ಗೋಣಿಕೊಪ್ಪಲು, ಜು. ೩: ರೈತರು ತಮ್ಮ ತೋಟದಲ್ಲಿ ಬೆಳೆದ ಮರಗಳನ್ನು ರೈತರ ಅನುಕೂಲಕ್ಕಾಗಿ ಬಳಕೆ ಮಾಡಿಕೊಳ್ಳುವ ಸಂದರ್ಭ ಕಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಕಡತ ವಿಲೇವಾರಿಗೆ ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ ಎಂದು ರೈತ ಸಂಘದ ಮುಖಂಡರು ಸಿಸಿಎಫ್ ತಖ್ತ್ತ್ ಸಿಂಗ್ ಅವರ ಗಮನ ಸೆಳೆದರು.

ತಿತಿಮತಿಯ ಅರಣ್ಯ ಕಚೇರಿ ಯಲ್ಲಿ ಆಯೋಜನೆಗೊಂಡಿದ್ದ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ರೈತರು ಅರಣ್ಯ ಇಲಾಖೆಯ ವತಿಯಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಮುಂದೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಿಟ್ಟರು.

ರೈತರು ತಮ್ಮ ತೋಟದಲ್ಲಿ ತಾವೇ ಬೆಳೆದಿರುವ ಮರಗಳನ್ನು ರೈತರು ಮನೆಗಳನ್ನು ಕಟ್ಟುವ ಸಂದರ್ಭದಲ್ಲಿ ಮರ ಕಡಿಯಲು ಅನುಮತಿಗಾಗಿ ಕಚೇರಿಗೆ ತೆರಳುತ್ತಾರೆ.

ಆ ಸಂದರ್ಭದಲ್ಲಿ ಕಚೇರಿ ಯಲ್ಲಿರುವ ಕೆಲವು ಸಿಬ್ಬಂದಿಗಳು ಅನುಮತಿ ನೀಡುವ ಕಡತ ವಿಲೇವಾರಿಗೆ ಅನವಶ್ಯಕ ತೊಂದರೆ ನೀಡುವ ಮೂಲಕ ರೈತರನ್ನು ಅನೇಕ ಬಾರಿ ಕಚೇರಿಗೆ ಸುತ್ತಾಡಿಸುತ್ತಿದ್ದಾರೆ. ಇದರಿಂದಾಗಿ ರೈತರ ಸಮಯ ವ್ಯರ್ಥ ದೊಂದಿಗೆ ಅನವಶ್ಯಕ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಮನು ಸೋಮಯ್ಯ ಗಂಭೀರ ಆರೋಪ ಮಾಡಿದರು.

