*ವೀರಾಜಪೇಟೆ, ಜು. ೨: ವೀರಾಜಪೇಟೆ ತಾಲೂಕು ಅತಿ ದೊಡ್ಡ ಕ್ಷೇತ್ರ ವಿಸ್ತಾರವಿರುವ ವಿಧಾನಸಭಾ ಕ್ಷೇತ್ರ, ಸಾಲದಕ್ಕೆ ವೀರಾಜಪೇಟೆ ತಾಲೂಕು ಕೊಡಗಿನ ಗಡಿಭಾಗದಲ್ಲಿದೆ, ನೆರೆಯ ಕೇರಳ ರಾಜ್ಯಕ್ಕೆ ಅತಿ ಸಮೀಪದಲ್ಲಿದೆ. ವೀರರಾಜೇಂದ್ರ ಕಟ್ಟಿದ ಐತಿಹಾಸಿಕ ನಗರಿ ಎಂಬ ಹೆಗ್ಗಳಿಕೆಯೂ ಜೊತೆಗಿದೆ.

ದೆಹಲಿಯಲ್ಲಿ ಭಾರತದ ಅಂದಿನ ಚಕ್ರವರ್ತಿಯಾಗಿದ್ದ ೫ನೇ ಜಾರ್ಜ್ ದೊರೆಯ ಪಟ್ಟಾಭಿಷೇಕದ ನೆನಪಿಗಾಗಿ ವೀರಾಜಪೇಟೆಯಲ್ಲಿ ಮುಕ್ಕಾಟಿರ ಮನೆತನದಿಂದ ಸ್ಥಾಪಿತವಾದ ಐತಿಹಾಸಿಕ ಗಡಿಯಾರ ಕಂಬ, ಎರಡುಕಾಲು ಶತಮಾನ ಪೂರೈಸಿರುವ ಸಂತ ಅನ್ನಮ್ಮ ಚರ್ಚ್, ಪುರಾತನವಾದ ಮಹಾಗಣಪತಿ ದೇವಾಲಯ, ಮಲೆತಿರಿಕೆ ಬೆಟ್ಟದ ಈಶ್ವರ ದೇವಾಲಯ ಅತ್ಯಂತ ಪುರಾತನ ವಾದ ಜಮ್ಮಾ ಮಸೀದಿ ಎಲ್ಲವೂ ಈ ನಗರಕ್ಕಿರುವ ಇತಿಹಾಸವನ್ನು ಸಾರಿ ಹೇಳುತ್ತಿವೆ.

ಹೆಚ್ಚುತ್ತಿರುವ ಜನ ಸಂಖ್ಯೆ

ಕೊಡಗು ಈ ಹಿಂದೆ 'ಸಿ' ರಾಜ್ಯವಾಗಿದ್ದಾಗ ಅಂದಿನ ಕಾಲಕ್ಕೆ ಪುರಸಭೆ ೧೯೦೪ರಲ್ಲಿ ಪುರಸಭೆಯಾಗಿ ೧೯೮೬ ರವರೆಗೆ ಪುರಸಭೆಯಾಗಿಯೇ ಮುಂದುವರೆಯಿತು. ೧೯೮೬ ರಿಂದ ೧೯೯೫ವರೆಗೂ ಮಂಡಲ ಪಂಚಾಯಿತಿ ಯಾಗಿತ್ತು. ಮುಂದುವರೆದು ಏಳು ತಿಂಗಳು ಗ್ರಾಮ ಪಂಚಾಯಿತಿ ಯಾಗಿತ್ತು. ತದನಂತರದಲ್ಲಿ, ವೀರಾಜಪೇಟೆ ನಗರ, ಪಟ್ಟಣ ಪಂಚಾಯಿತಿಯಾಗೀ ೧೯೯೬ ರಲ್ಲಿ ಅಸ್ತಿತ್ವಕ್ಕೆ ಬಂದಿತು. ನಗರದ ಒಟ್ಟು ವಿಸ್ತೀರ್ಣ ೮.೨೬ ಚ.ಕಿಮೀ, ೨೦೧೧ರ ಜನಗಣತಿ ಪ್ರಕಾರ ನಗರದ ಜನಸಂಖ್ಯೆ ೧೭,೨೪೬, ಪಟ್ಟಣ ಪಂಚಾಯಿತಿಯ ಪ್ರಕಾರ ಇಂದಿನ ಜನಸಂಖ್ಯೆ ಅಂದಾಜು ೨೫ ಸಾವಿರಕ್ಕೂ ಅಧಿಕವಾಗಿದೆ.

