ವರದಿ - ಉಷಾಪ್ರೀತಮ್
*ವೀರಾಜಪೇಟೆ, ಜು. ೨ : ಕೊಡಗು ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಳವಾಗಿದೆ ಎನ್ನುವ ನಿಟ್ಟಿನಲ್ಲಿ ಇನ್ನೂ ಕೂಡಾ ಜಿಲ್ಲೆ ಅನ್ಲಾಕ್ ಆಗದೇ ಹಾಗೆಯೇ ಉಳಿದುಕೊಂಡಿದೆ. ಆದರೆ ಈ ಮಧ್ಯೆ ಕೊಡಗು ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗಲೂ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯಗಳಿಂದ ಬರುತ್ತಿರುವ ಜನರನ್ನು ಗಡಿಯಲ್ಲಿ ತಪಾಸಣೆ ಮಾಡದೇ ಒಳಗೆ ಬಿಡುತ್ತಿರುವುದೇ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಈ ವಿಚಾರಕ್ಕೆ ಪುಷ್ಟಿಕೊಡುವಂತೆ ಮುನ್ನಾವರ್ ಎನ್ನುವ ಲಾರಿ ಚಾಲಕ ಕರ್ನಾಟಕದಿಂದ ಕೇರಳಕ್ಕೆ, ಕೇರಳದಿಂದ ಕರ್ನಾಟಕಕ್ಕೆ ಹಲವಾರು ಬಾರಿ ಸಂಚಾರ ಮಾಡಿದ್ದು ಮಾಕುಟ್ಟ ಔಟ್ ಪೋಸ್ಟ್ನಲ್ಲಿ ಹಣ ಕೊಟ್ಟರೆ ಆರ್.ಟಿ.ಪಿ.ಸಿ.ಆರ್. ವರದಿ ಕೂಡಾ ಚೆಕ್ ಮಾಡದೇ ಬಿಟ್ಟು ಕಳುಹಿಸುತ್ತಿದ್ದರು. ಆದರೆ ಈಗ ಎರಡು ದಿನಗಳಿಂದ ಕಡ್ಡಾಯವಾಗಿ ೭೨ ಗಂಟೆಯೊಳಗಾಗಿ ಮಾಡಿದ ಆರ್.ಟಿ.ಪಿ.ಸಿ.ಆರ್. ವರದಿಯನ್ನು ತರಲೇಬೇಕು ಎನ್ನುತ್ತಿದ್ದಾರೆ ಎಂದು ಮಾಕುಟ್ಟ ಔಟ್ ಪೋಸ್ಟ್ ಬಳಿ ನೇರವಾಗಿಯೇ ಆರೋಪ ಮಾಡಿದರು.
ಕಳೆದ ಬಾರಿ ಕೊರೊನಾ ಒಂದನೇ ಅಲೆಯಲ್ಲಿ ಕೇರಳ ಮತ್ತು ಕರ್ನಾಟಕ ಅಂತಾರಾಜ್ಯ ಗಡಿಯನ್ನು ಮಣ್ಣು ಹಾಕಿ ಖುದ್ದು ಜನಪ್ರತಿನಿಧಿಗಳೇ ಬಂದ್ ಮಾಡಿಸಿದ್ದರು. ಅದರ ಫಲವಾಗಿ ಕೊಡಗು ಬಹಳ ಬೇಗ ಗ್ರೀನ್ ಝೋನ್ಗೆ ತಲುಪಿತು. ಆದರೀಗ ಎಲ್ಲಾ ಗಡಿಗಳು ಮುಕ್ತವಾಗಿವೆ.