ಇವರ ಮಾತಿಗೆ ಉತ್ತರಿಸಿದ ಸಿಸಿಎಫ್ ಕಡತಗಳಿಗೆ ಹಿರಿಯ ಅಧಿಕಾರಿಗಳು ನಿಯಮಾನುಸಾರ ಅನುಮತಿ ನೀಡುತ್ತಿದ್ದಾರೆ. ಸ್ಥಳೀಯ ಮಟ್ಟದ ಸಿಬ್ಬಂದಿಗಳು ಅನವಶ್ಯಕ ತೊಂದರೆ ನೀಡುತ್ತಿರುವ ಬಗ್ಗೆ ಸ್ಪಷ್ಟ ಮಾಹಿತಿ ಪಡೆದು ಅಂತಹ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಕಾಡು ಪ್ರಾಣಿಗಳಿಂದ ರೈತರ ಜಾನುವಾರುಗಳ ಮೇಲೆ ದಾಳಿ ನಡೆದ ಸಂದರ್ಭ ಇಲಾಖೆ ನೀಡುವ ಪರಿಹಾರದ ಬಗ್ಗೆ ಮಾಹಿತಿ ಬಯಸಿದರು. ಇದಕ್ಕೆ ಉತ್ತರಿಸಿದ ಸಿಸಿಎಫ್ ಸರ್ಕಾರದ ಸುತ್ತೋಲೆಯಂತೆ ಪರಿಹಾರ ವಿತರಣೆಯಲ್ಲಿ ಏರಿಕೆ ಆಗಿದೆ. ಪ್ರಸ್ತುತ ಹಾಲು ಕರೆಯುವ ಹಸುವಿನ ಮೇಲೆ ದಾಳಿ ನಡೆದರೆ ರೂ. ೩೦ ಸಾವಿರ, ಎತ್ತು, ದನಗಳ ಮೇಲೆ ದಾಳಿ ನಡೆದರೆ ೨೫ ಸಾವಿರ ಹಾಗೂ ಕರುವಿನ ಮೇಲೆ ದಾಳಿ ನಡೆದರೆ ರೂ. ೧೬ ಸಾವಿರ ನಿಗದಿ ಪಡಿಸಲಾಗಿದೆ. ಈ ರೀತಿಯಲ್ಲಿ ಪರಿಹಾರ ನೀಡ ಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ಈ ವೇಳೆ ಮಧ್ಯ ಪ್ರವೇಶ ಮಾಡಿ ಮಾತನಾಡಿದ ತಿತಿಮತಿ ವಲಯದ ಎಸಿಎಫ್ ಉತ್ತಯ್ಯ, ಕಾಡು ಪ್ರಾಣಿಗಳಿಂದ ಜಾನುವಾರುಗಳ ಮೇಲೆ ದಾಳಿ ನಡೆದ ಸಂದರ್ಭ ಸ್ಥಳದಲ್ಲಿಯೇ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಾರೆ, ಇದರಿಂದಾಗಿ ಸಮಸ್ಯೆ ಎದುರಾಗಿದೆ. ಪಲಾನುಭವಿಯ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ವ್ಯವಸ್ಥೆ ಇರುವುದರಿಂದ ಕನಿಷ್ಟ ೫ ದಿನಗಳ ಸಮಯ ಬೇಕೆಂದು ಮಾಹಿತಿ ನೀಡಿದರು.

ಇನ್ನು ಮುಂದೆ ರೈತರು ಒತ್ತಡ ಹೇರದ ರೀತಿಯಲ್ಲಿ ಎಚ್ಚರಿಕೆ ವಹಿಸುವುದಾಗಿ ರೈತ ಮುಖಂಡರು ಭರವಸೆ ನೀಡಿದರು ಆದರೆ, ೫ ದಿನ ಮೀರಿದರೆ ಇದರ ಜವಾಬ್ದಾರಿ ತಾವೇ ಹೊರಬೇಕೆಂದು ಎಚ್ಚರಿಕೆ ನೀಡಿದರು. ಕಾಡಾನೆಗಳ

(ಮೊದಲ ಪುಟದಿಂದ) ಹಾವಳಿಯನ್ನು ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾರ್ಯದ ಕೆಲಸಕ್ಕೆ ವೇಗ ಹೆಚ್ಚಿಸಬೇಕು ತಿತಿಮತಿ ಭಾಗದಲ್ಲಿ ಕೆಲಸ ನಿಧಾನ ಗತಿಯಲ್ಲಿ ಸಾಗುತ್ತಿದೆ.ಉಳಿದಿರುವ ಮೂರು ಕೀ.ಮೀ.ಗೆ ಆದಷ್ಟು ಬೇಗ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಕೂಡಲೇ ಕಾರ್ಯೋನ್ಮುಖರಾಗುವಂತೆ ಮನುಸೋಮಯ್ಯ ಗಮನ ಸೆಳೆದರು.

ಈಗಾಗಲೇ ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದೇನೆ ಪ್ರಸ್ತುತ ಸಾಲಿನಲ್ಲಿ ಉಳಿದಿರುವ ಕೆಲಸ ಸಂಪೂರ್ಣ ಮಾಡಲಾಗುತ್ತದೆ ಎಂದು ಸಿಸಿಎಫ್ ಭರವಸೆ ನೀಡಿದರು.