ಬೆಳೆಯುತ್ತಿರುವ ಪಟ್ಟಣ

ಜನಸಂಖ್ಯೆ ಹೆಚ್ಚಾದಂತೆ ನಗರ ಕೂಡಾ ಬೆಳೆಯುತ್ತಲೇ ಇದೆ. ನಗರವೂ ಕೇರಳ ಕಡೆಗೊಂದಿಷ್ಟು ಬೆಳೆಯುತ್ತಿದ್ದರೆ ಇತ್ತ ಮಡಿಕೇರಿ ಕಡೆಗೂ ಬೆಳೆಯುತ್ತಿದೆ. ಹಾಗೇ ಗೋಣಿಕೊಪ್ಪ ಕಡೆಗೂ ಬಡಾವಣೆ ಗಳು ನಿರ್ಮಾಣವಾಗುತ್ತಾ ತನ್ನ ಗಾತ್ರ ಹಿಗ್ಗಿಸಿಕೊಳ್ಳುತ್ತಾ ಸಾಗುತ್ತಿದೆ.

ವೀರಾಜಪೇಟೆ ನಗರದ ಪಟ್ಟಣ ಪಂಚಾಯಿತಿ ಸ್ಥಿತಿಯೀಗ ಆನೆ ಬಾಯಿಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಕಾಣಲಾರಂಭಿಸಿದೆ. ಅಂದರೆ ನಗರ ಯೋಜನೆಯಲ್ಲಿ ಕಿರಿದಾದ ರಸ್ತೆಗಳು, ರಸ್ತೆಯ ಬದಿಗೆ ಮನೆಗಳು ಇವೆ. ಆದರೆ ಈಗ ನಗರಕ್ಕೆ ದಿನನಿತ್ಯ ಗ್ರಾಮಾಂತರ ಪ್ರದೇಶದಿಂದ, ಹೊರಜಿಲ್ಲೆಗಳಿಂದ ಹರಿದುಬರುವ ಜನಸಂಖ್ಯೆಯೇ ಪ್ರತಿದಿನ ಐದು ಸಾವಿರಕ್ಕೂ ಅಧಿಕ ಇರುವುದರಿಂದ ಜನರ ಓಡಾಟಕ್ಕೆ, ಸುಗಮ ಸಂಚಾರಕ್ಕೆ ನಗರದ ರಸ್ತೆಗಳು ಕಿಷ್ಕಿಂಧೆಯಾಗಿ ಮಾರ್ಪಟ್ಟಿವೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಪ್ರಸ್ತುತ ೧೮ ವಾರ್ಡುಗಳು ಇದ್ದು, ಅದರಲ್ಲಿ ಮೂರು ಕೊಳಗೇರಿಗಳು ಸೇರಿವೆ. ಪಟ್ಟಣ ಪಂಚಾಯಿತಿಯ ವಾರ್ಷಿಕ ಆದಾಯ ಪಟ್ಟಣ ಪಂಚಾಯಿತಿ ಮೂಲಗಳ ಪ್ರಕಾರ ೧ ಕೋಟಿಯಷ್ಟುÀ ಇದೆ. ದಿನದಿಂದ ದಿನಕ್ಕೆ ನಗರದ ಹೊಸ ಅಂಗಡಿ ಮಳಿಗೆಗಳು, ಮಾಂಸದ ಅಂಗಡಿಗಳು, ರೆಸಾರ್ಟ್, ಹೊಟೇಲ್ ಉದ್ಯಮ ಹೊಸ ವ್ಯಾಪಾರ ವಹಿವಾಟುಗಳು ನಗರದಲ್ಲೂ, ನಗರದಾಚೆಗೂ ತಲೆಯೆತ್ತುತ್ತಿವೆ.

