ಸೋಮವಾರಪೇಟೆ, ಜು. ೩: ಪಟ್ಟಣದ ಮಡಿಕೇರಿ ರಸ್ತೆಯ ಕಾಂಪ್ಲೆಕ್ಸ್ನಲ್ಲಿ ಕಳೆದ ಕೆಲ ತಿಂಗಳ ಹಿಂದಷ್ಟೇ ಆರಂಭಗೊAಡ ಮೋರ್ ಸೂಪರ್ ಮಾರ್ಕೆಟ್ ಗ್ರಾಹಕರೋರ್ವರಿಗೆ ಕೆಟ್ಟ ಮೊಟ್ಟೆ ಕೊಟ್ಟು ಕೈಸುಟ್ಟುಕೊಂಡಿದೆ!

ಕಳೆದ ತಾ. ೭.೦೬.೨೦೨೧ ರಂದು ಪಟ್ಟಣ ಸಮೀಪದ ಕಾನ್ವೆಂಟ್‌ಬಾಣೆ ನಿವಾಸಿ ಪಿ.ಎಂ. ಗಣಪತಿ ಎಂಬವರು ಮೋರ್‌ನಲ್ಲಿ ೩೦ ಮೊಟ್ಟೆ ಖರೀದಿಸಿದ್ದರು. ಈ ಮೊಟ್ಟೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ನೋಡಿದಾಗ ಹಲವಷ್ಟು ಮೊಟ್ಟೆಗಳು ಕೊಳೆತು ಒಳಗೆ ಹುಳುಗಳು ಕಂಡುಬAದವು.

ಮೊಟ್ಟೆಗಳ ಪ್ಯಾಕ್‌ನಲ್ಲಿ ಪ್ಯಾಕಿಂಗ್ ದಿನಾಂಕ ಮೇ ೩೦, ೨೦೨೧ ಎಂದು ನಮೂದಾಗಿದ್ದು, ಮುಂದಿನ ೨೧ ದಿನಗಳವರೆಗೆ ಬಳಸಬಹುದು ಎಂದು ತಿಳಿಸಲಾಗಿತ್ತು. ಆದರೆ ಖರೀದಿಸಿದ ದಿನದಂದೇ ಮೊಟ್ಟೆಗಳು ಹಾಳಾಗಿದ್ದವು.

ಈ ಬಗ್ಗೆ ಮೋರ್ ಮಳಿಗೆಯ ದೂರು ಸ್ವೀಕಾರ ಸಂಖ್ಯೆಗೆ ಕರೆ ಮಾಡಿ, ಬಿಲ್ ಸಹಿತ ಕೊಳೆತ ಮೊಟ್ಟೆಗಳ ವೀಡಿಯೋಗಳನ್ನು ವಾಟ್ಸಾಪ್ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಿಬ್ಬಂದಿ ಮುಂದಿನ ಕಾರ್ಯನಿರತ ದಿನದಲ್ಲಿ ಮೊಟ್ಟೆಗಳನ್ನು ಬದಲಿಸಿ ಕೊಡುವುದಾಗಿ ತಿಳಿಸಿದ್ದರು.

ಆ ನಂತರ ಮೋರ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ತದನಂತರ ತಾ. ೧೪.೦೬.೨೦೨೧ರಂದು ಮತ್ತೆ ಮನವಿ ಮಾಡಿದರೂ ಮೊಟ್ಟೆಯನ್ನು ಬದಲಿಸಿಕೊಟ್ಟಿರಲಿಲ್ಲ. ಈ ಹಿನ್ನೆಲೆ ಗಣಪತಿ ಅವರು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು.

ಅದರಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಮೋರ್ ಮಳಿಗೆಗೆ ನೋಟೀಸ್ ನೀಡಿ, ಮುಂದಿನ ೭ ದಿನಗಳ ಒಳಗಾಗಿ ಸಮಜಾಯಿಷಿಕೆ ನೀಡಬೇಕು. ನೀವುಗಳು ಮಾರಾಟ ಮಾಡಿದ ಮೊಟ್ಟೆಗಳನ್ನು ಎಲ್ಲಿಂದ ಖರೀದಿ ಮಾಡಿದ್ದೀರಿ? ಸದರಿ ಸರಬರಾಜುದಾರರು ಎಫ್‌ಎಸ್‌ಎಸ್‌ಎ ಆಹಾರ ಪರವಾನಗಿ ಪಡೆದಿದ್ದಾರೆಯೇ? ಇದರೊಂದಿಗೆ ನೀವುಗಳು ಆಹಾರ ಪರವಾನಗಿ ಪತ್ರ ಪಡೆಯಲು ಮುಂದಿನ ೭ ದಿನಗಳ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಂತೆ ತಾ. ೨೫.೦೬.೨೦೨೧ರಂದು ನೀಡಿದ ನೋಟೀಸ್‌ನಲ್ಲಿ ಸೂಚಿಸಲಾಗಿತ್ತು.

ಆದರೆ ಇಲ್ಲಿಯವರೆಗೂ ಮೋರ್ ಮಳಿಗೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತಾಧಿಕಾರಿ ಡಾ. ಅನಿಲ್ ಧವನ್ ಹಾಗೂ ಸಿಬ್ಬಂದಿಗಳು ಪಟ್ಟಣದ ಮೋರ್ ಅಂಗಡಿಗೆ ಭೇಟಿ ನೀಡಿ, ಸೂಕ್ತ ಪರವಾನಗಿ ಇಲ್ಲದ ಹಿನ್ನೆಲೆ ಅಂಗಡಿಯ ಬಾಗಿಲು ತೆರೆಯದಂತೆ ಸೂಚಿಸಿದರು.

ಇದರೊಂದಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ೨೦೦೬, ರೂಲ್ಸ್ ೨೦೧೧ರಲ್ಲಿರುವ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬAದಿದ್ದು, ಇದು ಕಾನೂನು ಬಾಹಿರವಾಗಿದೆ. ಹೀಗಾಗಿ ಘಟಕವು ಕಾನೂನಾತ್ಮಕ ಕ್ರಮಕ್ಕೆ ಒಳಪಟ್ಟಿದ್ದು, ಆಹಾರ ವಹಿವಾಟನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಆಹಾರ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬೇಕು. ತಪ್ಪಿದ್ದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಕಾನೂನಿನ ಅನುಸಾರ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭ ದೂರುದಾರ ಗಣಪತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.