ಮಡಿಕೇರಿ, ಜು. ೨: ಕಳೆದ ಮೂರು ವರ್ಷಗಳಿಂದ ಸುರಿದ ಭಾರಿ ಮಳೆ ಹಾಗೂ ಸಂಭವಿಸಿದ ಭೂಕುಸಿತದಿಂದಾಗಿ ಉಂಟಾದ ಹೆದ್ದಾರಿ ಕುಸಿತ ಪ್ರದೇಶಗಳಲ್ಲಿ ಅಪಾಯ ತಡೆಯಲು ನಿರ್ಮಿಸಲಾಗುತ್ತಿರುವ ತಡೆಗೋಡೆ ಕಾಮಗಾರಿ ಪ್ರದೇಶಕ್ಕೆ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮೈಸೂರು-ಬಂಟ್ವಾಳ ೨೭೫ ಹೆದ್ದಾರಿಯಲ್ಲಿ ಬರುವ ಮಡಿಕೇರಿಯಿಂದ ಸಂಪಾಜೆ ತನಕ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಸಂಸದರು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ನೀಡಿದರು.

ಜೋಡುಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ಕಳೆದ ಮೂರು ವರ್ಷ ಕೊಡಗಿನಲ್ಲಿ ಭಾರಿ ಮಳೆ ಹಾಗೂ ಭೂಕುಸಿತ ಸಂಭವಿಸಿ ಅಪಾರ ನಷ್ಟ ಉಂಟಾಗಿದೆ. ಮಹಾಮಳೆಯಿಂದ ಕುಸಿತಗೊಂಡ ಹೆದ್ದಾರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಡೆಗೋಡೆ ನಿರ್ಮಾಣ ಯೋಜನೆ ರೂಪಿಸಲಾಯಿತು. ಸ್ಥಳೀಯ ಶಾಸಕರ ಒತ್ತಾಯದಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ೧೮ ಕಡೆಗಳಲ್ಲಿ ನಿರ್ಮಾಣವಾಗಬೇಕಾದ ತಡೆಗೋಡೆಗೆ ಅನುದಾನದ ಬೇಡಿಕೆ ಸಲ್ಲಿಸಿದಾಗ ರೂ. ೫೯ ಕೋಟಿ ಮಂಜೂರು ಮಾಡಿದರು ಎಂದು ಪ್ರತಾಪ್ ಸಿಂಹ ತಿಳಿಸಿದರು.

ಆದರೆ, ಈ ವರ್ಷ ಜೂನ್ ತಿಂಗಳಿನಲ್ಲಿ ಕೆಲವು ದಿನ ಸುರಿದ ಮಳೆಗೆ ಹೆದ್ದಾರಿ ಬದಿಯಲ್ಲಿ ಹಲವು ಕಡೆ ಭೂಕುಸಿತ ಸಂಭವಿಸಿದೆ. ಹೊಸದಾಗಿ ೨೨ ಕಡೆ ಹಾನಿ ಸಂಭವಿಸಿದ ಪ್ರದೇಶ ಎಂದು ಗುರುತಿಸಲಾಗಿದೆ. ಇದಕ್ಕೂ ತಡೆಗೋಡೆ ನಿರ್ಮಿಸುವ ಉದ್ದೇಶಗಳಿವೆ. ಹೆದ್ದಾರಿ ಕರ್ನಾಟಕ ವಿಭಾಗದ ಮುಖ್ಯ ಇಂಜಿನಿಯರ್ ಅನ್ನು ಜಿಲ್ಲೆಗೆ ಕರೆಸಿ ಕೊಂಡಿದ್ದೇವೆ. ಖುದ್ದು ಅವರು ಕೂಡ ಭೇಟಿ ಮಾಡಿ ಪರಿಶೀಲನೆ ನಡೆಸಿ ಚಿತ್ರಣ ಪಡೆದು ಕೊಂಡಿದ್ದು, ಅವರು ಮುಂದಿನ ದಿನದಲ್ಲಿ ಈ ಸಂಬAಧ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ ಎಂದು ವಿವರಿಸಿದರು.

ವಿವಿಧೆಡೆ ಸಂಭವಿಸಿದ ಹಾನಿ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಿಸಲು ಒಟ್ಟು ರೂ. ೧೦೦ ಕೋಟಿ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ಕೊಡಗಿನ ಜನಕ್ಕೆ ಮಂಗಳೂರು ಹೆದ್ದಾರಿ ಅತಿಮುಖ್ಯವಾಗಿದ್ದು, ಶಿಕ್ಷಣ, ಆರೋಗ್ಯ ಸೇರಿದಂತೆ ಇನ್ನಿತರ ತುರ್ತು ವಿಚಾರಗಳಿಗೆ ಜನರು ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಈ ಹಿನ್ನೆಲೆ ಯಾವುದೇ ಕಾರಣಕ್ಕೂ ಸಂಚಾರಕ್ಕೆ ಸಮಸ್ಯೆ ಉಂಟಾಗ ಬಾರದು ಎಂದು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಿದ್ದೇವೆ ಎಂದು ಮಾಹಿತಿ ನೀಡಿದರು.

