ಮಡಿಕೇರಿ, ಜು. ೧: ಮಡಿಕೇರಿ ತಾಲೂಕಿನ ಮರಗೋಡು ಗ್ರಾಮ ಸೇರಿದಂತೆ ಇತರ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಇದ್ದು, ಸಮಸ್ಯೆ ಬಗೆಹರಿಸಿಕೊಡುವಂತೆ ಮರಗೋಡು ವಿದ್ಯುತ್ ಬಳಕೆದಾರರ ವೇದಿಕೆ ವತಿಯಿಂದ ಮನವಿ ಸೆಸ್ಕ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಮಡಿಕೇರಿ ತಾಲೂಕು ಗ್ರಾಮಾಂತರ ಪ್ರದೇಶಗಳಾದ ಅಯ್ಯಂಗೇರಿ, ನೆಲಜಿ, ಪಾರಾಣೆ, ಮರಗೋಡು, ಹೊಸ್ಕೇರಿ, ಕಟ್ಟೆಮಾಡು ಗ್ರಾಮಗಳಿಗೆ ಮೈಸೂರಿನ ಹೂಟಗಳ್ಳಿ ಕೇಂದ್ರದಿAದ ಹುಣಸೂರು, ಪೊನ್ನಂಪೇಟೆ, ವೀರಾಜಪೇಟೆಗಾಗಿ ಮೂರ್ನಾಡಿನ ೩೩/೧೧ ಕೆವಿ ಉಪ ಕೇಂದ್ರದ ಮೂಲಕ ವಿದ್ಯುತ್ ಪೂರೈಕೆ ಆಗುತ್ತಿದೆ. ಮೂರ್ನಾಡಿನಲ್ಲಿ ಸ್ಥಾಪಿಸಲಾಗಿರುವ ೫ ಎಂ.ವಿ. ಪರಿವರ್ತಕದ ಸಾಮರ್ಥ್ಯ ಮೀರಿ ವಿದ್ಯುತ್ ಬಳಕೆಯಾಗುತ್ತಿದ್ದು, ಇದರಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗುತ್ತದೆ. ಪ್ರಮುಖವಾಗಿ ಮರಗೋಡು ವ್ಯಾಪ್ತಿಯಲ್ಲಿ ಕಾಫಿ ತೋಟಗಳು, ಸಣ್ಣ ಉದ್ದಿಮೆಗಳು, ಬ್ಯಾಂಕ್, ಇನ್ನಿತರ ಸಂಸ್ಥೆಗಳಿವೆ. ಆದರೆ, ವಿದ್ಯುತ್ ವ್ಯತ್ಯಯದಿಂದ ಯಾವುದೇ ಕೆಲಸಗಳಾಗುವುದಿಲ್ಲ. ಕಾಫಿ ತೋಟಕ್ಕೆ ನೀರು ಹಾಯಿಸಲು ವಿದ್ಯುತ್ ಕೊರತೆಯಿಂದಾಗಿ ಡೀಸೆಲ್ ಅವಲಂಬಿಸಬೇಕಾಗಿದ್ದು, ಡೀಸೆಲ್ ಬೆಲೆ ಕೂಡ ಏರಿಕೆಯಾಗುತ್ತಲೇ ಇದೆ. ಇದೀಗ ಕೋವಿಡ್ ಹಿನ್ನೆಲೆಯಲ್ಲಿ ಹೊರ ಜಿಲ್ಲೆ, ರಾಜ್ಯ, ರಾಷ್ಟçಗಳಲ್ಲಿ ಉದ್ಯೋಗದಲ್ಲಿದ್ದವರು ಗ್ರಾಮಕ್ಕೆ ಹಿಂತಿರುಗಿದ್ದು, ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದು, ವಿದ್ಯುತ್ ಅಡಚಣೆಯಿಂದಾಗಿ ಕೆಲಸ ಕೂಡ ಮಾಡಲು ಸಾಧ್ಯವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮರಗೋಡು ಬಳಿ ಒಂದು ೬೬/೧೧ ಕೆ.ವಿ. ಸಾಮರ್ಥ್ಯದ ಉಪಕೇಂದ್ರ ಸ್ಥಾಪನೆ ಮಾಡಬೇಕೆಂದು ವೇದಿಕೆ ವತಿಯಿಂದ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಯೋಜನೆ ಮತ್ತು ಸಾಮರಸ್ಯದ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳು ಪ್ರಸ್ತಾವನೆಯನ್ನು ತಾಂತ್ರಿಕ ಸಲಹಾ ಸಮಿತಿಯ ಮುಂದಿಡುವುದಾಗಿ ವೇದಿಕೆಗೆ ಭರವಸೆಯಿತ್ತಿದ್ದಾರೆ.

ಉಪಕೇಂದ್ರ ಸ್ಥಾಪನೆ, ಮಾಡಿದಲ್ಲಿ ಬಹುತೇಕ ಗ್ರಾಮಾಂತರ ಪ್ರದೇಶಗಳ ವಿದ್ಯುತ್ ಸಮಸ್ಯೆ ಬಗೆಹರಿಯಲಿದ್ದು, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಸೆಸ್ಕ್ ಅಭಿಯಂತರರು ಗಮನ ಹರಿಸಿ ಸಮಸ್ಯೆಗೆ ಪರಿಹಾರ ಒದಗಿಸುವಂತೆ ವೇದಿಕೆ ಪ್ರಮುಖರು ಮನವಿ ಮಾಡಿಕೊಂಡಿದ್ದಾರೆ.