ಸಮಸ್ಯೆಗಳ ಸರಮಾಲೆ

ನಗರದಲ್ಲಿ ೨೫ ಸಾವಿರದ ಹತ್ತಿರತ್ತಿರ ಜನಸಂಖ್ಯೆ ಇದ್ದರೇ ಸಮಸ್ಯೆಗಳು ಸಾವಿರದಲ್ಲೇ ಇವೆ. ನಗರದಲ್ಲಿ ಏಕಮುಖ ಸಂಚಾರವಿದೆ. ಅಧಿಕ ಸಂಖ್ಯೆಯ ಆಟೋಗಳು, ಖಾಸಗಿ ಬಸ್‌ಗಳು ಇವೆ. ಅದಕ್ಕಿಂಥ ಹೆಚ್ಚಾಗಿ ಮನೆಗೆ ನಾಲ್ಕರಂತೆ ವಾಹನಗಳಿವೆ. ಚರಂಡಿ ಇದ್ದರೂ ಅದರ ಮುಚ್ಚಳ ಸರಿಯಾಗಿ ಮುಚ್ಚಿರುವುದಿಲ್ಲ, ಪಾದಚಾರಿ ಮಾರ್ಗವಿಲ್ಲ, ಟ್ರಾಫಿಕ್ ಸಿಗ್ನಲ್‌ಗಳಿಲ್ಲ, ಝೀಬ್ರಾ ಕ್ರಾಸಿಂಗ್ ಇಲ್ಲ, ಪಾರ್ಕಿಂಗ್ ಅಂತೂ ಕನಸಿನ ಮಾತು, ಬಹುಮಹಡಿ ಕಟ್ಟಡಗಳಿವೆ. ಆದರೆ ಅವುಗಳ ಬೇಸ್‌ಮೆಂಟ್ ಪಾರ್ಕಿಂಗ್ ಇಲ್ಲ, ಅಂಗಡಿಗಳ ಮಾಲೀಕರು ಕಿರಿದಾದ ರಸ್ತೆಯಲ್ಲಿ ತಮ್ಮ ವಾಹನ ನಿಲುಗಡೆ ಮಾಡಿ ಇನ್ನೂ ತೊಂದರೆ ಕೊಡುತ್ತಿದ್ದಾರೆ. ಒಟ್ಟಾರೆ, ಇಲ್ಲಿ ಹಿರಿಯ ನಾಗರಿಕರಿಗೆ, ಮಕ್ಕಳಿಗೆ, ಮಹಿಳೆಯರಿಗೆ ನಡೆಯಲು ಪಾದಚಾರಿ ಮಾರ್ಗವೇ ಇಲ್ಲ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಬುಧವಾರ ಸಂತೆಯ ದಿನದಂದು, ಗೂಡ್ಸ್ ಗಾಡಿಯಲ್ಲಿ ತರಕಾರಿ, ಹಣ್ಣು ಮಾಡುವ ವ್ಯಾಪಾರಿಗಳು ರಸ್ತೆಯ ಮಧ್ಯದಲ್ಲಿ ವಾಹನ ನಿಲ್ಲಿಸಿ ಮಾರಾಟ ಮಾಡುತ್ತಿರುತ್ತಾರೆ. ಇದೆಲ್ಲದ್ದಕ್ಕೂ ಪಟ್ಟಣ ಪಂಚಾಯಿತಿಯ ಬಳಿ ಉತ್ತರವೂ ಇಲ್ಲದಂತಾಗಿದೆ.

(ಮೊದಲ ಪುಟದಿಂದ) ಮಕ್ಕಳಿಗೆ ಆಟವಾಡಲು, ಹಿರಿಯರಿಗೆ ನಾಲ್ಕು ಹೆಜ್ಜೆ ವಾಯುವಿಹಾರ ಮಾಡಲು ಒಂದು ಉದ್ಯಾನವನವಿಲ್ಲ ಎನ್ನುವಂತಾಗಿದೆ.

