ಮಡಿಕೇರಿ, ಜು. ೪: ಭೌಗೋಳಿಕವಾಗಿ ವಿಭಿನ್ನವಾಗಿದ್ದು, ಗುಡ್ಡಗಾಡು ಪ್ರದೇಶ, ಸುತ್ತಮುತ್ತಲೂ ಅರಣ್ಯ ಪ್ರದೇಶಗಳು, ಕಾಫಿ ತೋಟ, ದೇವರಕಾಡು, ಜಮ್ಮಾಮಲೆಗಳು ಸೇರಿದಂತೆ ಪ್ರಾಕೃತಿಕ ಐಸಿರಿಯ ನಡುವೆ ಇರುವ ರಾಜ್ಯದಲ್ಲಿಯೇ ಪುಟ್ಟದಾಗಿರುವ ಕೊಡಗು ಜಿಲ್ಲೆಯ ಜನವಸತಿ ಪ್ರದೇಶಗಳು ಇತ್ತೀಚಿನ ದಿನಗಳಲ್ಲಿ ಗಜಪಡೆಗಳು ಸೇರಿದಂತೆ ವನ್ಯಪ್ರಾಣಿಗಳ ಆವಾಸ ಸ್ಥಾನವಾಗುತ್ತಿರುವ ಗಂಭೀರ ಪರಿಸ್ಥಿತಿ ಎದುರಾಗುತ್ತಿದೆ.
ಇಡೀ ಕೊಡಗು ಜಿಲ್ಲೆಯಾದ್ಯಂತ ಮಾನವ - ವನ್ಯಜೀವಿಗಳ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಕೇವಲ ಅರಣ್ಯ ಪ್ರದೇಶ ಅಥವಾ ಅರಣ್ಯದಂಚಿನ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತಿಲ್ಲ. ಬದಲಾಗಿ ನಗರ - ಪಟ್ಟಣ ಪ್ರದೇಶಗಳು, ಮುಖ್ಯ ರಸ್ತೆಗಳು ಸೇರಿದಂತೆ ಜನವಸತಿ ಇರುವ ಜಾಗ, ಕಂದಾಯ ಗ್ರಾಮಗಳಲ್ಲಿ ಕೂಡ ಅಧಿಕವಾಗುತ್ತಿದೆ. ಕೇವಲ ಆನೆಗಳು ಮಾತ್ರವಲ್ಲ ಬಹುತೇಕ ಹಲವಾರು ಬಗೆಯ ಪ್ರಾಣಿಗಳು ನಾಡಿಗೆ ಲಗ್ಗೆಯಿಡುತ್ತಿದ್ದು, ಈ ಗಂಭೀರತೆಯ ಬಗ್ಗೆ ತ್ವರಿತವಾಗಿ ರಾಜ್ಯ - ಕೇಂದ್ರ ಸರಕಾರಗಳು ತುರ್ತು ಗಮನ ಹರಿಸದಿದ್ದಲ್ಲಿ ಭವಿಷ್ಯದಲ್ಲಿ ಕೊಡಗಿನ ಜನರು ಭಾರೀ ಎನ್ನಬಹುದಾದ ಅಪಾಯವನ್ನು ಎದುರಿಸಬೇಕಾಗಲಿದೆ. ಈಗಾಗಲೇ ಪರಿಸ್ಥಿತಿ ಕೈಮೀರಿದ್ದರೂ ಈ ಬಗ್ಗೆ ಯಾರೂ ಗಂಭೀರ ಚಿಂತನೆ ಮಾಡದಿರುವದು ವಿಷಾದಕರವಾಗಿದೆ. ದಿನಂಪ್ರತಿ ವಿವಿಧ ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತಲೇ ಬರುತ್ತಿರುವದು ಸಾಮಾನ್ಯವಾಗಿದೆ.
