ಮಾನವನ ಜೀವನಕ್ಕೆ ಹಣ, ಆಸ್ತಿಗಿಂತ ಆರೋಗ್ಯ ಸಂಪತ್ತು ಬಹಳ ಮುಖ್ಯವಾದದ್ದು. ಇಂದಿನ ಯಾಂತ್ರಿಕ ಜೀವನದಲ್ಲಿ ಉತ್ತಮ ಆರೋಗ್ಯ ಎನ್ನುವುದು ಕನಸಿನ ಮಾತಾಗಿದೆ. ನಾವು ಒಂದಲ್ಲಾ ಒಂದು ಕಾರಣಕ್ಕೆ ಅನಾರೋಗ್ಯಕ್ಕೆ ಒಳಗಾಗಿ ವೈದ್ಯರ ಬಳಿ ಮೊರೆ ಹೋಗುವುದು ಸರ್ವೆ ಸಾಮಾನ್ಯವಾಗಿದೆ. ನಾವು ಭೂಮಿಯ ಮೇಲೆ ದೇವರನ್ನು ನೋಡಲು ಸಾಧ್ಯವಿಲ್ಲ ಎನ್ನುವುದು ಎಲ್ಲರು ತಿಳಿದಿರುವ ಸತ್ಯ. ಆದರೆ ನಮ್ಮ ಆರೋಗ್ಯವನ್ನು ಉತ್ತಮಗೊಳಿಸಿ, ನಮ್ಮನ್ನು ಆರೈಕೆ ಮಾಡುವ ವೈದ್ಯರುಗಳೇ ದೈವ ಶಕ್ತಿಯನ್ನು ಪಡೆದುಕೊಂಡು, ಕಣ್ಣೆದುರಿಗೆ ನಿಲ್ಲುವ ದೇವರು ಎಂದು ಹೇಳಬಹುದು. ಹಾಗಾಗಿ ರೋಗಿಗಳಿಗೆ ವೈದ್ಯರೇ ದೇವರು ಅದಕ್ಕಾಗಿಯೇ ವೈದ್ಯರನ್ನು ‘ವೈದ್ಯೋ ನಾರಾಯಣೋ’ ಹರಿ ಎಂದು ದೇವರಿಗೆ ಹೋಲಿಸಲಾಗಿದೆ.
ಯಾರ ಮುಖ ಪ್ರಸನ್ನವಾಗಿದೆಯೋ, ಯಾರ ಹೃದಯದಲ್ಲಿ ಪ್ರೀತಿ ಇದೆಯೋ, ಯಾರ ಕೈಕಾಲುಗಳು ಪರೋಪಕಾರಕ್ಕಾಗಿ ಮಿಡಿಯುತ್ತಿವೆಯೋ ಅಂಥವರು ಯಾರಿಗೆತಾನೆ ಪೂಜ್ಯರೆನಿಸುವುದಿಲ್ಲ? ಅಂಥವರಲ್ಲಿ ವೈದ್ಯರೂ ಕೂಡ ಒಬ್ಬರು. ನಮ್ಮೆಲ್ಲರ ಆರೋಗ್ಯವನ್ನು ಸುಸ್ಥಿರವಾಗಿರಿಸಿ, ಸಮಾಜವನ್ನು ರೋಗ ಮುಕ್ತವನ್ನಾಗಿಸಿ ಸುಂದರ ಆರೋಗ್ಯಪೂರ್ಣ ಸಮಾಜದ ನಿರ್ಮಾತೃಗಳೇ ಆ ವೈದ್ಯರು. ಪ್ರಾಚೀನ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗೂ ಸಮಾಜದಲ್ಲಿ ವೈದ್ಯರಿಗೆ ಗೌರವಯುತ ಸ್ಥಾನವಿದೆ. ನಮ್ಮೆಲ್ಲರ ಜೀವ ಕಾಪಾಡುವ ಸೃಷ್ಟಿಕರ್ತ ದೇವರಂತೆ ಕಂಡುಬರುವ ಈ ವೈದ್ಯರು