ರೂ. ೫೯ ಕೋಟಿ ಕಾಮಗಾರಿ ಪೂರ್ಣಗೊಳ್ಳುವ

(ಮೊದಲ ಪುಟದಿಂದ) ಹಂತದಲ್ಲಿದ್ದು ಕೆಲವು ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ಈ ವರ್ಷ ಹಾನಿಯಾದ ರಸ್ತೆ ಬದಿಯ ಕಾಮಗಾರಿ ಆಡಳಿತ ಪ್ರಕ್ರಿಯೆ ಮುಗಿದ ಬಳಿಕದ ಒಂದು ವರ್ಷ ದೊಳಗೆ ಪೂರ್ಣಗೊಳ್ಳಲಿದೆ. ಹೊಸ ಕಾಮಗಾರಿ ತಕ್ಷಣಕ್ಕೆ ಆರಂಭಿಸುವುದಿಲ್ಲ. ಕ್ರಿಯಾಯೋಜನೆ ತಯಾರಿಸಿದ ಬಳಿಕೆ ಕೆಲವೊಂದು ಪ್ರಕ್ರಿಯೆ ಇದೆ. ಮಳೆಗಾಲ ನಂತರ ಹೊಸ ಯೋಜನೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಮೂರು ವರ್ಷದ ನಿರಂತರ ಮಳೆಯಿಂದ ಹಾನಿಯಾದ ರಸ್ತೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾದ ಕಾಮಗಾರಿ ಕಳೆದ ವರ್ಷದಿಂದ ಆರಂಭವಾಗಿದೆ. ಮಂಗಳೂರನ್ನು ಕೊಡಗು ಜನ ಅವಲಂಬಿತರಾಗಿದ್ದಾರೆ. ರಸ್ತೆ ಸಂಚಾರಕ್ಕೆ ಯಾವುದೇ ಸಮಸ್ಯೆ ಉಂಟಾಗಬಾರದು ಈ ನಿಟ್ಟಿನಲ್ಲಿ ಉದ್ದೇಶಿತ ೨೮ ಕಿ.ಮೀ. ರಸ್ತೆ ಬದಿಯ ತಡೆಗೋಡೆ ಕಾಮಗಾರಿ ಉತ್ತಮವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ರಾಷ್ಟೀಯ ಹೆದ್ದಾರಿ ಕರ್ನಾಟಕ ವಿಭಾಗದ ಮುಖ್ಯ ಇಂಜಿನಿಯರ್ ಮಾತನಾಡಿ, ಭಾರಿ ಮಳೆಯಿಂದ ರಸ್ತೆಗಳು ಹಾಳಾಗಿವೆ. ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ. ಇತ್ತೀಚಿಗೆ ಸಂಭವಿಸಿದ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಅದನ್ನು ತಾಂತ್ರಿಕವಾಗಿ ಪರಿಶೀಲಿಸಿದ್ದು, ೨೨ ತಡೆಗೋಡೆ ನಿರ್ಮಾಣಕ್ಕೆ ಪ್ರಸ್ತಾಪ ಇದೆ. ಅದನ್ನು ಅನುಮೋದಿಸಿ, ಟೆಂಡರ್ ಕರೆದು ಮುಂದಿನ ಮಳೆಗಾಲಕ್ಕೂ ಮುನ್ನ ಕಾಮಗಾರಿ ಆರಂಭಿಸುವ ಯೋಜನೆ ಇದೆ. ಕೇಂದ್ರ ಸರಕಾರದ ಜೊತೆ ಆಡಳಿತಾತ್ಮಕ ಪ್ರಕ್ರಿಯೆ ಆರಂಭಿಸಲಾಗುತ್ತದೆ. ರಸ್ತೆ ಸುರಕ್ಷತೆ ನಮ್ಮ ಆದ್ಯತೆಯಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಸೇರಿದಂತೆ ಹೆದ್ದಾರಿ ಪ್ರಾಧಿಕಾರದ ವಿವಿಧ ಅಧಿಕಾರಿಗಳು ಈ ಸಂದರ್ಭ ಇದ್ದರು.

ಕುಶಾಲನಗರಕ್ಕೆ ಭೇಟಿ

ಕಳೆದ ೩ ವರ್ಷಗಳಿಂದ ವಿಪರೀತ ಮಳೆಯಿಂದಾಗಿ ಕುಶಾಲನಗರ ತಾವರೆಕೆರೆ ಬಳಿ ರಾಷ್ಟಿçÃಯ ಹೆದ್ದಾರಿ ಮುಳುಗಡೆಯಾಗುತ್ತಿದ್ದು, ರಸ್ತೆಯ ಎತ್ತರ ಹೆಚ್ಚಿಸಬೇಕೆಂಬ ಸಂಸದ ಪ್ರತಾಪ್ ಸಿಂಹ ಅವರ ಮನವಿಗೆ ಸ್ಪಂದಿಸಿ ರಾಷ್ಟೀಯ ಹೆದ್ದಾರಿ ಕರ್ನಾಟಕ ವಿಭಾಗದ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹಾಗೂಇತರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.