*ಗೋಣಿಕೊಪ್ಪ, ಜು. ೫: ಕೇರಳ ರಾಜ್ಯದಲ್ಲಿ ಡೆಲ್ಟಾ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ನಿರ್ಲಕ್ಷ÷್ಯ ತಾಳಿದರೆ ಕೊಡಗಿಗೂ ಡೆಲ್ಟಾ ಪ್ರವೇಶವಾಗುವುದರಲ್ಲಿ ಅನುಮಾನವಿಲ್ಲ, ಅನಾಹುತವನ್ನು ತಪ್ಪಿಸಲು ಗಡಿಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಿ ಮುಂಜಾಗೃತಾ ಕ್ರಮ ಕೈಗೊಳ್ಳಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವೀರಾಜಪೇಟೆ ತಾಲೂಕು ಪಂಚಾಯಿತಿಯ ಪೊನ್ನಂಪೇಟೆ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ನಡೆದ ತಾಲೂಕು ಟಾಸ್‌ಫೋರ್ಸ್ ಸಭೆಯಲ್ಲಿ ಈ ವಿಚಾರ ಪ್ರಶ್ನಿಸಿದರು.

ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ನಿಭಾಯಿಸದೇ ಇದ್ದರೆ ಕೊರೊನ ಬಾಧೆಗೆ ಒಳಗಾಗಿ ಅನುಭವಿಸುತ್ತಿರುವ ಸಂಕಷ್ಟದ ಜತೆಗೆ ಡೆಲ್ಟಾ ಪ್ರಕರಣಗಳು ಜಿಲ್ಲೆಯನ್ನು ಹೈರಾಣಾಗಿಸುತ್ತದೆ. ಅನಾಹುತವನ್ನು ತಪ್ಪಿಸಲು ಮಾಕುಟ್ಟ, ಕರಿಕೆ ಗಡಿಗಳಲ್ಲಿ ತಪಾಸಣೆ ನಡೆಸಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಕ್ಷೀಣಿಸುತ್ತಿದ್ದರೂ, ಜಿಲ್ಲೆಯ ವರದಿಯನುಸಾರ ಸರ್ಕಾರ ಲಾಕ್‌ಡೌನ್ ಮುಂದುವರಿಕೆಗೆ ಸೂಚಿಸಿದೆ. ಅಧಿಕಾರಿಗಳ ಸಹಕಾರ, ಜನರ ನಿಯಮಪಾಲನೆ ಮತ್ತು ಜಾಗೃತಿಯಿಂದ ಜುಲೈ ೧೯ರವರೆಗೆ ನಿಗದಿಪಡಿಸಿರುವ ಲಾಕ್‌ಡೌನ್ ನಿಯಮವನ್ನು ಮುರಿಯಬಹುದಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗದಂತೆ ಕಾಳಜಿ ವಹಿಸಬೇಕಾಗಿದೆ. ಹೊರ ರಾಜ್ಯದಿಂದ ಮತ್ತು ಹೊರಜಿಲ್ಲೆಗಳಿಂದ ಬರುವ ಕಾರ್ಮಿಕರ ಬಗ್ಗೆ ಹೆಚ್ಚಿನ ಗಮನವಿಟ್ಟು ನಿಯಮಪಾಲನೆಗೆ ಮುಂದಾಗಬೇಕು. ಹೆಚ್ಚು ಪ್ರಕರಣಗಳಿರುವ ಪಂಚಾಯಿತಿಗಳು ಮತ್ತಷ್ಟು ಜಾಗೃತರಾಗಿ ಕಾರ್ಯನಿರ್ವಹಿಸಿದರೆ ಲಾಕ್‌ಡೌನ್ ಸಂಪೂರ್ಣ ತೆರವುಗೊಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಮುಂದಿನ ೧೯ರವರೆಗೆ ಲವಲವಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಟಾಟಾ ಎಸ್ಟೇಟ್‌ಗಳಲ್ಲಿ ಹೆಚ್ಚಿನ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದೆ. ಕಾರ್ಮಿಕ ಅಧಿಕಾರಿ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಅಸ್ಸಾಂ ಕಾರ್ಮಿಕರ ಪ್ರವೇಶದಿಂದಲೇ ಪ್ರಕರಣಗಳು ಹೆಚ್ಚಾಗಲು ಮುಖ್ಯ ಕಾರಣ. ಅಸ್ಸಾಂ ಕಾರ್ಮಿಕರನ್ನು ಜಿಲ್ಲೆಗೆ ಪ್ರವೇಶಿಸದಂತೆ ಮತ್ತು ಹೆಚ್.ಡಿ. ಕೋಟೆ, ಹುಣಸೂರು, ಪಿರಿಯಾಪಟ್ಟಣ ಭಾಗಗಳಿಂದ ಬರುವ ಕಾರ್ಮಿಕರ ತಡೆಗೆ ಪೊಲೀಸ್ ಇಲಾಖೆ ಕಠಿಣ ನಿಯಮ ಕೈಗೊಳ್ಳಬೇಕು. ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಿ ಜಿಲ್ಲೆಯನ್ನು ಕೊರೊನಾ ಮುಕ್ತವಾಗಿ ಮಾಡಲು ಶ್ರಮಿಸಬೇಕೆಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಶಾಸಕರು ತಿಳಿಸಿದರು.