ನಮ್ಮನ್ನು ಸಾವು ನೋವಿನ ಬದುಕಿನ ಅಂತಿಮ ಪಯಣದಲ್ಲಿ ಹೋರಾಟ ಮಾಡಿ ರೋಗಿಯ ಜೀವ ಉಳಿಸಿಕೊಳ್ಳುವ ಪರಿ ನಿಜಕ್ಕೂ ಅತ್ಯುದ್ಭುತ. ಓರ್ವ ಆದರ್ಶ ವೈದ್ಯ ತನ್ನ ಕುಟುಂಬದ ನೋವು ನಲಿವುಗಳನ್ನು ಬದಿಗಿರಿಸಿ ತನ್ನ ಮುಂದೆ ಮಲಗಿದ ರೋಗಿಯ ಪ್ರಾಣವನ್ನು ಉಳಿಸಿಕೊಳ್ಳಲು ಅದೆಷ್ಟೋ ಹರಸಾಹಸಪಡುತ್ತಾನೆ. ಅಂದರೆ ನಮ್ಮೆಲ್ಲರ ಪಾಲನಕರ್ತಮೂರ್ತಿ ವೈದ್ಯ ರೋಗಿಯ ಬಗ್ಗೆ ಒಂದಿಷ್ಟೂ ಅಸಹ್ಯಪಟ್ಟುಕೊಳ್ಳದೇ ಹೆತ್ತ ತಾಯಿಯಂತೆ ಆರೈಕೆ ಮಾಡುವ ಅವರ ಪರಿ ಮಾನವೀಯತೆಯನ್ನು ಬಿಂಬಿಸುತ್ತದೆ.
ತಮ್ಮ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ತೊರೆದು ಸಂದಿಗ್ಧ ಪರಿಸ್ಥಿತಿಯಲ್ಲಿ ರೋಗಿಯ ಸೇವೆಗೆ ಅಣಿಯಾಗುವ ಇವರ ವೃತ್ತಿ ವೃತ್ತಿಯೇ ಅಲ್ಲ. ಅದು ಮಾನವೀಯ ಧರ್ಮ. ರಾತ್ರಿ - ಹಗಲು ಎನ್ನದೇ ತಮ್ಮ ಆರೋಗ್ಯದ ಕಡೆಗೆ ಒಂದಿಷ್ಟು ಗಮನನೀಡದೇ ತಮ್ಮ ಬಂಧು ಬಳಗದ ಪ್ರೀತಿಯ ಪರಿಸರವನ್ನು ಮರೆತು ಸೇವೆಗೈಯುವ ಇವರ ಕ್ರಿಯಾಶೀಲತೆಯ ಕಾಯಕ ಅಭಿಮಾನ ಮೂಡಿಸುತ್ತದೆ. ತಮ್ಮ ಅದೆಷ್ಟೋ ಕಷ್ಟಗಳನ್ನೆಲ್ಲ ಮರೆತು ರೋಗಿಯೊಂದಿಗೆ ನಗುಮುಖದಿಂದ ಮಾತನಾಡುತ್ತಾ, ಭರವಸೆಯ ಮಾತುಗಳಿಂದ ರೋಗಿಯಲ್ಲಿ ಆತ್ಮಸ್ಥೆöÊರ್ಯವನ್ನು ಹೆಚ್ಚಿಸುತ್ತಾರೆ. ಪ್ರೀತಿ ತುಂಬಿದ ಮಾತುಗಳಿಂದ ರೋಗಿಗಳಲ್ಲಿ ಆಪ್ತ ಸಂಜೀವಿನಿಯAತೆ, ಸ್ನೇಹಿತನಂತೆ ಕಂಡುಬರುತ್ತಾರೆ. ಹೀಗಾಗಿ ಇಡೀ ಸಮಾಜ ವೈದ್ಯಲೋಕವನ್ನು ಗೌರವಿಸಿ ನಮಿಸುತ್ತದೆ. ಅವರ ನಿಸ್ವಾರ್ಥ ಸೇವೆಗೆ ತಲೆದೂಗುತ್ತದೆ.