ವಿಸ್ತೀರ್ಣದಲ್ಲಿ ಏರಿಕೆ

ನಗರ ವ್ಯಾವಹಾರಿಕವಾಗಿ ಬೆಳೆಯುತ್ತಿದೆ. ಜನಸಂಖ್ಯೆಯೂ ಹೆಚ್ಚುತ್ತಿದೆ. ಇಂಥ ಸಮಯದಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ಹಲವು ಬಗೆಯ ಪ್ರಯತ್ನಗಳು ವೀರಾಜಪೇಟೆ ಪಟ್ಟಣ ಪಂಚಾಯಿತಿಯಿAದ ನಡೆಯುತ್ತಿದ್ದು. ಈ ಬಗ್ಗೆ ಈಗಾಗಲೇ (ಎಲ್.ಪಿ.ಎ) ಲೋಕಲ್ ಪ್ಲಾನಿಂಗ್ ಏರಿಯಾ ಅಂದರೆ ನಗರದ ವಿಸ್ತೀರ್ಣದ ನಕ್ಷೆಯನ್ನು ತಯಾರು ಮಾಡಿದ್ದು ಅದಕ್ಕೆ ಜಿಲ್ಲಾಧಿಕಾರಿಯವರ ಅನುಮೋದನೆ ಯೂ ದೊರೆತಿದೆ.

ಇಲ್ಲಿತನಕ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ವಿಸ್ತೀರ್ಣ ೨೬೩.೦೦ ಚ.ಕಿಮೀ. ಆಗಿತ್ತು. ಈಗ ಹೊಸದಾಗಿ ತಯಾರಾಗಿರುವ ವೀರಾಜಪೇಟೆಗೆ ಸಂಬAಧಪಟ್ಟ ನಗರದ ನಕ್ಷೆಯಲ್ಲಿ ೬೩೮.೭೦ ಚ.ಕಿ.ಮೀ. ವಿಸ್ತೀರ್ಣವನ್ನು ಸೇರಿಸಿಕೊಂಡು ನಗರ ಹೊಸದಾಗಿ ಜಾಗಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡು ಈಗ ಪಟ್ಟಣ ಪಂಚಾಯಿತಿಯ ಒಟ್ಟು ವಿಸ್ತಿರ್ಣ ೯೦೧.೭೦ ಚ.ಕಿ.ಮೀ. ವರೆಗೂ ಏರಿಕೆಯಾಗಿದೆ. ಅಂದರೆ ವೀರಾಜಪೇಟೆಗೆ ಅತ್ಯಂತ ಸಮೀಪವಿರುವ ಹಲವು ಗ್ರಾಮಗಳ ಭಾಗಶಃ ಭಾಗ ಇನ್ನು ಮುಂದೆ ಪಟ್ಟಣ ಪಂಚಾಯಿತಿಯ ವ್ಯಾಪ್ತಿಗೆ ಸೇರಲಿವೆ.

ಸೇರ್ಪಡೆಗೊಳ್ಳುವ ಗ್ರಾಮಗಳು

ಹೊಸದಾಗಿ ಭಾಗಶಃ ಸೇರ್ಪಡೆಯಾಗಿರುವ ಹಲವು ಗ್ರಾಮಗಳ ವಿವರ ಇಂತಿದೆ. ಬಿಟ್ಟಂಗಾಲ, ನಾಂಗಾಲ ಗ್ರಾಮದ ಭಾಗಶಃ ಜಾಗ, ಆರ್ಜಿ, ಬೇಟೋಳಿ ಗ್ರಾಮದ ಭಾಗಶಃ ಭಾಗ, ಮಗ್ಗುಲದ ಭಾಗಶಃ ಭಾಗ, ಕುಕ್ಕಲೂರಿನ ಭಾಗಶಃ ಭಾಗ, ಅಂಬಟ್ಟಿ ಗ್ರಾಮದ ಸ್ವಲ್ಪ ಭಾಗ, ಇನ್ನು ಮುಂದೆ ಪೌರಡಳಿತ ಇಲಾಖೆಯ ಅಂತಿಮ ಅಂಕಿತ ಬಿದ್ದ ಕೂಡಲೇ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸುಪರ್ಧಿಗೆ ಸೇರಲಿದೆ.