ಕಾರ್ಮಿಕರು ಬರುವುದನ್ನು ಕಳೆದ ಒಂದು ತಿಂಗಳ ಹಿಂದೆಯೇ ತಡೆಹಿಡಿಯಲಾಗಿದೆ. ಹೊರ ರಾಜ್ಯ ಮತ್ತು ಜಿಲ್ಲೆಯಿಂದ ಬರುವವರ ಬಗ್ಗೆ ನಿಗಾ ಇಟ್ಟು ಕರ್ತವ್ಯ ಪಾಲನೆ ನಡೆಯುತ್ತಿದೆ ಎಂದು ಡಿ.ವೈ.ಎಸ್ಪಿ ಜಯಕುಮಾರ್ ಮಾಹಿತಿ ಒದಗಿಸಿದರು.

ತಾಲೂಕು ತಹಶೀಲ್ದಾರ್ ಯೋಗನಂದ ಅವರು ಕೇರಳದಿಂದ ಬರುವವರ ಬಗ್ಗೆ ಹೆಚ್ಚಿನ ನಿಗಾ ಇಡಬೇಕಾಗಿದೆ. ಗಡಿಪ್ರದೇಶದಲ್ಲಿ ಮೂರು ತಂಡಗಳನ್ನು ರಚಿಸಿ ಪ್ರತಿಯೊಬ್ಬರ ಕೊರೊನಾ ತಪಾಸಣೆ ನಡೆಸಬೇಕು. ಇದರಿಂದ ಡೆಲ್ಟಾ ಪ್ರಕರಣ ಮತ್ತು ಕೊರೊನಾ ಪ್ರಕರಣಗಳನ್ನು ಪತ್ತೆಹಚ್ಚಬಹುದಾಗಿದ್ದು, ಮತ್ತು ಹೊರ ರಾಜ್ಯದಿಂದ ಪ್ರವೇಶಿಸುವವರಿಂದ ಜಿಲ್ಲೆಗೆ ಹರಡುವ ರೋಗಬಾಧೆಯನ್ನು ತಡೆಗಟ್ಟಲು ಸಾಧ್ಯವಿದೆ. ಈ ಕಾರಣ ಗಡಿಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ನಡೆಸಿ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ತಾಲೂಕಿನ ಗ್ರಾಮ ಪಂಚಾಯಿಗಳಲ್ಲಿ ಅತಿ ಹೆಚ್ಚು ದೂರುಗಳು ದಾಖಲಾಗಿರುವುದು ಪಾಲಿಬೆಟ್ಟ ಪಂಚಾಯಿತಿಯಲ್ಲಿ. ನಿಯಮ ಮುರಿದು ಅವಧಿ ಮುಗಿದ ನಂತರವೂ ವ್ಯಾಪಾರ ನಡೆಸುತ್ತಿದ್ದಾರೆ. ಈ ಬಗ್ಗೆ ಮೂರು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೂ, ನಿಯಂತ್ರಣಕ್ಕೆ ಬಂದಿಲ್ಲ. ಪಿ.ಡಿ.ಓ ಅವರು ಈ ಬಗ್ಗೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕೆAದು ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಮಾಹಿತಿ ನೀಡಿ ತಾಲೂಕಿನಲ್ಲಿ ಇದುವರೆಗೆ ಸುಮಾರು ೮ ಸಾವಿರ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ನಿಧಾನವಾಗಿ ನಿಯಂತ್ರಣಕ್ಕೆ ಬಂದಿದೆ. ಸಕ್ರಿಯವಾಗಿ ೨೮೦ ಪ್ರಕರಣಗಳಷ್ಟೇ ತಾಲೂಕಿನಲ್ಲಿದೆ. ಜಿಲ್ಲೆಯನ್ನು ಹೋಲಿಸಿದಾಗ ವೀರಾಜಪೇಟೆ ತಾಲೂಕಿನಲ್ಲಿ ಶೇ. ೫ರಷ್ಟೇ ಪ್ರಕರಣಗಳು ಇವೆ. ಲಸಿಕೆ ಅಳವಡಿಕೆಯಲ್ಲಿಯೂ ವೀರಾಜಪೇಟೆ ತಾಲೂಕು ಪ್ರಥಮ ಸ್ಥಾನವನ್ನು ಹೊಂದಿದೆ. ಇದುವರೆಗೆ ೬೨ ಸಾವಿರ ಲಸಿಕೆ ನೀಡಿ ಶೇ. ೬೦ರಷ್ಟು ಪ್ರಗತಿ ಹೊಂದಿದೆ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕಿನ ನೂಡೆಲ್ ಅಧಿಕಾರಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಜರಿದ್ದರು. -ದಿನೇಶ್