್ತಿಯಿಂದ ಸ್ವಲ್ಪಮಟ್ಟಿಗಿನ ಅಭಿವೃದ್ಧಿ ಕಂಡಿದ್ದೂ ಬಿಟ್ಟರೇ ಛತ್ರಕೆರೆ ಅಕ್ಷರಶಃ ಅಳಿವಿನ ಅಂಚಿಗೆ ಬಂದು ತಲುಪಿದೆ. ಕೆರೆಯ ಸುತ್ತಲೂ ಪಾರ್ಥೆನಿಯಂ ಪಾರ್ಕು ಬೆಳೆದಿದೆ.
ಛತ್ರಕೆರೆ ಮಡಿಕೇರಿ ಕಡೆಯಿಂದ ನಗರ ಪ್ರವೇಶಿಸುವಾಗ ಕಾಣಸಿಗುವುದರಿಂದ ನಗರದ ಜನತೆಗೆ ವಾಕಿಂಗ್ ಪಾಥ್, ಕೂರಲು ನಾಲ್ಕು ಕುರ್ಚಿ ಹಾಕಬಹುದು ಆದರೆ ಪಟ್ಟಣ ಪಂಚಾಯಿತಿಗೆ ಛತ್ರಕೆರೆಯ ಬಗ್ಗೆ ಯಾವ ಆಸಕ್ತಿಯೂ ಕಾಣುತ್ತಿಲ್ಲ. ಬಯಲುಸೀಮೆಯ ಕೆರೆಗಳನ್ನು ಜಲಪೂರಣ ಮಾಡಿ ಮರುಜೀವ ಕೊಡುವ ಕೆಲಸ ಮಾಡುತ್ತಿದ್ದರೇ ವೀರಾಜಪೇಟೆ ಪಟ್ಟಣ ಪಂಚಾಯಿತಿ ಮಾತ್ರ ಯಾವುದೇ ಅಭಿವೃದ್ಧಿಗೂ ಮುಂದಾಗದೆ ಮೀನಾಮೇಷ ಎಣಿಸುತ್ತಿದೆ. ವರ್ಷದಲ್ಲಿ ಒಮ್ಮೆ ಪಟ್ಟಣ ಪಂಚಾಯತಿ ಸಿಬ್ಬಂದಿಗಳಿಗೆ ಕೆರೆಗೆ ಕ್ಲೋರಿನ್ ಹಾಕುವುದನ್ನು ಹೊರತು ಪಡಿಸಿದರೆ, ಶುಚಿತ್ವಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ.
ನಗರದಲ್ಲಿರುವ ಸ್ಮಾರಕಗಳು, ಕೆರೆಗಳಂತ ಸಾರ್ವಜನಿಕ ಸ್ವತ್ತುಗಳ ಬಗ್ಗೆ ನಿಗಾವಹಿಸಬೇಕು. ಅವುಗಳ ಸಂರಕ್ಷಣೆ ಮಾಡಬೇಕಲ್ಲವೇ? ಪಟ್ಟಣ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಕೂಡಾ ತಮ್ಮ ವಾರ್ಡಿಗೆ ಸೇರಿದ ಕೆರೆ, ಬಾವಿಗಳ ಆರೋಗ್ಯ ಕಾಪಾಡಿಕೊಳ್ಳಬೇಕಾದ್ದು, ಅದಕ್ಕಾಗಿ ಪಟ್ಟಣ ಪಂಚಾಯಿತಿ ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಕೆರೆ ಇತಿಹಾಸ ಕಳೆದುಕೊಳ್ಳುವ ಮುನ್ನ ರಕ್ಷಣೆಗೆ ಧ್ವನಿ ಎತ್ತಬೇಕು.
ಪಕ್ಕದ ಮೈಸೂರಿನಲ್ಲಿ ಕುಕ್ಕರಹಳ್ಳಿ ಕೆರೆ ಹಬ್ಬ, ಕಾರಂಜಿ ಕೆರೆ ಹಬ್ಬ ಎಂದು ಮಾಡಿ ಆದಾಯವನ್ನು ಗಳಿಸಿ, ಜನರ ಮನಸನ್ನು ಗೆಲ್ಲುತ್ತಿದ್ದಾರೆ. ಪಕ್ಕದೂರಿನ್ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ ಕೆರೆಗಳನ್ನೆಲ್ಲಾ ಪುನರುಜ್ಜೀವನಗೊಳಿಸಲಾಗಿದೆ. ಆದರೆ ನಮ್ಮೂರಿನ್ನಲ್ಲಿ ರಾಜ ಕಟ್ಟಿಸಿದ ಕೆರೆಗಳಾಗಲಿ, ಸಾರ್ವಜನಿಕರ ಉಪಯೋಗಕ್ಕಾಗಿ ಒಂದು ಮನೆತನದವರು ಕಟ್ಟಿದ ಕೆರೆಯ ರಕ್ಷಣೆ ಬಗ್ಗೆ ಮುತುವರ್ಜಿ ವಹಿಸುವುದು ಅವಶ್ಯವಾಗಿದೆ. ಛತ್ರಕೆರೆಯ ಹಸಿರು ಪಾಚಿಯನ್ನು ಶುಚಿಗೊಳಿಸಿ ಕೆರೆಯ ಪರಿಸರದಲ್ಲಿರುವ ಬೇಡದ ಗಿಡಗಂಟಿ ತೆಗೆದು, ಛತ್ರಕೆರೆ ಉಳಿಸಿ ಎನ್ನುವುದು ಸಾರ್ವಜನಿಕರ ಪ್ರಜ್ಞಾಪೂರ್ವಕ ಆಗ್ರಹವಾಗಿದೆ. - ಉಷಾ ಪ್ರೀತಂ