ಕೇವಲ ಒಂದು - ಎರಡು - ನಾಲ್ಕೆöÊದು ಆನೆಗಳಲ್ಲ ಹಿಂಡು... ಹಿಂಡಾಗಿ ಕಾಣಿಸಿಕೊಳ್ಳುತ್ತಿರುವ ಆನೆಗಳ ಸಂಖ್ಯೆ, ಅಲ್ಲಲ್ಲಿ ಬರೋಬ್ಬರಿ ೨೦-೩೦ ರಷ್ಟಕ್ಕೆ ತಲುಪಿದೆ. ಈ ಗಜಪಡೆಗಳು ಇದೀಗ ಎಲ್ಲೆಂದರಲ್ಲಿ ಅಲ್ಲಿ ತಿರುಗಾಡುತ್ತಿವೆ. ಇಂತಹ ಹಲವಷ್ಟು ಗುಂಪುಗಳು ಜಿಲ್ಲೆಯಾದ್ಯಂತ ಇವೆ. ವಿವಿಧ ಅರಣ್ಯ ವಲಯಗಳ ಸುತ್ತಮುತ್ತಲೆಲ್ಲವೂ
(ಮೊದಲ ಪುಟದಿಂದ) ಆನೆಗಳ ಹಿಂಡೇ ಕಂಡು ಬರುತ್ತಿವೆ. ಇವುಗಳಿಗೆ ಕಾಫಿತೋಟ, ಅರಣ್ಯ, ಮುಖ್ಯರಸ್ತೆಗಳು ಎಂಬAತಹ ಪರಿವೆಯೇ ಇಲ್ಲ. ಬದಲಿಗೆ ಎಲ್ಲಾ ಜನವಸತಿ ಪ್ರದೇಶಗಳೇ ಆವಾಸ ಸ್ಥಾನವಾಗಿ ಮಾರ್ಪಡುತ್ತಿದೆ. ಆನೆ ದಾಳಿಯಿಂದಾಗಿ ಕೃಷಿ ಪ್ರಧಾನವಾಗಿರುವ ಕೊಡಗು ಜಿಲ್ಲೆಯ ರೈತರು - ಬೆಳೆಗಾರರು ತಮ್ಮ ಕೃಷಿ ಫಸಲನ್ನು ಕಳೆದುಕೊಳ್ಳುತ್ತಿರುವದು ಒಂದೆಡೆಯಾದರೆ, ಹಲವಾರು ಮಾನವ ಪ್ರಾಣಹಾನಿಗಳು, ಶಾಶ್ವತವಾದ ಅಂಗವೈಕಲ್ಯತೆಯAತಹ ಪ್ರಕರಣಗಳು ಅಧಿಕವಾಗುತ್ತಿವೆ.
ಕೇವಲ ಆನೆಗಳು ಮಾತ್ರವಲ್ಲ
ಜಿಲ್ಲೆಯಲ್ಲಿ ಕೇವಲ ಆನೆಗಳ ಉಪಟಳವನ್ನು ಮಾತ್ರ ಜನತೆ ಎದುರಿಸುತ್ತಿಲ್ಲ. ಇದರೊಂದಿಗೆ ಕಾಡೆಮ್ಮೆ, ಕಡವೆ, ಹುಲಿಗಳು, ಚಿರತೆ, ಕಾಡುಹಂದಿಗಳು, ಕರಡಿ, ಮಂಗಗಳು, ಕೆನ್ನಾಯಿಗಳು ಅಲ್ಲಲ್ಲಿ ಹರಿದಾಡುವ ಹಾವುಗಳು, ನವಿಲುಗಳು ಈ ರೀತಿಯಾಗಿ ಬಗೆ ಬಗೆಯ ಪ್ರಾಣಿಗಳು ಪ್ರಸ್ತುತ ನಾಡಿನತ್ತ ಲಗ್ಗೆಯಿಡುತ್ತಿವೆ.
ಒಂದು ಅಂದಾಜಿನ ಪ್ರಕಾರ ಜಿಲ್ಲೆಯಾದ್ಯಂತ ಪ್ರಸ್ತುತ ಸುಮಾರು ಐನೂರಕ್ಕೂ ಅಧಿಕ ಆನೆಗಳು ಸಂಚರಿಸುತ್ತಿವೆ ಎನ್ನಲಾಗಿದೆ. ಕೊಡಗು ಜಿಲ್ಲೆ ಸುತ್ತಲೂ ಅರಣ್ಯ ಪ್ರದೇಶ, ಬೆಟ್ಟಗುಡ್ಡಗಳಿಂದ ಆವೃತ್ತವಾಗಿದೆ. ಆದರೆ ಪ್ರಾಣಿಗಳಿಗೆ ಸಾಕಷ್ಟು ಅರಣ್ಯ ಪ್ರದೇಶಗಳಿದ್ದರೂ ಸೂಕ್ತ ಆಹಾರ ದೊರೆಯದೆ ರೈತರ ಕೃಷಿ ಫಸಲುಗಳು, ತೋಟ - ಗದ್ದೆಗಳಲ್ಲಿನ ಮಾವು, ಹಲಸು - ಬಾಳೆ - ಅಡಿಕೆ ಭತ್ತ ಇತ್ಯಾದಿಗಳನ್ನು ಅರಸಿಕೊಂಡು ಬರುತ್ತಿವೆ.
