ಸೋಮವಾರಪೇಟೆ, ಜೂ. ೧: ಆ ಮನೆ ತುಂಬೆಲ್ಲಾ ಮಕ್ಕಳ ಓಡಾಟ, ಸಣ್ಣ ಪುಟ್ಟ ಕಿತ್ತಾಟವಿರುತ್ತಿತ್ತು. ಅಪ್ಪ, ಅಮ್ಮ, ಅಜ್ಜ, ಅಜ್ಜಿಯೊಂದಿಗೆ ಎರಡು ಮಕ್ಕಳು ಜಗವನ್ನೇ ಮರೆತು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದರು. ವಸತಿ ಶಾಲೆಗೆ ರಜೆ ಇದ್ದುದರಿಂದ ಅಕ್ಕನೂ ಮನೆಗೆ ಬಂದಿದ್ದಳು. ಅಕ್ಕ-ತಮ್ಮನ ಆಟ ಮನೆಯಲ್ಲಿ ಜೋರಾಗಿತ್ತು. ನಿನ್ನೆ ಬೆಳಿಗ್ಗೆಯವರೆಗೂ ಸಂಭ್ರಮವಿದ್ದ ಮನೆಯಲ್ಲೀಗ ಸ್ಮಶಾನ ಮೌನ.

ತಾಲೂಕಿನ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಂಜಿಗನಹಳ್ಳಿ ಗ್ರಾಮದಲ್ಲಿ ನಿನ್ನೆ ನಡೆದ ಘಟನೆ ಹೃದಯ ವಿದ್ರಾವಕ. ಈರ್ವರು ಎಳೆಯ ಮಕ್ಕಳು ಜೋಕಾಲಿಯ ಸೀರೆಗೆ ಬಲಿಯಾಗಿ ಇಹಲೋಕ ತ್ಯಜಿಸಿದ ಸುದ್ದಿ ಆ ಮನೆ ಮಂದಿಯನ್ನು ಮಾತ್ರವಲ್ಲ; ಇಡೀ ಗ್ರಾಮವನ್ನೇ ದಿಗ್ಭçಮೆಗೊಳಿಸಿದೆ.

ಉಂಜಿಗನಹಳ್ಳಿಯ ಗಿರೀಶ್ (ರಾಜ) ಹಾಗೂ ಜಯಂತಿ ದಂಪತಿಯ ಈರ್ವರು ಮಕ್ಕಳಾದ ಮನೀಕ್ಷ ಹಾಗೂ ಪೂರ್ಣೇಶ್ ಜೋಕಾಲಿಯಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಜೋಕಾಲಿಯ ಸೀರೆ ಕುತ್ತಿಗೆಗೆ ಉರುಳಾಗಿ ಎಳೆಯ ಜೀವಗಳನ್ನು ಬಲಿ ಪಡೆದಿದೆ.

ನಿನ್ನೆ ದಿನ ತಂದೆ-ತಾಯಿ ಶುಂಠಿ ಕೆಲಸಕ್ಕೆ ತೆರಳಿದ್ದರು. ಅಜ್ಜ-ಅಜ್ಜಿ ಮನೆಯ ಸಮೀಪವಿರುವ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಲಸಕ್ಕೆ ತೆರಳುವ ಸಂದರ್ಭ ಮಕ್ಕಳು ಜೋಕಾಲಿ ಕಟ್ಟುತ್ತಿದ್ದರು. ಮಧ್ಯಾಹ್ನ ಊಟಕ್ಕೆಂದು ಆಗಮಿಸಿದ ಸಂದರ್ಭ ಈರ್ವರು ಮಕ್ಕಳು ಸೀರೆಯಲ್ಲಿ ನೇತಾಡುತ್ತಿದ್ದುದು ಕಂಡುಬAದಿದೆ.

ಮಕ್ಕಳು ಜೀವಂತ ಇರಬಹುದು ಎಂಬ ಆಸೆಯಿಂದ ಅಜ್ಜ ರಾಮಣ್ಣ ಅವರು ಕತ್ತಿಯಿಂದ ಸೀರೆಯನ್ನು ತುಂಡರಿಸಿ ಮಕ್ಕಳನ್ನು ಅಲ್ಲಾಡಿಸಿದರು. ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿತ್ತು. ನಂತರ ಪೋಷಕರಿಗೆ ವಿಷಯ ತಿಳಿಸಿ ಗೋಳಾಡಿದರು. ಅಕ್ಕಪಕ್ಕದವರು ಬಂದು ಪೊಲೀಸರಿಗೆ ಮಾಹಿತಿ ನೀಡಿ, ಮೃತದೇಹಗಳನ್ನು ಶವಾಗಾರಕ್ಕೆ ಸಾಗಿಸಿದರು.

