*ಗೋಣಿಕೊಪ್ಪ, ಜು. ೧: ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪುಣ್ಯ ತಿಥಿ ಹಾಗೂ ಜನ್ಮ ದಿನ ಸಪ್ತಾಹದ ಅಂಗವಾಗಿ ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾದಿಂದ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಛ ಜಲಮೂಲ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪೊನ್ನಂಪೇಟೆ ಸಂಭಯನಕೆರೆಯ ಬಳಿ ರಾಜ್ಯ ರೈತ ಮೋರ್ಚಾ ಸಮಿತಿ ಸದಸ್ಯೆ ಮತ್ತು ಕೊಡಗು ಸಹ ಉಸ್ತುವಾರಿ ಮಾಪಂಗಡ ಯಮುನಾ ಚಂಗಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಜ್ಯ ರೈತ ಮೋರ್ಚಾದ ಆದೇಶದಂತೆ ವೀರಾಜಪೇಟೆ ಮಂಡಳ ಕೃಷಿ ಮೋರ್ಚಾದ ವತಿಯಿಂದ ಕೆರೆಯ ಸುತ್ತಮುತ್ತ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರೆವುಗೊಳಿಸಿ ಶುದ್ದ ಜಲಮೂಲವನ್ನು ಕಾಪಾಡುವ ನಿಟ್ಟಿನಲ್ಲಿ ಕೃಷಿ ಮೋರ್ಚಾದ ಪದಾಧಿಕಾರಿಗಳು ಕಾರ್ಯಪ್ರವೃತ್ತರಾದರು. ಕೃಷಿ ಮೋರ್ಚಾದ ಅಧ್ಯಕ್ಷ ಕಟ್ಟೇರ ಈಶ್ವರ ಅವರ ಉಪಸ್ಥಿತಿಯಲ್ಲಿ ಪ್ರಧಾನ ಕಾರ್ಯದರ್ಶಿ ಕಬೀರ್‌ದಾಸ್, ಜಿಲ್ಲಾ ಸಮಿತಿ ಸದಸ್ಯೆ ಚೊಟ್ಟೆಕಾಳಪಂಡ ಆಶಾ, ತಾಲೂಕು ಕೃಷಿ ಮೋರ್ಚಾ ಪದಾಧಿಕಾರಿಗಳಾದ ಕಟ್ಟೇರ ಕವನ್, ಅಡ್ಡಂಡ ಮಂದಣ್ಣ, ಮಾಚಿಮಾಡ ಮಧು, ಮೂಕಳೇರ ದಿಲು ಹಾಗೂ ಕಾರ್ಯಕರ್ತರು, ಸ್ಥಳೀಯ ಕಾರ್ಮಿಕ ಹಾಜರಿದ್ದರು.