ಆದರೆ ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಗಡಿಯಲ್ಲಿ ತಪಾಸಣೆ ಮಾಡಿ ಕೋವಿಡ್ ನೆಗೆಟಿವ್ ವರದಿ ಇದ್ದವರನ್ನು ಬಿಡುವ ವ್ಯವಸ್ಥೆ ಮಾಡಿದ್ದಾರೆ. ಅಂಥ ವ್ಯವಸ್ಥೆ ಇದ್ದರೂ ಅಂತಾರಾಜ್ಯ ಕಾರ್ಮಿಕರು, ಅಂತಾರಾಜ್ಯ ಗೂಡ್ಸ್ ವಾಹನಗಳು ಕರ್ನಾಟಕವನ್ನು ಯಾವುದೇ ಕೋವಿಡ್ ನೆಗೆಟಿವ್ ವರದಿಗಳಿಲ್ಲದೆ, ಅನುಮತಿ ಪತ್ರವಿಲ್ಲದೇ ಪ್ರವೇಶ ಮಾಡುತ್ತಿದ್ದಾರೆ. ಇದು ಗಡಿಭಾಗವಾದ ವೀರಾಜಪೇಟೆಗೆ ಹೆಚ್ಚು ಅಪಾಯವನ್ನು ಸೃಷ್ಟಿ ಮಾಡುತ್ತಿದೆ. ಅಷ್ಟೇ ಅಲ್ಲ, ಲಂಚದ ಹಣಕ್ಕೆ ತಲೆಬಾಗಿ ಹೀಗೆ ಕರ್ತವ್ಯ ಪ್ರಜ್ಞೆ ಮರೆತರೆ ಮುಂದೊಮ್ಮೆ ಇಡೀ ಜಿಲ್ಲೆ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಜಿಲ್ಲೆಯ ಜನಪ್ರತಿನಿಧಿಗಳು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಪದೇ ಪದೇ ಈ ವಿಚಾರದ ಬಗ್ಗೆ ಎಷ್ಟೇ ಕಠಿಣವಾಗಿ ಮಾತನಾಡಿ, ಅಧಿಕಾರಿಗಳ ಸಭೆ ನಡೆಸಿದರೂ ಪ್ರಯೋಜನಕ್ಕೆ ಬರುತ್ತಿಲ್ಲ.
ಕಳೆದೆರೆಡು ದಿನಗಳಿಂದ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಜಿಲ್ಲೆಯೊಳಕ್ಕೆ ಬರುತ್ತಿದ್ದಾರೆ, ಅಸ್ಸಾಂ ಕಾರ್ಮಿಕರು ಬರುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರೇ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಇಂದು ಮಾಕುಟ್ಟ ಪೊಲೀಸ್ ಔಟ್ ಪೋಸ್ಟ್ನಲ್ಲಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿಸಿಕೊಂಡು ಮುಂದೆ ಸಾಗಲು ನೂರಾರು ವಾಹನಗಳು ಸರದಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬAದಿತು.
ಒAದೆರೆಡು ದಿನ ಸಾರ್ವಜನಿಕರನ್ನು ಮೆಚ್ಚಿಸಲು ಗಡಿಯಲ್ಲಿ ಪರೀಕ್ಷೆ ನಡೆಸಿ, ರಾತ್ರಿಯಾದ ಮೇಲೆ ಮುನ್ನೂರು ರೂಪಾಯಿಗೆ ಮತ್ತೆ ಗಡಿ ಬಾಗಿಲು ತೆರೆದುಕೊಂಡರೆ ಅದಕ್ಕೆ ಬೆಲೆಯನ್ನು ಸಾರ್ವಜನಿಕರೇ ತೆರಬೇಕಾದ ಸನ್ನಿವೇಶವಿದೆ.
ಜೊತೆಗೆ ಮೂರನೇ ಅಲೆ ಬಂದರೂ ಎರಡನೇ ಅಲೆಯ ಲಾಕ್ಡೌನ್ ಮುಗಿದಿಲ್ಲ ಹಾಗೇ ಪುನಃ ಮೂರನೇ ಅಲೆಯ ಲಾಕ್ಡೌನ್ ಘೋಷಣೆಯಾದರೆ ಜಿಲ್ಲೆಯ ಗತಿ ಏನಾಗಬಹುದು? ಜನರು ಅದೆಷ್ಟು ಸಂಕಷ್ಟಕ್ಕೆ ಬೀಳಬಹುದು ಇವೆಲ್ಲವೂ ಈಗ ಗಡಿಯಲ್ಲಿ ತಪಾಸಣೆ ಮಾಡುತ್ತಿರುವ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ಕರ್ತವ್ಯ ನಿಷ್ಠೆಯ ಮೇಲೆ ನಿಂತಿದೆ ಎಂದರೆ ತಪ್ಪಾಗಲಾರದು.