ವಿಜ್ಞಾನ, ವ್ಯಾಪಾರ, ಉದ್ಯಮಶೀಲತೆ, ಶೈಕ್ಷಣಿಕ ವಲಯಗಳ ಸಮನ್ವಯತೆಗೆ ಒತ್ತು

ಬೆಂಗಳೂರು, ಜು. ೨: ಜೈವಿಕ ವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವ ದಿಸೆಯಲ್ಲಿ ರಾಜ್ಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಎಲೆಕ್ಟಾçನಿಕ್ ಸಿಟಿಯ ಜೈವಿಕ ತಂತ್ರಜ್ಞಾನ ಪಾರ್ಕ್ನಲ್ಲಿ ರಾಜ್ಯದ ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಜೈವಿಕ ತಂತ್ರಜ್ಞಾನ ಉದ್ಯಮಿಗಳು ಹಾಗೂ ಸ್ಟಾರ್ಟ್ ಅಪ್ ಪ್ರಮುಖರೊಂದಿಗೆ ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಜ್ಞಾನ, ವ್ಯಾಪಾರ, ಉದ್ಯಮಶೀಲತೆ ಹಾಗೂ ಶೈಕ್ಷಣಿಕ ವಲಯಗಳ ನಡುವಿನ ಸಮನ್ವಯತೆಯಿಂದ ಜನರ ಬದುಕಿನ ಮಟ್ಟ ಸುಧಾರಿಸಲು ಮೋದಿ ನೇತೃತ್ವದ ಸರ್ಕಾರ ಒತ್ತು ನೀಡಿದೆ ಎಂದರು. ಯಾವುದೇ ವೈಜ್ಞಾನಿಕ ಸಾಧನೆಗೆ ಜೀವ ವಿಜ್ಞಾನವೇ ಬುನಾದಿ. ಇದಕ್ಕೆ ಸಂಬAಧಿಸಿದAತೆ ಕರ್ನಾಟಕ ಸರ್ಕಾರವು ಜೀವ ವಿಜ್ಞಾನ ಹಾಗೂ ಜೈವಿಕ ತಾಂತ್ರಿಕತೆಯ ಬೆಳವಣಿಗೆಗೆ ದೇಶದಲ್ಲೇ ಮಾದರಿ ಎನ್ನಿಸುವಂತಹ ವಾತಾವರಣ ಸೃಷ್ಟಿಸಿದೆ ಎಂದರು. ವಿವಿಧ ಇಲಾಖೆಗಳಡಿ ನಡೆಯುತ್ತಿರುವ ವೈಜ್ಞಾನಿಕ ಸಂಶೋಧನೆಗಳ ನಡುವೆ ಸಮನ್ವಯತೆ ಉಂಟುಮಾಡುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ. ಇದೇ ವೇಳೆ, ಯಾವುದೇ ಅಭಿಪ್ರಾಯ, ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಲಾಗುವುದು. ವೈಜ್ಞಾನಿಕ ಹಾಗೂ ತಾಂತ್ರಿಕ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದೇ ಸರ್ಕಾರದ ಅಂತಿಮ ಉದ್ದೇಶ ಎಂದು ಸೀತಾರಾಮನ್ ಸ್ಪಷ್ಟಪಡಿಸಿದರು. ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಮಾತನಾಡಿ, ರಾಜ್ಯ ಮಾಹಿತಿ ತಂತ್ರಜ್ಞಾನ ರಾಜಧಾನಿ ಮಾತ್ರವಲ್ಲದೇ ಜೈವಿಕ ತಂತ್ರಜ್ಞಾನದ ತವರು ಕೂಡ ಹೌದು. ಕಿಣ್ವಗಳು (ಎಂನ್ಸೆಮ್ಸ್), ಬಯೋಫಾರ್ಮಾ, ಬಯೋಫಾರ್ಮಸ್ಯೂಟಿಕಲ್, ಸಸ್ಯ ಆನುವಂಶೀಯತೆ, ವಂಶವಾಹಿನಿಗಳ ಅನುಕ್ರಮಣಿಕೆ, ಜೈವಿಕ ಸಂಸ್ಕರಣೆಗೆ ಸಂಬAಧಿಸಿದ ಆವಿಷ್ಕಾರಗಳಿಗೆ ಬೆಂಗಳೂರು ಪ್ರಮುಖ ಕಾರ್ಯನೆಲೆಯಾಗಿದೆ ಎಂದರು. ಈ ಕ್ಷೇತ್ರವು ಹೆಚ್ಚಿನ ಉದ್ಯೋಗ ಸೃಷ್ಟಿಸುವ ಜೊತೆಗೆ ಉತ್ಪಾದಕತೆ ಹಾಗೂ ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಆಹಾರ ಭದ್ರತೆ, ಆರೋಗ್ಯ ಸೇವೆ, ಶುದ್ಧ ಇಂಧನ, ಸ್ವಚ್ಛ ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಜೊತೆಗೆ, ಕೋವಿಡ್-೧೯ ಸೋಂಕಿನ ಸನ್ನಿವೇಶದ ನವೋದ್ಯಮಗಳಿಗೆ ಹೊಸ ಅವಕಾಶಗಳನ್ನು ಉಂಟುಮಾಡಿವೆ. ಇದಕ್ಕೆ ಪೂರಕವಾಗಿ, ರಾಜ್ಯವು ಸ್ಪರ್ಧಾತ್ಮಕ ಸಂಸ್ಥೆಯ (ಐಎಫ್ ಸಿ) ಸಹಭಾಗಿತ್ವದಲ್ಲಿ ‘ಕರ್ನಾಟಕ ನಾವೀನ್ಯತಾ ಒಳನೋಟ-೨೦೩೦’ ಹೊರತರಲು ತಯಾರಿ ನಡೆಸುತ್ತಿದೆ ಎಂದು ವಿವರಿಸಿದರು.

