ಪಾಲಿಬೆಟ್ಟ, ಜು. ೧: ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಆದಿವಾಸಿ ಕುಟುಂಬಗಳಿಗೆ ಸಹಕಾರ ಸಂಘದ ಸೌಲಭ್ಯಗಳನ್ನು ನೀಡುವ ಮೂಲಕ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುವದಾಗಿ ತಿತಿಮತಿ ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ (ಲ್ಯಾಂಪ್ಸ್) ಸಹಕಾರ ಸಂಘದ ಅಧ್ಯಕ್ಷ ಪಿ.ಕೆ. ಮಣಿ ‘ಶಕ್ತಿ’ಗೆ ತಿಳಿಸಿದ್ದಾರೆ.
ವೀರಾಜಪೇಟೆ ತಾಲೂಕಿನ ಆದಿವಾಸಿ ಅಭಿವೃದ್ಧಿಗಾಗಿ ಸ್ಥಾಪಿತಗೊಂಡಿರುವ ಸಹಕಾರ ಸಂಘ ಹಲವು ವರ್ಷಗಳಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅರಣ್ಯದಂಚಿನಲ್ಲಿ ವಾಸವಾಗಿರುವ ಆದಿವಾಸಿಗಳು ಅರಣ್ಯದಲ್ಲಿ ಸಿಗುವ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಸಹಕಾರ ಸಂಘಕ್ಕೆ ಮಾರಾಟ ಮಾಡುವ ಮೂಲಕ ಕುಟುಂಬ ಜೀವನ ನಡೆಸುತ್ತಿದ್ದರು.
ಆದಿವಾಸಿಗಳು ಸಂಗ್ರಹಿಸಿ ತರುತ್ತಿದ್ದ ಜೇನು, ಮೇಣ, ಮರಪಾಚಿ, ಸೀಗೆಕಾಯಿ, ಅಂಟುವಾಳಕಾಯಿ ಸೇರಿದಂತೆ ಕೆಲವು ಉತ್ಪನ್ನಗಳಿಗೆ ನಿಗದಿತ ಬೆಂಬಲ ಬೆಲೆ ನೀಡಲಾಗುತ್ತಿತ್ತು.
ಇತ್ತೀಚಿನ ದಿನಗಳಲ್ಲಿ ಅರಣ್ಯದಲ್ಲಿ ಸಿಗುವ ಕಿರುಉತ್ಪನ್ನಗಳನ್ನು ಸಂಗ್ರಹಿಸಲು ಕೆಲವರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಸಹಕಾರ ಸಂಘದ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗುತ್ತಿದೆ.
ಆದಿವಾಸಿಗಳು ಸಂಪ್ರದಾಯ ಆಚಾರ ವಿಚಾರಗಳೊಂದಿಗೆ ತಮ್ಮದೇ ಆದ ಜೀವನ ಶೈಲಿಯಲ್ಲಿ ಬದುಕುವ ಹಕ್ಕಿನೊಂದಿಗೆ ಅರಣ್ಯದಲ್ಲಿ ಸಿಗುವ ಕಿರು ಉತ್ಪನ್ನಗಳನ್ನು ಸಂಗ್ರಹಿಸುವ ಮೂಲಕ ಅಭಿವೃದ್ಧಿಯೊಂದಿಗೆ ಮುಂದೆ ಬರಲು ಸಾಧ್ಯವಾಗಲಿದೆ.
ಸಹಕಾರ ಸಂಘ ನಿಮ್ಮೊಂದಿಗಿದ್ದು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಇತ್ತೀಚಿನ ದಿನಗಳಲ್ಲಿ ಸಂಘದ ವಿರುದ್ಧ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾಗಿದೆ.
ಸಮಸ್ಯೆಗಳಿದ್ದಲ್ಲಿ ಸಂಘದ ಆಡಳಿತ ಮಂಡಳಿಯೊAದಿಗೆ ನೇರವಾಗಿ ಭಾಗವಹಿಸುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದ ಅವರು, ಗಿರಿಜನರಿಗಾಗಿ ನ್ಯಾಯಬೆಲೆ ಅಂಗಡಿ ಕಾರ್ಯ ನಿರ್ವಹಿಸುತ್ತಿದ್ದು ಸರಕಾರದಿಂದ ಸಿಗುವ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
-ಪುತ್ತಂ ಪ್ರದೀಪ್