ಸೋಮವಾರಪೇಟೆ, ಜು. ೫: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆನೆಕೆರೆ ಬಳಿಯಲ್ಲಿ ಸಿದ್ಧಗಂಗಾ ಶ್ರೀಗಳಾದ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸ್ ನಿಲ್ದಾಣ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಶ್ರೀ ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ವತಿಯಿಂದ ಸುಮಾರು ರೂ. ೪ ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಬಸ್ ನಿಲ್ದಾಣದ ಕಾಮಗಾರಿ ಆದಷ್ಟು ಶೀಘ್ರ ಪೂರ್ಣಗೊಳ್ಳುವಂತಾಗಲಿ ಎಂದು ಆಶಿಸಿದ ಶಾಸಕರು, ಬಸ್ ನಿಲ್ದಾಣಕ್ಕೆ ತನ್ನ ವೈಯಕ್ತಿಕ ಸಹಕಾರ ಒದಗಿಸುವುದಾಗಿ ಭರವಸೆ ನೀಡಿದರು.
ನಂತರ ಸಾಕ್ಷಿ ಕನ್ವೆನ್ಷನ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ ಲಕ್ಷಾಂತರ ಮಂದಿ ಇಂದು ಸಮಾಜದಲ್ಲಿ ಉತ್ತಮ ಜೀವನ ನಡೆಸುತ್ತಿದ್ದಾರೆ. ಮಠದ ಮೂಲಕ ಸಾಮಾಜಿಕ ಸೇವೆಗಳನ್ನು ನೆರವೇರಿಸಿದ್ದಾರೆ. ತ್ರಿವಿಧ ದಾಸೋಹಿಗಳಾಗಿ, ನಡೆದಾಡುವ ದೇವರಾಗಿ ಜನಜನಿತವಾಗಿದ್ದ ಶ್ರೀಗಳ ಸೇವೆ ಸದಾ ಸ್ಮರಣೀಯವಾಗಿದೆ ಎಂದು ಅಭಿಪ್ರಾಯಿಸಿದರು.
ಮಡಿಕೇರಿ-ಸೋಮವಾರಪೇಟೆ-ಶನಿವಾರಸಂತೆ-ಕೊಡ್ಲಿಪೇಟೆ ರಾಜ್ಯ ಹೆದ್ದಾರಿಯಲ್ಲಿರುವ ಆನೆಕೆರೆ ಬಳಿಯಲ್ಲಿ ಸಾರ್ವಜನಿಕರ ಬಸ್ ತಂಗುದಾಣ ನಿರ್ಮಿಸುವುದರಿಂದ ಸಾವಿರಾರು ಮಂದಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ವಿರಕ್ತ ಮಠದ ಮೋಕ್ಷಪತಿ ಸ್ವಾಮೀಜಿ, ಸಿಡಿಗಳಲೆ ಮಠಾಧೀಶರಾದ ಇಮ್ಮುಡಿ ಶಿವಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಮಾಜೀ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಲೂಕು ತಹಶೀಲ್ದಾರ್ ಗೋವಿಂದರಾಜು, ಪಟ್ಟಣ ಪಂಚಾಯಿತಿ ಪ್ರಭಾರ ಅಧ್ಯಕ್ಷ ಸಂಜೀವ, ಸದಸ್ಯೆ ಶೀಲಾ ಡಿಸೋಜ ಅವರುಗಳು ಉಪಸ್ಥಿತರಿದ್ದರು.
ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿಯ ಪ್ರಮುಖರಾದ ಎಸ್. ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಪದಾಧಿಕಾರಿಗಳಾದ ಶಿವಕುಮಾರ್, ಜಯಣ್ಣ, ಯೋಗೇಶ್, ಮಲ್ಲೇಶ್, ಶಿವರಾಜು ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.