ಅಲ್ಲಿಗೆ ಈ ಮೇಲ್ಕಂಡ ಗ್ರಾಮಗಳ ಭಾಗಶಃ ಭಾಗ ಇನ್ನು ಮುಂದೆ ನಗರ ಪ್ರದೇಶವಾಗಿ ಗುರುತಿಸಿಕೊಳ್ಳುವ, ಪಟ್ಟಣ ಪಂಚಾಯಿತಿಯ ಅಥವಾ ಭವಿಷ್ಯದಲ್ಲಿ ಪುರಸಭೆ ಬಂದಾಗ ಪುರಸಭೆಯಡಿಯಲ್ಲಿ ಬರಲಿವೆ.

ಈಗಾಗಲೇ ವೀರಾಜಪೇಟೆಯ ಈ ಹೊಸ ಎಲ್.ಪಿ.ಎ. ಜೊತೆಗೆ ವೀರಾಜಪೇಟೆ ನಗರ ಪುರಸಭೆ ಯಾಗಲು ಇರುವ ಅರ್ಹತೆಗಳನ್ನು ಆಧರಿಸಿದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರದ ಅಂತಿಮ ಅಂಕಿತ ಬಿದ್ದ ಕೂಡಲೇ ವೀರಾಜಪೇಟೆ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರುವ ಕಾಲ ಸನ್ನಿಹಿತವಾಗಿದೆ.

ಮೇಲ್ದರ್ಜೆ ಅನಿವಾರ್ಯ

ಅಲ್ಲಿಗೆ ಅನುದಾನ, ಸಿಬ್ಬಂದಿ, ಅಭಿಯಂತರರು ಎಲ್ಲಾ ವಿಚಾರದಲ್ಲೂ ಪಟ್ಟಣ ಪಂಚಾಯತಿ ಮೇಲ್ದರ್ಜೆಗೆ ಏರುತ್ತದೆ. ನಗರದ ಅಭಿವೃದ್ಧಿಯ ಚಿತ್ರಣವೂ ಬದಲಾಗುತ್ತದೆ. ಈಗಾಗಲೇ ಹಲವು ವಾರ್ಡುಗಳು ಗಜಗಾತ್ರ ದಲ್ಲಿದ್ದು, ಪಟ್ಟಣ ಪಂಚಾಯಿತಿಗೆ ಸರ್ಕಾರದಿಂದ ಕೊಡಮಾಡುವ ಅನುದಾನಗಳು ಎಲ್ಲಿಗೂ ಸಾಲುವುದಿಲ್ಲ ಎನ್ನುವ ಪರಿಸ್ಥಿತಿಯಿದೆ.

ಅಲ್ಲದೇ ಭೌಗೋಳಿಕವಾಗಿ ಸುತ್ತಲೂ ಮಲೆತಿರಿಕೆ ಬೆಟ್ಟದ ಪ್ರದೇಶ ಬೆಟ್ಟದ ಮಧ್ಯದಲ್ಲಿ ನಗರ, ಬೆಟ್ಟದ ಮೇಲೂ ನಗರ ನಿರ್ಮಾಣವಾಗಿ ಜನವಸತಿ ಇರುವುದರಿಂದ ವೀರಾಜಪೇಟೆ ನಗರ ಪಟ್ಟಣ ಪಂಚಾಯಿತಿಯಿAದ ಪುರಸಭೆಯಾಗಿ ಮೇಲ್ದರ್ಜೆಗೆ ಏರಲೇಬೇಕಾದ ಅನಿವಾರ್ಯ ಸನ್ನಿವೇಶವೂ ಇದೆ.

- ಉಷಾ ಪ್ರೀತಮ್