ವನ್ಯಪ್ರಾಣಿ ಗಳಿಂದ ಮಾನವನ ಜೀವಕ್ಕೆ ಹಾನಿಯಾದ ಸಂದರ್ಭ ಆಯಾ ಕುಟುಂಬಕ್ಕೆ ಉದ್ಯೋಗ, ಮಕ್ಕಳ ವಿದ್ಯಬ್ಯಾಸಕ್ಕೆ ಇಲಾಖೆ ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಅಂಗವಿಕಲರಾಗಿ ಮನೆಯಲ್ಲಿ ಉಳಿದು ಕೊಂಡಿರುವವರಿಗೂ ಸಹಾಯ ನೀಡಬೇಕು ಎಂದು ಗಮನ ಸೆಳೆದರು.

ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ ಆದಷ್ಟು ಬೇಗನೇ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಸಿಸಿಎಫ್ ತಖ್ತ್ ಸಿಂಗ್ ಭರವಸೆ ನೀಡಿದರು.

ತೋಟದಲ್ಲಿ ಇರುವ ಫಸಲು ಗಿಡಗಳಿಗೆ ವನ್ಯಪ್ರಾಣಿ ಗಳಿಂದ ಹಾನಿಯಾದ ಸಂದರ್ಭ ಹಳೆಯ ಕಾಲದ ಸುತ್ತೋಲೆಯಂತೆ ಪರಿಹಾರ ನೀಡುವುದು ಸರಿಯಲ್ಲ. ಕಾಲ ಬದಲಾಗಿದೆ ಪರಿಹಾರ ಹತ್ತು ಪಟ್ಟು ಹೆಚ್ಚಳ ಮಾಡುವಂತೆ ಕಾನೂನು ಸಲಹೆಗಾರರಾದ ಹೇಮಚಂದ್ರ ಅಧಿಕಾರಿಗಳ ಗಮನ ಸೆಳೆದರು. ಈ ಬಗ್ಗೆ ವರದಿ ಸರ್ಕಾರದ ಮಟ್ಟದಲ್ಲಿದೆ ಆದಷ್ಟು ಬೇಗ ಹೊಸ ಸುತ್ತೋಲೆ ಬರುವ ವಿಶ್ವಾಸವಿದೆ ಎಂದು ಸಿಸಿಎಫ್ ಭರವಸೆ ನೀಡಿದರು. ಸಭೆಯಲ್ಲಿ ರೈತರ ಹಲವು ವಿಚಾರಗಳ ಬಗ್ಗೆ ಗಮನ ಸೆಳೆಯಲಾಯಿತು

ಸಭೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಹೇಶ್ ಕುಮಾರ್, ಡಿ.ಎಫ್.ಓ. ಚಕ್ರಪಾಣಿ, ಹುಣಸೂರು ಉಪವಿಭಾಗದ ಎಸಿಎಫ್ ಎ.ವಿ. ಸತೀಶ್, ತಿತಿಮತಿ ಎಸಿಎಫ್ ಉತ್ತಪ್ಪ, ಆರ್.ಎಫ್.ಓ. ಅಶೋಕ್ ಹುನಗುಂದ ಸೇರಿದಂತೆ ರೈತ ಸಂಘದ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ತಾಲೂಕು ಅಧ್ಯಕ್ಷ ಬಸಜಮಾಡ ಭವಿಕುಮಾರ್, ವಿವಿಧ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಮಂಡೇಪAಡ ಪ್ರವೀಣ್, ಅಪ್ಪಚಂಗಡ ಮೋಟಯ್ಯ, ಮೇಚಂಡ ಕಿಶ ಮಾಚಯ್ಯ, ತೀತರಮಾಡ ರಾಜ, ಪುಚ್ಚಿಮಾಡ ರಾಯ್ ಮಾದಪ್ಪ, ಗಾಡಂಗಡ ಉತ್ತಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

-ಹೆಚ್.ಕೆ. ಜಗದೀಶ್