ಒಮ್ಮೆ ನಾಡಿನೊಳಗೆ ಬಂದ ಆನೆಗಳು ಸೇರಿದಂತೆ ಇತರ ಪ್ರಾಣಿಗಳು ಮತ್ತೆ ಅರಣ್ಯ ಪ್ರದೇಶಕ್ಕೆ ಮರಳದಿರುವಂತಹ ಪ್ರಸಂಗ ಇದೀಗ ಕಂಡು ಬರುತ್ತಿವೆ. ಇವುಗಳನ್ನು ಮರಳಿ ಕಾಡಿಗಟ್ಟಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗುತ್ತಿಲ್ಲ. ಬದಲಿಗೆ ಒಂದೆಡೆಯಿAದ ಮತ್ತೊಂದೆಡೆಗೆ ನುಗ್ಗುತ್ತಿವೆಯೇ ಹೊರತು ಅರಣ್ಯ ಸೇರುತ್ತಿಲ್ಲ. ಈ ವಿಚಾರದಲ್ಲಿ ಅರಣ್ಯ ಇಲಾಖೆ ಹಾಗೂ ಜಿಲ್ಲೆಯ ಅರಣ್ಯ ಸಿಬ್ಬಂದಿಗಳು ಕೂಡ ಹತಾಶರಾಗಿರುವಂತಾಗಿದೆ. ಸದ್ಯದ ಮಟ್ಟಿಗೆ ಇದಕ್ಕೆ ಯಾವುದೇ ರೀತಿಯ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಪರಿಸ್ಥಿತಿ ಜಿಲ್ಲೆಯಲ್ಲಿ ಇಲ್ಲ ಎಂಬAತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅರಣ್ಯ ರಕ್ಷಣೆ - ವನ್ಯಜೀವಿಗಳ ಪೋಷಣೆಗೆಂದು ಸರಕಾರಗಳಿಂದ ವಿವಿಧ ಕಠಿಣ ಕಾನೂನುಗಳು, ಕೋಟ್ಯಂತರ ಹಣವನ್ನು ವ್ಯಯ ಮಾಡಲಾಗುತ್ತಿದೆ. ಆದರೆ ಈ ವನ್ಯಪ್ರಾಣಿಗಳನ್ನು ಅರಣ್ಯ ಪ್ರದೇಶದೊಳಗೇ ಉಳಿಸಿಕೊಂಡು ರಕ್ಷಣೆ - ಪೋಷಣೆ ಮಾಡಲು ಏತಕ್ಕೆ ಸಾಧ್ಯವಾಗುತ್ತಿಲ್ಲ ಎಂಬದು ಜನಸಾಮಾನ್ಯರ ಪ್ರಶ್ನೆಯಾಗಿದೆ. ಇಲ್ಲಿ ಜನರಿಂದಲೂ ಹಲವು ತಪ್ಪುಗಳು ಉಂಟಾಗಿದ್ದು, ಇದನ್ನು ಕೂಡ ಜನತೆ ಸರಿಪಡಿಸಿಕೊಳ್ಳುವದೂ ಈಗಿನ ಅನಿವಾರ್ಯತೆಯಾಗಿದೆ ಎಂಬ ಮಾತೂ ಇದೆ (ಅರಣ್ಯಗಳ ಮೇಲಿನ ಅತಿಕ್ರಮಣ, ಇತ್ಯಾದಿ)
ಸರಕಾರವೇ ಮುಂದೆ ಬರಬೇಕು
ಸದ್ಯದ ಪರಿಸ್ಥಿತಿಯಲ್ಲಿ ಮಾನವ - ವನ್ಯಜೀವಿ ಸಂಘರ್ಷ ತಡೆಗೆ ಜನಪ್ರತಿನಿಧಿಗಳು ಭಾರೀ ಒತ್ತಡ ಹೇರಬೇಕಿದೆ. ರಾಜ್ಯ - ಕೇಂದ್ರ ಸರಕಾರಗಳು, ಇಲಾಖೆಯ ಉನ್ನತಾಧಿಕಾರಿಗಳು ಪರಿಸರ ಪ್ರೇಮಿಗಳು ಕೂಡ ಈಗಿನ ಗಂಭೀರತೆಯನ್ನು ಅರಿತು ಇದಕ್ಕೆ ಶಾಶ್ವತವಾದ ಪರಿಹಾರವನ್ನು ಕಂಡು ಹಿಡಿಯಲೇಬೇಕಿದೆ. ಇದು ಇಂದು ನಿನ್ನೆಯ ಸಮಸ್ಯೆಯಾಗಿಲ್ಲ. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಹೆಚ್ಚಾಗುತ್ತಿದ್ದರೂ ಈ ನಿಟ್ಟಿನಲ್ಲಿ ಯಾರೂ ಗಂಭೀರ ಚಿಂತನೆ ನಡೆಸದಿರುವದು, ಜನತೆ ಕೂಡ ಪರಿಣಾಮಕಾರಿಯಾದ ಹೋರಾಟಗಳಿಗೆ ಮುಂದಾಗದಿರುವದರಿAದ ಸಮಸ್ಯೆ ಮತ್ತಷ್ಟು ಉಲ್ಭಣವಾಗುತ್ತಲೇ ಹೋಗುತ್ತಿದೆ. ಬಹುತೇಕ ಕೃಷಿಯೇ ಮಲೆನಾಡು ಪ್ರದೇಶವಾಗಿರುವ ಕೊಡಗಿನ ಜನತೆಯ ಜೀವನಾಧಾರಿತವಾಗಿದ್ದು, ಸೂಕ್ತ ರಕ್ಷಣೆ ಇಲ್ಲವಾದಲ್ಲಿ ಜನತೆಯ ಬದುಕೇ ಅಲ್ಲೋಲ - ಕಲ್ಲೋಲವಾಗಲಿದ್ದು, ತ್ವರಿತವಾಗಿ ಈ ವಿಚಾರದಲ್ಲಿ ಉನ್ನತಮಟ್ಟದ ಯೋಜನೆ ರೂಪಿತವಾಗಬೇಕಿದೆ.