ಕೊರೊನಾ ೩ನೇ ಅಲೆ
ಕೊರೊನಾ ೩ನೇ ಅಲೆಯಿಂದ ಮಕ್ಕಳಿಗೆ ಹೆಚ್ಚು ಸೋಂಕು ವ್ಯಾಪಿಸುತ್ತದೆ ಎಂದು ತಜ್ಞರು ತಿಳಿಸಿರುತ್ತಾರೆ. ಇದರಿಂದ ‘ಮಾನಸಿಕ ಭಿನ್ನ ಸಾಮರ್ಥ್ಯವುಳ್ಳ ಮಕ್ಕಳು’ ಎಚ್ಚರಿಕೆಯನ್ನು ವಹಿಸುವುದು ಅಗತ್ಯ.
ರೋಗ ಲಕ್ಷಣಗಳು: ಜ್ವರ, ಕೆಮ್ಮು, ಗಂಟಲು ನೋವು, ವಾಂತಿ, ಭೇದಿ, ಮೈಕೈ ನೋವು, ತಲೆ ನೋವು, ಉಸಿರಾಡುವಾಗ ತೊಂದರೆ, ವಾಸನೆ ನಷ್ಟ, ರುಚಿಕೆಟ್ಟು ಹೋಗಿರುವುದು, ಕಡಿಮೆ ಚಟುವಟಿಕೆಯಿಂದ ಕೂಡಿರುವುದು ಇತ್ಯಾದಿ ಲಕ್ಷಣಗಳಿರುತ್ತದೆ. ಪೋಷಕರು ಹೆಚ್ಚು ನಿಗಾವಹಿಸಬೇಕಾಗುತ್ತದೆ. ಈ ಲಕ್ಷಣಗಳು ಕಂಡು ಬಂದರೆ ವೈದ್ಯರ ಬಳಿ ಪರೀಕ್ಷೆ ಮಾಡಿಸಬೇಕಾಗುತ್ತದೆ. ಮಾನಸಿಕ ಭಿನ್ನ ಸಾಮರ್ಥ್ಯವುಳ್ಳ ಮಕ್ಕಳನ್ನು ನೋಡಿಕೊಳ್ಳುವುದು (ಆರೈಕೆ ಮಾಡುವುದು) ಪೋಷಕರಿಗೆ ಒಂದು ಸವಾಲು ಮತ್ತು ಯಾವುದೇ ಕಾರಣಕ್ಕೂ ಮಾನಸಿಕವಾಗಿ ಕುಗ್ಗಬಾರದು.
ಮಕ್ಕಳಿಗೆ ಸೋಂಕು ತಗುಲಿದರೆ ಅವರನ್ನು ಒಂಟಿಯಾಗಿ ಆಸ್ಪತ್ರೆಗೆ ಬಿಡಲು ಆಗುವುದಿಲ್ಲ. ಪೋಷಕರಲ್ಲಿ ಒಬ್ಬರು ತಾಯಿ-ತಂದೆ ಇರಬೇಕಾಗುತ್ತದೆ. ಆದುದ್ದರಿಂದ ಎಚ್ಚರ ವಹಿಸಿಕೊಳ್ಳಬೇಕಾಗಿರುತ್ತದೆ. ಪೋಷಕರು ಸರಿಯಾಗಿ ಕೊರೊನಾದ ಬಗ್ಗೆ ತಿಳಿದಿರಬೇಕಾಗುತ್ತದೆ.
ಪಾಲಿಸಬೇಕಾದ ನಿಯಮಗಳು-ಮುನ್ನೆಚ್ಚರಿಕೆ ಕ್ರಮಗಳು
ಸಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ ಇವುಗಳು ಅತೀ ಮುಖ್ಯವಾಗಿರುತ್ತದೆ.
