ಕಣಿವೆ, ಜು. ೫: ಮಳೆಗಾಲ ಇರಬೇಕಿದ್ದ ಈ ದಿನಗಳಲ್ಲಿ ಬೇಸಗೆಯ ದಿನಗಳನ್ನು ಮೀರಿಸುವಂತಹ ಬಿರು ಬಿಸಿಲಿಗೆ ಜೋಳದ ಫಸಲು ಒಣಗುತ್ತಿದೆ. ಮಳೆ ಬಂದರೆ ಮಾತ್ರ ಕೃಷಿಕರು ಕೈಗೊಂಡಿರುವ ಜೋಳದ ಬೆಳೆ ಉಳಿಯುತ್ತದೆ. ಇಲ್ಲದಿದ್ದಲ್ಲಿ ಸಂಪೂರ್ಣ ಒಣಗುವ ಆತಂಕ ಎದುರಾಗಿದೆ.
ಈಗಾಗಲೇ ಅರೆ ನೀರಾವರಿ ಪ್ರದೇಶದಲ್ಲಿನ ರೈತರು ಕೈಗೊಂಡಿರುವ ಜೋಳದ ಬೆಳೆ ಶೇ. ೭೦ ರಷ್ಟು ನೀರಿಲ್ಲದೆ ಒಣಗುತ್ತಿದೆ. ಕೊರೊನಾ ಸಂಕಷ್ಟವನ್ನು ಎದುರಿಸುತ್ತಿರುವ ಕೃಷಿಕರು ಈ ಬಾರಿ ಕೈಗೊಂಡ ಎರಡನೇ ಜೋಳದ ಬಿತ್ತನೆಯೂ ಕೂಡ ಮಳೆಯಿಲ್ಲದೇ ಹೀಗೆ ಒಣಗಿದರೆ ಮುಂದೆ ರೈತ ಹಾಗೂ ರೈತ ಕುಟುಂಬಗಳ ಗತಿ ಏನು ಎಂಬAತಾಗಿದೆ.
ಜೂನ್ ಮೊದಲ ವಾರದಲ್ಲಿ ಅಂದು ಸುರಿದ ಉತ್ತಮ ಮಳೆಗೆ ಬಹುಪಾಲು ರೈತರು ಜೋಳದ ಬಿತ್ತನೆ ಕೈಗೊಂಡಿದ್ದರು. ಆದರೆ ಜೂನ್ ಎರಡನೇ ವಾರದಲ್ಲಿ ಮತ್ತೆ ಮಳೆ ಕೈಕೊಟ್ಟ ಕಾರಣ ರೈತರು ಬಿತ್ತಿದ್ದ ಜೋಳ ಮೊಳಕೆಯೊಡೆದು ಮೇಲೆ ಬರುವ ಮುನ್ನವೇ ಒಣಗಿತ್ತು. ಹಾಗಾಗಿ ಜೂನ್ ಮೂರನೇ ವಾರದಲ್ಲಿ ಬಿದ್ದ ಒಂದಷ್ಟು ಮಳೆಯನ್ನು ನಂಬಿದ ರೈತರು, ಮಳೆಗಾಲ ಆರಂಭವಾದ ಖುಷಿಯಲ್ಲಿ ಕೆಲವರು ಎರಡನೇ ಬಾರಿಗೆ ಜೋಳ ಬಿತ್ತನೆ ಮಾಡಿದ್ದರು.
ಆದರೆ ಗ್ರಹಚಾರವೋ ಏನೋ ಈ ಬಾರಿ ಮಳೆ ಸುರಿಯುವ ಲಕ್ಷಣವೇ ಗೋಚರಿಸುತ್ತಿಲ್ಲ ಎಂದು ತೊರೆನೂರು ಕೃಷಿಕ ಶಿವಪುತ್ರಪ್ಪ ಹಾಗೂ ಪ್ರದೀಪ್ ಹೇಳುತ್ತಾರೆ. ಮಳೆಯನ್ನು ನಂಬಿ ದುಪ್ಪಟ್ಟಾಗಿರುವ ಕೂಲಿಯಲ್ಲಿ ಎರಡೆರಡು ಬಾರಿ ಜೋಳದ ಬಿತ್ತನೆ ಮಾಡ್ತಾ ಕೂತರೆ ಸಾಲ ಸೋಲ ಮಾಡಿ ಹಣ ತಂದು ನಾವು ಬೆಳೆಯೋದಾದ್ರೂ ಏನು ಸರ್ ಎಂದು ಯುವ ರೈತ ಮಣಜೂರಿನ ಕುಮಾರ್ ಹಾಗೂ ಪ್ರದೀಪ್ ಹೇಳುತ್ತಾರೆ.
ರೈತರಾದ ನಾವು ಏನಾದರೂ ತರಕಾರಿ, ಕಾಯಿ ಪಲ್ಯೆಗಳು, ಗೆಡ್ಡೆ ಗೆಣಸುಗಳನ್ನು ಬೆಳೆದರೆ ಬೆಲೆಯೇ ಸಿಗುವುದಿಲ್ಲ. ಬೆಲೆ ಇರುವಾಗ ಬೆಳೆ ಇರೋದಿಲ್ಲ. ಏನು ಮಾಡೋದು ಸರ್ ರೈತರ ಗ್ರಹಚಾರ ಎನ್ನುವ ಇವರು ಈ ಬಾರಿ ಮಳೆಗಾಲದ ಸದ್ದೂ ಇಲ್ಲ ಸುದ್ದಿಯೂ ಇಲ್ಲ. ಹವಾಮಾನ ಇಲಾಖೆಯ ವರದಿಗಳನ್ನು ಹಾಗೂ ಮಾಹಿತಿಗಳನ್ನು ನಂಬಿ ನಾವು ಬೆಳೆ ಬೆಳೆದರೆ ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿಯಬೇಕಾಗುತ್ತದೆ ಎಂದು ಶಿವಪುತ್ರಪ್ಪ ವಿಷಾದಿಸುತ್ತಾರೆ. ಒಟ್ಟಾರೆ ಮಳೆಯಿಲ್ಲದೇ ಬಿಸಿಲ ತಾಪಕೆ ಕೃಷವಾಗುತ್ತಿರುವ ಕೃಷಿಕರ ಬದುಕನ್ನು ಆ ಕೃಷ್ಣ ಪರಮಾತ್ಮನೇ ಕಾಯಬೇಕು ಅಷ್ಟೇ.
- ಕೆ.ಎಸ್. ಮೂರ್ತಿ