ಕೋವಿಡ್ ಮೊದಲ ಅಲೆ ವೇಳೆ ಭಾರತದಲ್ಲಿ ಔಷಧಿಗಳ ದುರ್ಬಳಕೆ

ನವದೆಹಲಿ, ಜು. ೨: ಮಾರಕ ಕೊರೊನಾ ಸೋಂಕು ಮೊದಲ ಅಲೆ ವೇಳೆ ಭಾರತದಲ್ಲಿ ಆ್ಯಂಟಿ ಬಯಾಟಿಕ್ ಔಷಧಿಗಳ ಮಾರಾಟ ಗಗನಕ್ಕೇರಿ, ಯಥೇಚ್ಚ ದುರ್ಬಳಕೆ ಮಾಡಲಾಗಿತ್ತು. ಈ ಕುರಿತಂತೆ ಅಮೇರಿಕಾದ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕರು ಅಧ್ಯಯನ ನಡೆಸಿದ್ದು, ಅಧ್ಯಯನದ ವರದಿಯಂತೆ ಕಳೆದ ವರ್ಷ ಭಾರತದಲ್ಲಿ ಸಂಭವಿಸಿದ್ದ ಕೋವಿಡ್ ಮೊದಲ ಅಲೆ ವೇಳೆ ಆ್ಯಂಟಿ ಬಯಾಟಿಕ್‌ಗಳ ಮಾರಾಟ ಪ್ರಮಾಣ ಗಗನಕ್ಕೇರಿತ್ತು. ಕೃತಕ ಬೇಡಿಕೆ ಉಂಟಾಗಿ ದಾಖಲೆ ಪ್ರಮಾಣದಲ್ಲಿ ಆ್ಯಂಟಿ ಬಯಾಟಿಕ್‌ಗಳನ್ನು ಯಥೇಚ್ಛವಾಗಿ ಅಥವಾ ಅಗತ್ಯಕ್ಕಿಂತ ಹೆಚ್ಚಾಗಿ ಬಳಕೆ ಮಾಡಲಾಗಿತ್ತು. ಸೌಮ್ಯ ಮತ್ತು ಮಧ್ಯಮ ಸೋಂಕಿತರಿಗೆ ಚಿಕಿತ್ಸೆ ನೀಡಲು ಔಷಧಿಗಳನ್ನು ಬಳಸಲಾಗಿತ್ತು. ಅಂದಾಜಿನ ಪ್ರಕಾರ, ಕೋವಿಡ್-೧೯ ಚಿಕಿತ್ಸೆಗಾಗಿ ೨೧೬.೪ ಮಿಲಿಯನ್‌ಗೂ ಹೆಚ್ಚು ಪ್ರಮಾಣದ ಪ್ರತಿಜೀವಕ(ಆ್ಯಂಟಿ ಬಯಾಟಿಕ್)ಗಳು ಮತ್ತು ೩೮ ಮಿಲಿಯನ್‌ಗೂ ಹೆಚ್ಚು ಅಜಿಂಥ್ರೊಮೈಸಿನ್ ಔಷಧಿಗಳನ್ನು ಜೂನ್ ೨೦೨೦ ರಿಂದ ಸೆಪ್ಟೆಂಬರ್ ೨೦೨೦ ರವರೆಗೆ ಬಳಕೆ ಮಾಡಲಾಗಿತ್ತು. ಇದು ಭಾರತದಲ್ಲಿ ಕೋವಿಡ್ ಮೊದಲ ಅಲೆಯ ಉತ್ತುಂಗದ ಅವಧಿಯಾಗಿತ್ತು ಎಂದು ತಜ್ಞರು ಹೇಳಿದ್ದಾರೆ. ಇದೇ ವೇಳೆ ಇಷ್ಟು ಪ್ರಮಾಣದ ಔಷಧಿ ಬಳಕೆ ಅಗತ್ಯವಿರಲಿಲ್ಲ ಎಂದೂ ಅಧ್ಯಯನದಲ್ಲಿ ಅಭಿಪ್ರಾಯಪಡಲಾಗಿದ್ದು, ಔಷಧಿಗಳ ಇಂತಹ ದುರುಪಯೋಗ ಸೂಕ್ತವಲ್ಲವೆಂದು ಪರಿಗಣಿಸಲಾಗಿದೆ. ತಜ್ಞರು ಅಭಿಪ್ರಾಯ ಪಟ್ಟಿರುವಂತೆ ಪ್ರತಿಜೀವಕಗಳು ಅಥವಾ ಆ್ಯಂಟಿ ಬಯಾಟಿಕ್‌ಗಳು ಬ್ಯಾಕ್ಟೀರಿಯಾ ಸೋಂಕಿನ ವಿರುದ್ಧ ಮಾತ್ರ ಪರಿಣಾಮಕಾರಿ. ಆದರೆ ಕೋವಿಡ್-೧೯ ನಂತಹ ವೈರಲ್ ಸೋಂಕುಗಳಿಗಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಪ್ರತಿಜೀವಕಗಳ ಅತಿಯಾದ ಬಳಕೆಯು ಔಷಧ-ನಿರೋಧಕ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಪ್ರತಿಜೀವಕ ನಿರೋಧಕತೆಯು ಜಾಗತಿಕ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಬೆದರಿಕೆಯಾಗಿದೆ ಎಂದು ಅಧ್ಯಯನದ ಹಿರಿಯ ಲೇಖಕ ಮತ್ತು ಬಾರ್ನ್ಸ್-ಯಹೂದಿ ಆಸ್ಪತ್ರೆಯ ಸಹಾಯಕ ಆಸ್ಪತ್ರೆಯ ಸಾಂಕ್ರಾಮಿಕ ರೋಗಶಾಸ್ತçಜ್ಞ ಸುಮಂತ್ ಗಾಂಡ್ರಾ ಹೇಳಿದ್ದಾರೆ. ಪ್ರತಿಜೀವಕಗಳ ಅತಿಯಾದ ಬಳಕೆಯು ಸಣ್ಣಪುಟ್ಟ ಗಾಯಗಳು ಮತ್ತು ನ್ಯುಮೋನಿಯಾದಂತಹ ಸಾಮಾನ್ಯ ಸೋಂಕುಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ, ಇದರರ್ಥ ಈ ಪರಿಸ್ಥಿತಿಗಳು ಗಂಭೀರ ಮತ್ತು ಮಾರಕವಾಗಬಹುದು ಎಂದು ಗಾಂಡ್ರಾ ಎಚ್ಚರಿಕೆ ನೀಡಿದ್ದಾರೆ. ಪಿಎಲ್‌ಒಎಸ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ೨೦೧೮ ರ ಜನವರಿಯಿಂದ ಡಿಸೆಂಬರ್ ೨೦೨೦ ರವರೆಗೆ ಭಾರತದ ಖಾಸಗಿ ಆರೋಗ್ಯ ಕ್ಷೇತ್ರದ ಎಲ್ಲಾ ಪ್ರತಿಜೀವಕಗಳ ಮಾಸಿಕ ಮಾರಾಟವನ್ನು ವಿಶ್ಲೇಷಿಸಿದೆ.