ಮಾಸ್ಕ್: ಮಾಸ್ಕ್ ಧರಿಸುವುದು ಅತೀ ಅಗತ್ಯ. ಕೆಲವು ಮಕ್ಕಳಿಗೆ ಮಾಸ್ಕ್ ಧರಿಸುವುದು ಕಷ್ಟ. ಆದರೆ ಅದನ್ನು ಅಭ್ಯಾಸ ಮಾಡಿಸಬೇಕಾಗುತ್ತದೆ. ಕೆಲವು ಅತೀ ತೀವ್ರ ಆಟಿಸಂ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಕಿಸಲು ಕಷ್ಟ. ಅದೇ ರೀತಿಯಲ್ಲಿ ಕೆಲವು ಸಮಸ್ಯಾತ್ಮಕ ನಡವಳಿಕೆಯುಳ್ಳ ಕೆಲ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಕಿಸುವುದು ತುಂಬಾ ಕಷ್ಟವಾಗುತ್ತದೆ.
ಮನೆಯಲ್ಲಿರುವಾಗ ಮಕ್ಕಳಿಗೆ ಮಸ್ಕ್ ಹಾಕಿಸುವ ಅವಶ್ಯಕತೆ ಇರುವುದಿಲ್ಲ, ಹೊರಗಡೆ ಹೋಗುವಾಗ ಮಸ್ಕ್ ಧರಿಸಬೇಕಾಗುತ್ತದೆ. ಆದಷ್ಟು ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗುವುದು ಬೇಡ, ಮಾಸ್ಕ್ನ್ನು ಮೂಗು, ಬಾಯಿ ಮುಚ್ಚುವಂತೆ ಧರಿಸಬೇಕು ಹೊರತು ಗಲ್ಲಕ್ಕೆ ಅಲ್ಲ.
ಆರೋಗ್ಯ ಸರಿ ಇಲ್ಲದಿದ್ದರೆ ವೈದ್ಯರಿಗೆ ಫೋನ್ ಮಾಡಿ ವಿಚಾರಿಸಿಕೊಳ್ಳಿ. ಅಗತ್ಯ ಇದ್ರೆ ಮಾತ್ರ ಹೋಗಿ. ಪೋಷಕರಿಗೆ ರೋಗ ಲಕ್ಷಣಗಳಿದ್ದರೆ ಮನೆಯಲ್ಲಿ ಮಾಸ್ಕ್ ಧರಿಸಿ, ಮಕ್ಕಳೊಂದಿಗೆ ಬೆರೆಯಬೇಡಿ. ಹೋಮ್ಐಸೋಲೇಷನ್ ಆಗಿರಬೇಕಾಗಿರುತ್ತದೆ. ಪೋಷಕರು ಅಗತ್ಯ ವಸ್ತುಗಳನ್ನು ತರಲು ಹೊರಗಡೆ ಹೋದಾಗ, ಮನೆಗೆ ಬಂದಾಗ ತಕ್ಷಣ ಸ್ನಾನ ಮಾಡಿ, ಹಾಕಿದ ಉಡುಪು ಬದಲಿಸಿ ನಂತರ ಮನೆ ಒಳಗೆ ಪ್ರವೇಶಿಸಬೇಕು. ಕೆಲಸಕ್ಕೆ ಹೋಗುವಾಗಲೂ ಕೂಡ ಮನೆಗೆ ಬಂದಾಗ ಸ್ನಾನ ಮಾಡಿ ನಂತರ ಮನೆಯೊಳಗೆ ಹೋಗಿ ಈ ನಿಯಮವನ್ನು ತಪ್ಪದೇ ಪಾಲಿಸಬೇಕಾಗುತ್ತದೆ.
