ಗೋಣಿಕೊಪ್ಪಲು, ಜು. ೪: ವನ್ಯಪ್ರಾಣಿಗಳಿಂದ ಸಾವಿಗೀಡಾಗುವ ಜಾನುವಾರುಗಳ ಮಾಲೀಕರಿಗೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ಅರಣ್ಯ ಇಲಾಖೆ ಹೆಚ್ಚಳ ಮಾಡಿದೆ. ಜಿಲ್ಲೆಯಲ್ಲಿ ರೈತರ ಜಾನುವಾರುಗಳ ಮೇಲೆ ನಿರಂತರ ಹುಲಿ ದಾಳಿ ನಡೆಯುತ್ತಿದ್ದು ಈ ಸಂದರ್ಭ ಅರಣ್ಯ ಇಲಾಖೆಯ ವತಿಯಿಂದ ಕೇವಲ ೧೦ ಸಾವಿರ ಪರಿಹಾರ ಲಭ್ಯವಾಗುತ್ತಿತ್ತು. ಈ ಪರಿಹಾರದಿಂದಾಗಿ ರೈತನಿಗೆ ಅಷ್ಟಾಗಿ ಪ್ರಯೋಜನ ವಾಗುತ್ತಿರಲಿಲ್ಲ.

ವನ್ಯಪ್ರಾಣಿಗಳಿಂದ ರೈತರ ಜಾನುವಾರುಗಳು ಮೇಲೆ ದಾಳಿ ನಡೆಯುತ್ತಿದ್ದ ಸಂದರ್ಭ ರೈತ ಸಂಘದ ಮೂಲಕ ಅನೇಕ ಹೋರಾಟ ನಡೆಸಿ,ನೊಂದ ರೈತರಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವಂತೆ ಪ್ರತಿಭಟನೆಗಳು ಅನೇಕ ಬಾರಿ ನಡೆದಿದ್ದವು.ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಕೂರ್ಗ್ ಪೌಂಡೆಷನ್ ಮೂಲಕ ೧೦ ಸಾವಿರ ಹಣವನ್ನು ಪರಿಹಾರದ ರೂಪದಲ್ಲಿ ನೀಡುತ್ತಿದ್ದರು.

ಹುಲಿ ದಾಳಿ ಸಂದರ್ಭ ಜಾನುವಾರು ಮಾಲೀಕನಿಗೆ ಇಲಾಖೆ ನೀಡುತ್ತಿರುವ ಪರಿಹಾರ ಏನೇನೂ ಸಾಲದು ಎಂದು ಕುಟ್ಟದಲ್ಲಿ ಆಯೋಜಿಸಿದ ರೈತ ಸಂಘದ ಸಭೆಯಲ್ಲಿ

(ಮೊದಲ ಪುಟದಿಂದ) ಮುಖ್ಯ ಅರಣ್ಯಸಂರಕ್ಷಣಾದಿಕಾರಿಗಳಾದ ಪಿಸಿಸಿಎಫ್ ವಿಜಯ್ ಗೋಗಿ ಅವರನ್ನು ರೈತ ಸಂಘದ ಮುಖಂಡರು ಗಮನ ಸೆಳೆದು ಪರಿಹಾರ ಹೆಚ್ಚು ಮಾಡುವಂತೆ ಮನವಿ ಮಾಡಿದ್ದರು. ಈ ವೇಳೆ ಪಿಸಿಸಿಎಫ್ ಗೋಗಿ ಪರಿಹಾರ ಹೆಚ್ಚು ಮಾಡುವ ಬಗ್ಗೆ ರೈತ ಮುಖಂಡರಿಗೆ ಭರವಸೆ ನೀಡಿದ್ದರು.ಹಿರಿಯ ಅರಣ್ಯ ಅಧಿಕಾರಿಗಳು ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ಕೊಡಗಿನ ರೈತರಿಗೆ ನೀಡಿದ್ದ ಮಾತಿನಂತೆ ನಡೆದುಕೊಂಡಿದ್ದಾರೆ.ಪರಿಹಾರ ಹೆಚ್ಚಳದಿಂದ ರೈತರು ಕೊಂಚ ನೆಮ್ಮದ್ದಿಯಾದಂತಿದೆ.

ನೂತನ ಸುತ್ತೋಲೆ

ಅರಣ್ಯ ಇಲಾಖೆಯ ಪ್ರಸ್ತುತದ ಸುತ್ತೋಲೆಯಂತೆ ವನ್ಯಪ್ರಾಣಿಗಳಿಂದ ರೈತರ ಜಾನುವಾರುಗಳ ಮೇಲೆ ದಾಳಿ ನಡೆದು ಮೃತಪಟ್ಟರೆ ಹಾಲು ಕರೆಯುವ ಹಸುವಿಗೆ ೩೦ ಸಾವಿರ ದನ, ಎತ್ತುಗಳಿಗೆ ೨೫ ಹಾಗೂ ಕರುಗಳು ಮೃತಪಟ್ಟರೆ ೧೬ ಸಾವಿರ ಪರಿಹಾರವನ್ನು ಪಲಾನುಭವಿಯ ಬ್ಯಾಂಕ್ ಖಾತೆಗೆ ಘಟನೆ ನಡೆದ ೫ ದಿನಗಳ ಒಳಗೆ ಜಮಾ ಮಾಡುವಂತೆ ಆದೇಶ ಮಾಡಲಾಗಿದೆ. ಈ ಹಿಂದೆ ಕೇವಲ ೧೦ ಸಾವಿರ ಪರಿಹಾರ ಮಾತ್ರ ನೀಡಲಾಗುತ್ತಿತ್ತು.

ರೈತ ಸಂಘದ ನಿರಂತರ ಹೋರಾಟದ ಫಲವಾಗಿ ಇದೀಗ ಸ್ವಲ್ಪ ಮಟ್ಟಿಗೆ ನ್ಯಾಯ ದೊರಕಿವೆ. ಆದರೆ ಸರ್ಕಾರ ನಿಗದಿಪಡಿಸಿದ ಪರಿಹಾರ ರೈತರಿಗೆ ಪೂರ್ಣ ತೃಪ್ತಿ ತಂದಿಲ್ಲ. ಹುಲಿ ದಾಳಿಯಿಂದ ಜಾನುವಾರು ಬಲಿಯಾದಲ್ಲಿ ೭೫ ಸಾವಿರ ಪರಿಹಾರ ನೀಡಬೇಕೆಂಬುವುದು ನಮ್ಮ ಬೇಡಿಕೆ. ಆ ನಿಟ್ಟಿನಲ್ಲಿ ಮತ್ತೆ ನಮ್ಮ ಹೋರಾಟ ಮುಂದುವರಿಸುತ್ತೇವೆ. ಬೆಂಗಳೂರು ಮಟ್ಟದ ಅಧಿಕಾರಿಗಳನ್ನು,ಅರಣ್ಯ ಸಚಿವರನ್ನು ಮುಂದಿನ ದಿನಗಳಲ್ಲಿ ಭೇಟಿ ಮಾಡಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ಎಂದು ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದ್ದಾರೆ.