ನಮ್ಮೆಲ್ಲರನ್ನು ಕಾಪಾಡುವ ದೇವರು ವೈದ್ಯರು ಎಂಬ ಭಾವ ಸಮಾಜದ ಕಟ್ಟಕಡೆಯ ವ್ಯಕ್ತಿಯಲ್ಲೂ ಪುಟಿದೇಳುತ್ತದೆ. ನಂಬಿ ಬಂದ ರೋಗಿಗಳನ್ನು ನಗುಮುಖದಿಂದ ಸ್ವಾಗತಿಸಿ ಆರೈಕೆ ಮಾಡಿ ಕಳಿಸಿಕೊಡುವ ವೈದ್ಯರು ವಿಶ್ವ ಭಾವೈಕ್ಯತೆಯ ಪ್ರತೀಕವೇ ಸರಿ. ಇಂದು ಹೆತ್ತ ತಂದೆ - ತಾಯಿಯ ಮಾತುಗಳನ್ನು ಕೇಳದ ಮಕ್ಕಳಿದ್ದಾರೆ. ಆದರೆ ವೈದ್ಯರನ್ನು ಮತ್ತು ಅವರು ಹೇಳಿದ ಮಾತುಗಳನ್ನು ಎಲ್ಲರೂ ಕೇಳುತ್ತಾರೆ. ಅಂತಹ ನಂಬಿಕೆಯ ಕ್ಷೇತ್ರವೇ ವೈದ್ಯಕೀಯ ಕ್ಷೇತ್ರ. ಆದರೆ ಅದನ್ನು ಉಳಿಸಿಕೊಳ್ಳುವ ಹೊಣೆಯನ್ನು ವೈದ್ಯರು ಹೊರಬೇಕು. ಏಕೆಂದರೆ ಇತ್ತೀಚೆಗೆ ಚಿಕಿತ್ಸೆ ಹೆಸರಿನಲ್ಲಿ ಬೇಜವಾಬ್ದಾರಿ, ಮೋಸ ಮಾಡುವಂಥ ನಕಲಿ ವೈದ್ಯರ ಸಂಖ್ಯೆಯೂ ಹೆಚ್ಚಿದೆ.
ವೈದ್ಯರ ನಿರ್ಲಕ್ಷತೆಯೇ ರೋಗಿ ಸಾಯಲು ಕಾರಣ ಎಂಬ ಭಾವವು ಎಳ್ಳಷ್ಟು ಬರಬಾರದು. ಕೆಲವೊಮ್ಮೆ ನಕಲಿ ವೈದ್ಯರು ಮಾಡಿದ ತಪ್ಪಿನಿಂದಾಗಿ ನಿಜವಾದ ವೈದ್ಯರಿಗೆ ಸಂಕಷ್ಟವಾಗಿ ಪರಿಣಮಿಸಬಹುದು. ಅಂತಹ ನಕಲಿ ವೈದ್ಯರನ್ನು ಸರಕಾರವು ಕಂಡುಹಿಡಿದು ಶಿಕ್ಷಿಸಬೇಕಾಗಿದೆ. ಮಾನವೀಯ ಸಂಬAಧಗಳು ಅವನತಿ ಹೊಂದುತ್ತಿರುವುದು ಕಂಡುಬರುತ್ತಿದೆ. ಆದರೂ ಸದ್ಯದ ಪರಿಸ್ಥಿಯಲ್ಲಿ, ಭೀಕರ ಮಹಾಮಾರಿ ಕೊರೊನಾ ಅಂಟು ರೋಗದ ಕಪಿಮುಷ್ಟಿಗೆ ಸಿಲುಕಿದ ರೋಗಿಗಳ ಚಿಕಿತ್ಸೆಗಾಗಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಾ ಸಮಾಜಕ್ಕೆ ಶ್ಲಾಘನೀಯ ಸೇವೆ ಸಲ್ಲಿಸುತ್ತಿರುವ ವೈದ್ಯರು ನಮ್ಮ ಎರಡನೆಯ ತಂದೆ ತಾಯಿಗಳು ಇದ್ದಂತೆ. ಅವರ ಮಾನವೀಯ ಕರ್ತವ್ಯವನ್ನು ಆರಾಧಿಸೋಣ, ಪೂಜಿಸೋಣ. ಇಡೀ ದೇಶದ ಆರೋಗ್ಯವನ್ನು ಕಾಪಾಡುವ ವ್ಯವಸ್ಥಾಪಕರು ನಮ್ಮ ವೈದ್ಯರು ಎಂಬ ನಿಲುವಿಗೆ ನಾವೆಲ್ಲಾ ಬದ್ಧರಾಗೋಣ.
- ಡಾ. ದೀಪು ಪಿ., ಪ್ರಾಂಶುಪಾಲರು,
ವಿದ್ಯಾವರ್ದಕ ಕಾನೂನು ಕಾಲೇಜು, ಮೈಸೂರು