ಮುಳ್ಳೂರು, ಜು. ೪: ಕೊಡಗಿಗೆ ಆಗಮಿಸುತ್ತಿರುವ ಹೊರ ಜಿಲ್ಲೆಯವರನ್ನು ಕೊಡಗು-ಹಾಸನ ಜಿಲ್ಲಾ ಗಡಿಭಾಗ ನಿಲುವಾಗಿಲು ಮತ್ತು ಹಿಪ್ಪಲಿ ಗೇಟ್ನಲ್ಲಿ ಕಂದಾಯ ಅಧಿಕಾರಿಗಳು ತಪಾಸಣೆ ನಡೆಸಿ ವಾಪಾಸು ಕಳುಹಿಸಿದರು.
ಕೊಡಗು ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೋವಿಡ್ ನಿಯಂತ್ರಣಗೊಳಿಸಲು ಮುಂಜಾಗ್ರತೆ ಕ್ರಮವಾಗಿ ಲಾಕ್ಡೌನ್ ಕ್ರಮವನ್ನು ತೆರವುಗೊಳಿಸಿಲ್ಲ ಹಾಗೂ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬರುವುದನ್ನು ನಿಷೇಧಿಸಿದೆ. ಆದರೂ ಹೊರಜಿಲ್ಲೆಯಿಂದ ಬರುವ ಪ್ರವಾಸಿಗರು ತಪಾಸಣೆ ಗೇಟ್ನಲ್ಲಿ ಸಿಬ್ಬಂದಿಗಳ ಕಣ್ತಪ್ಪಿಸಿ ಮತ್ತೊಂದು ಅಡ್ಡದಾರಿಯ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುತ್ತಿದ್ದಾರೆ.
ಕೊಡಗು-ಹಾಸನ ಜಿಲ್ಲೆಯ ಗಡಿಭಾಗದ ಮೂಲಕ ಜಿಲ್ಲೆಯ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತ ನೋಡಲು ಪ್ರವಾಸಿಗರು ಆಗಮಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ಗಡಿಭಾಗ ನಿಲುವಾಗಿಲು ಮತ್ತು ಹಿಪ್ಪಲಿ ಗೇಟ್ನಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿ ಮತ್ತು ಕೊಡ್ಲಿಪೇಟೆ ಉಪ ತಹಶೀಲ್ದಾರ್ ಪುರುಷೋತ್ತಮ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಾರು, ಜೀಪು, ಟ್ಯಾಕ್ಸಿ, ಬೈಕ್ ಮುಂತಾದ ವಾಹನಗಳಲ್ಲಿ ಸಾಲುಸಾಲಾಗಿ ಜಿಲ್ಲೆಗೆ ಪ್ರವೇಶಿಸುತ್ತಿದ್ದ ಪ್ರವಾಸಿಗರ ವಾಹನಗಳನ್ನು ತಡೆದು ವಾಪಾಸ್ ಕಳಿಸುತ್ತಿದ್ದಾರೆ. ಇದೇ ವೇಳೆ ತಪಾಸಣೆ ಗೇಟ್ನಲ್ಲಿ ಹೊರ ಜಿಲ್ಲೆಯಲ್ಲಿದ್ದು ನಮ್ಮ ಜಿಲ್ಲೆಗೆ ಬರುತ್ತಿರುವವರ ಕೈಗೆ ಸೀಲ್ ಹಾಕಿದ ನಂತರ ೧೪ ದಿನ ಮನೆಯಲ್ಲಿ ಕಡ್ಡಾಯವಾಗಿ ಕ್ವಾರಂಟೈನ್ ಆಗುವಂತೆ ಸೂಚಿಸಿ ಜಿಲ್ಲೆಗೆ ಬರಲು ಅವಕಾಶ ನೀಡಿದರು.
ತಪಾಸಣೆ ಗೇಟ್ನಲ್ಲಿ ಅಧಿಕಾರಿಗಳು ಸರಕಾರದ ನಿಯಮ ಮಾರ್ಗಸೂಚಿ ಪಾಲಿಸದೆ ಸಂಚರಿಸುತ್ತಿರುವ ಬಸ್ಗಳನ್ನು ತಡೆದು ಪರಿಶೀಲನೆ ನಡೆಸಿ ನಿಯಮ ಪಾಲಿಸದ ಸಿಬ್ಬಂದಿಗೆ ಮತ್ತು ಪ್ರಯಾಣಿಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.
-ಭಾಸ್ಕರ್ ಮುಳ್ಳೂರು