ಸ್ಯಾನಿಟೈಸರ್: ಮಕ್ಕಳಿಗೆ ಸೋಪಿನಿಂದ ಚೆನ್ನಾಗಿ ಕೈ ತೊಳೆಯಲು ಕಲಿಸಬೇಕು. ಕೈ ಶುಚಿಗೊಳಿಸುವುದೆಂದರೆ ಸುಮ್ಮನೆ ನೀರು ಹಾಕಿ ಹಾಗೇ ಬಂದು ಬಿಡುತ್ತಾರೆ. ಅವರಿಗೆ ಸರಿಯಾಗಿ ಸಾಬೂನು ಹಾಕಿ ಹಂತ ಹಂತವಾಗಿ ಸರಿಯಾಗಿ ಉಜ್ಜಿ ಕೈ ತೊಳೆಯಲು ಕಲಿಸಬೇಕಾಗುತ್ತದೆ. ಸಾಬೂನು ಹಾಗೂ ನೀರು ಇಲ್ಲದಿದ್ದ ಸಂದರ್ಭದಲ್ಲಿ ಸಾನಿಟೈಸರ್ ಬಳಸಬೇಕಾಗುತ್ತದೆ. ಕೈ ತೊಳೆಯದೇ ಮೂಗು, ಬಾಯಿ, ಕಣ್ಣು ಮುಟ್ಟಬಾರದು. ಹ್ಯಾಡ್ ಸ್ಯಾನಿಟೈಸರ್ನ್ನು ಜೊತೆಯಲ್ಲಿ ಇಟ್ಟುಕೊಂಡಿರಬೇಕು.
ಸಾಮಾಜಿಕ ಅಂತರ: ಹಸ್ತಲಾಘವ ಬೇಡ, ನಮಸ್ಕಾರ ಮಾಡುವುದನ್ನು ಕಲಿಸಬೇಕು. ಸಾಮಾನ್ಯ ಮಕ್ಕಳು ಮೈಕೈ ಮುಟ್ಟಿ ಮಾತನಾಡುತ್ತಾರೆ. ಅವರಿಗೆ ಸಾಮಾಜಿಕ ಅಂತರವನ್ನು ಕಲಿಸಬೇಕಾಗುತ್ತದೆ. ಜನಸಂದಣಿ ಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವುದು ಬೇಡ. ಸಮಾರಂಭಗಳು, ಮದುವೆ, ಗೃಹ ಪ್ರವೇಶ, ಹೆಸರಿಡುವುದು ಕಾರ್ಯಕ್ರಮ ಕರೆದುಕೊಂಡು ಹೋಗುವುದು ಬೇಡ. ಇನ್ನು ಅನ್ಲಾಕ್ ಆಗಿ ದೇವಸ್ಥಾನ, ಚರ್ಚ್, ಮಸೀದಿ ಪ್ರಾರಂಭ ಆದ ನಂತರವೂ ಮಕ್ಕಳನ್ನು ಕರೆದುಕೊಂಡು ಹೋಗದೆ ಮನೆಯಲ್ಲಿಯೇ ಪ್ರಾರ್ಥನೆ ಮಾಡಲು ಕಲಿಸಿ. ನೆಂಟರ ಮನೆಗೆ ಮಕ್ಕಳನ್ನು ಕಳುಹಿಸಬೇಡಿ. ನೆಂಟರು ಕೂಡ ನಿಮ್ಮ ಮನೆಗೆ ಬರುವುದು ಆದಷ್ಟು ತಪ್ಪಿಸುವುದು ಉತ್ತಮ.