ಬೆಳಿಗ್ಗೆ ಕಣ್ಣೆದುರೇ ಆಟವಾಡಿ ಕೊಂಡಿದ್ದ ಈರ್ವರು ಮಕ್ಕಳು ಸಂಜೆಯ ವೇಳೆಗೆ ಮರಣವನ್ನಪ್ಪಿದ ವಾರ್ತೆ ಪೋಷಕರಿಗೆ ಅರಗಿಸಿ ಕೊಳ್ಳಲೂ ಸಾಧ್ಯವಾಗಿಲ್ಲ. ಮಕ್ಕಳ ದೇಹ ವನ್ನಿಡಿದು ಎಷ್ಟೇ ಗೋಳಾಡಿದರೂ ಅಪ್ಪ-ಅಮ್ಮ ಅನ್ನಲಿಲ್ಲ. ಮಕ್ಕಳ ಅಗಲಿಕೆ ಯಿಂದ ಉಂಟಾದ ಆಘಾತದಿಂದ ಪೋಷಕರು ಈಗಲೂ ಹೊರಬಂದಿಲ್ಲ.

ಭಾಗಮAಡಲದ ವಸತಿ ಶಾಲೆಯಲ್ಲಿ ೯ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮನೀಕ್ಷಾ, ಕೊರೊನಾ ಹಿನ್ನೆಲೆ ಶಾಲೆಗಳು ಬಂದ್ ಆಗಿರುವುದರಿಂದ ಮನೆಗೆ ಬಂದಿದ್ದಳು. ಪರೀಕ್ಷೆಗಳೂ ನಡೆಯದ ಹಿನ್ನೆಲೆ ೯ ರಿಂದ ೧೦ನೇ ತರಗತಿಗೆ ಮುಂಬಡ್ತಿ ಹೊಂದಿದ್ದಳು. ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ೭ನೇ ತರಗತಿ ಕಲಿಯುತ್ತಿದ್ದ ಪೂರ್ಣೇಶ್ ೮ನೇ ತರಗತಿಗೆ ಉತ್ತೀರ್ಣನಾಗಿದ್ದ. ಇವರೀರ್ವರಿಗೂ ಅಕ್ಕಳಾಗಿರುವ ಪ್ರಥಮ ಪುತ್ರಿ ಮಂಗಳೂರಿನಲ್ಲಿ ನರ್ಸಿಂಗ್ ಮಾಡಿಕೊಂಡಿದ್ದು, ಅಲ್ಲೇ ನೆಲೆಸಿದ್ದಳು.

ಮನೆಯಲ್ಲಿದ್ದ ಮನೀಕ್ಷ ಮತ್ತು ಪೂರ್ಣೇಶ್ ಬಿಡುವಿಲ್ಲದಂತೆ ಆಟಗಳಲ್ಲಿ ತೊಡಗಿದ್ದರು. ಮಣ್ಣಿನಿಂದ ಅನೇಕ ಕಲಾಕೃತಿಗಳನ್ನು ರಚಿಸಿ, ಬಿಸಿಲಿಗೆ ಒಣಗಲು ಹಾಕಿದ್ದರು. ಮನೆ ಸಮೀಪದ ಮಾವಿನ ಮರದ ಬುಡದಡಿ ಜೋಪಡಿ ಕಟ್ಟಿ, ಅದರೊಳಗೆ ಮಣ್ಣಿನ ಗಣಪತಿ ನಿರ್ಮಿಸಿ, ಪೂಜಿಸಿದ್ದರು.

ಸದಾ ಚಟುವಟಿಕೆಯಲ್ಲಿರುತ್ತಿದ್ದ ಅಕ್ಕ-ತಮ್ಮ ವಿಧಿಯಾಟಕ್ಕೆ ಶರಣಾಗಿ ಇಹಲೋಕ ತ್ಯಜಿಸಿದ್ದಾರೆ. ಮಕ್ಕಳ ಅಗಲಿಕೆಯ ನೋವು ಹೆತ್ತಕರುಳನ್ನು ಬಹುವಾಗಿ ಪೀಡಿಸಿದೆ. ಆಘಾತ ದಿಂದ ಹೊರಬರಲಾಗದೇ, ದುಃಖವನ್ನು ಅದುಮಿಡಲಾಗದೇ ತಾಯಿ ಜಯಂತಿ ಮನದೊಳಗೆ ರೋಧಿಸುತ್ತಿದ್ದಾರೆ.

ಇಂದು ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಮನೆಗೆ ತಂದ ಸಂದರ್ಭ, ಪೋಷಕರು ಮಕ್ಕಳೆದುರು ತಮ್ಮೆಲ್ಲಾ ನೋವನ್ನು ಹೊರಹಾಕಿದ ಪರಿ ಎಲ್ಲರ ಕಣ್ಣಾಲಿಗಳನ್ನು ತೇವ ಗೊಳಿಸಿತು. ನಿನ್ನೆ ಬೆಳಿಗ್ಗೆಯವರೆಗೂ ದುರಂತ ವಿಧಿಯಾಟದ ಸಣ್ಣ ಕುರುಹೂ ಇಲ್ಲದೇ ಇದ್ದ ಮನೆಯಲ್ಲೀಗ ಸ್ಮಶಾನ ಮೌನ ಮಾತ್ರ ಉಳಿದಿದೆ!

- ವಿಜಯ್ ಹಾನಗಲ್