ವಿಜ್ಞಾನ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ನಿಧನ

ಬೆಂಗಳೂರು, ಜು. ೨: ಡಿಆರ್‌ಡಿಒ ಮಾಜಿ ವಿಜ್ಞಾನಿ, ಹೆಚ್‌ಎಎಲ್ ಸಂಸ್ಥೆಯ ಹಿರಿಯ ನಿವೃತ್ತ ಇಂಜಿನಿಯರ್, ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ಜುಲೈ ೨ ರಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ ೬೧ ವರ್ಷ ವಯಸ್ಸಾಗಿತ್ತು. ವಾರದ ಹಿಂದೆ ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದ ವೈದ್ಯರು ಸುಧೀಂದ್ರ ಹಾಲ್ದೊಡ್ಡೇರಿ ಅವರ ಆರೋಗ್ಯ ಸುಧಾರಣೆ ಪರಿಸ್ಥಿತಿ ಕಷ್ಟವಿದೆ ಎಂಬ ಮಾಹಿತಿ ನೀಡಿದ್ದರು. ಸುಧೀಂದ್ರ ಹಾಲ್ದೊಡ್ಡೇರಿ ಅವರ ಮೆದುಳಿಗೆ ಆಮ್ಲಜನಕ ಪೂರೈಕೆಯಾಗುವುದು ಸ್ಥಗಿತಗೊಂಡಿದ್ದರಿAದ ಅವರ ಮೆದುಳು ನಿಷ್ಕಿçಯಗೊಂಡಿತ್ತು. ಈ ಹಿನ್ನೆಲೆ ಕುಟುಂಬ ಸದಸ್ಯರು ದೇಹದಾನಕ್ಕೆ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸುಧೀಂದ್ರ ಹಾಲ್ದೊಡ್ಡೇರಿ ಅವರು ವಿಜಯ ಕರ್ನಾಟಕ, ಕನ್ನಡಪ್ರಭ ಸೇರಿದಂತೆ ಅನೇಕ ಪತ್ರಿಕೆಗಳಿಗೆ ವಿಜ್ಞಾನ ಅಂಕಣಗಳನ್ನು ಬರೆಯುತ್ತಿದ್ದರು.

ಪುಲ್ವಾಮದಲ್ಲಿ ಉಗ್ರರ ಹತ್ಯೆ

ಜಮ್ಮು, ಜು. ೨: ಕಣಿವೆ ಪ್ರದೇಶದಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆ ಗುಂಡಿನ ಸಪ್ಪಳ ಕೇಳಿಬಂದಿದೆ. ದಾಳಿಯಲ್ಲಿ ಓರ್ವ ಯೋಧರು ಹುತಾತ್ಮರಾಗಿದ್ದು, ಮೂವರು ಎಲ್‌ಇಟಿ ಉಗ್ರರು ಹತರಾಗಿದ್ದಾರೆ. ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಹಂಜಿನ್ ರಾಜ್ ಪೊರಾ ಪ್ರದೇಶದಲ್ಲಿ ಭದ್ರತಾ ಪಡೆ ಯೋಧರು ಮತ್ತು ಎಲ್‌ಇಟಿ ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದು ಯೋಧರೊಬ್ಬರು ಹುತಾತ್ಮಗೊಂಡಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಉಗ್ರರ ಇರುವಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ ನಡೆಸಲು ಆರಂಭಿಸಿದರು. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ಮಳೆಗೈಯಲು ಆರಂಭಿಸಿದರು. ಪೊಲೀಸರು ಮತ್ತು ಸೇನಾಪಡೆ ಜಂಟಿಯಾಗಿ ಇಂದು ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿತು. ಉಗ್ರರ ಇರುವಿಕೆ ಬಗ್ಗೆ ಖಚಿತವಾಗಿ ಮಾಹಿತಿ ಪಡೆದ ಪೊಲೀಸರು ಉಗ್ರರನ್ನು ಶರಣಾಗುವಂತೆ ಕೇಳಿಕೊಂಡರೂ ಒಪ್ಪದೆ ದಾಳಿ ನಡೆಸಿದಾಗ ಎನ್‌ಕೌಂಟರ್ ಏರ್ಪಟ್ಟಿತು. ದಾಳಿಯಲ್ಲಿ ಮೂವರು ಉಗ್ರರ ಹತ್ಯೆಯಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.