ಕೋವಿಡ್ ಲಸಿಕೆ: (ವಾಕ್ಸಿನೇಶನ್) ೧೮ ವರ್ಷ ಮೇಲ್ಪಟ್ಟ ವಿಶೇಷಚೇತನರಿಗೆ ಹಾಗೂ ಆರೈಕೆದಾರರಿಗೆ ಸರ್ಕಾರವು ಲಸಿಕೆಗೆ ಅವಕಾಶ ಕಲ್ಪಿಸಿದ್ದು, ಲಸಿಕೆ ತೆಗೆದುಕೊಳ್ಳಲು ಪ್ರೋತ್ಸಾಹಿಸಿ, ಅದೇ ರೀತಿಯಲ್ಲಿ ಪೋಷಕರು ಕೂಡ ಲಸಿಕೆಯನ್ನು ತೆಗೆದುಕೊಳ್ಳಿ. ೧೮ ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ ಲಸಿಕೆಯನ್ನು ತೆಗೆದುಕೊಳ್ಳಬಹುದು. ವಿಚಾರಿಸಿ ನಂತರ ಲಸಿಕೆಯನ್ನು ಕೊಡಿಸಿ. ಮಕ್ಕಳು ದಿನ ಸ್ನಾನ ಮಾಡಿ ಉಡುಪನ್ನು ಧರಿಸಬೇಕು. ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಹಣ್ಣು, ತರಕಾರಿಗಳು, ಸೊಪ್ಪು, ಬೇಳೆಕಾಳುಗಳು, ಹಾಲು, ಮೊಟ್ಟೆ ಇತ್ಯಾದಿ ಪೌಷ್ಟಿಕಾಂಶವುಳ್ಳ ಸಮತೋಲನ ಆಹಾರವನ್ನು ನೀಡಿ. ಬೇಕರಿ ತಿನಿಸುಗಳು, ಮೈದಾ ಅಥವಾ ಕರಿದ ಪದಾರ್ಥಗಳು ದೇಹಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಹಾನಿಯುಂಟು ಮಾಡುತ್ತದೆ. ಆದುದ್ದರಿಂದ ಸಾಧ್ಯವಾದಷ್ಟು ಕಡಿಮೆ ಮಾಡಿ. ಬೇಗ ಮಲಗಿ ಬೇಗ ಎದ್ದೇಳುವುದು, ೩೦ ನಿಮಿಷ ವ್ಯಾಯಾಮ ಮಾಡಿಸುವುದು ಉತ್ತಮ. ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಹೇಳಿ. ಗಿಡಕ್ಕೆ ನೀರು ಹಾಕುವುದು, ಬಟ್ಟೆ ಮಡಚುವುದು ಇತ್ಯಾದಿ ಕೆಲಸಗಳನ್ನು ನೀಡಿ. ಈ ರೀತಿಯಲ್ಲಿ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯನ್ನು ವ್ಯವಸ್ಥಿತಗೊಳಿಸಬೇಕು.
ಮೂರ್ಚೆರೋಗ (ಅಪಸ್ಮಾರ/ಪಿಡ್ಸ್) ಇತ್ಯಾದಿ ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ದಯವಿಟ್ಟು ಮಾತ್ರೆಯನ್ನು ನಿಲ್ಲಿಸಬೇಡಿ. ವೈದ್ಯರ ಸಲಹೆಯಂತೆ ಔಷಧಿಯನ್ನು ನೀಡಿ.
ಪೋಷಕರು ಆದಷ್ಟು ಚಟಗಳಿಂದ ದೂರವಿರಿ. ಧೂಮಪಾನ, ಮದ್ಯಪಾನ, ಪಾನ್, ಗುಟ್ಕ ಇತ್ಯಾದಿಗಳಿಂದ ದೂರವಿರಿ. ಇವು ಆರೋಗ್ಯವನ್ನು ಹಾಳು ಮಾಡಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಮಕ್ಕಳಿಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಸರ್ಕಾರ ಮಾಡಿಕೊಂಡಿದ್ದು, ಕೋವಿಡ್ ಸೆಂಡರ್, ಮಕ್ಕಳಿಗೆ ಕೇರ್ ಸೆಂಟರ್ ಇತ್ಯಾದಿಗಳನ್ನು ಮಾಡಿಕೊಂಡಿದೆ. ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದರೆ ವೈದ್ಯರು, ನರ್ಸ್ಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ವಿಶೇಷಚೇತನರ ಕಲ್ಯಾಣಾಧಿಕಾರಿಗಳು ಸರ್ಕಾರೇತರ ಸಂಘ-ಸAಸ್ಥೆಗಳು, ವಿಶೇಷ ಶಿಕ್ಷಕರು, ವಿಶೇಷಚೇತನರ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಿ.
- ಎಸ್.ಸಿ. ಶಿವರಾಜ್, ವಿಶೇಷ ಶಿಕ್ಷಕರು, ಚೆಶೈರ್ ಹೋಮ್ಸ್, ಪಾಲಿಬೆಟ್ಟ.