ಒಂದು ಪ್ರದೇಶದಲ್ಲಿ ನಡೆಯುವ ಘಟನೆಗಳನ್ನು ಜನಮನಗಳಿಗೆ ತಲುಪಿಸುವಲ್ಲಿ ಪತ್ರಿಕೆಗಳು ಪ್ರಧಾನಪಾತ್ರವನ್ನು ವಹಿಸುತ್ತವೆ. ನಡೆದ ಘಟನೆಯನ್ನು ಕೂಲಂಕಷವಾಗಿ ಪರೀಕ್ಷಿಸಿ, ಆ ಘಟನೆಗೆ ಕಾರಣರಾರು, ಈ ಘಟನೆಯ ಸಾಧಕ ಬಾಧಕಗಳೇನು, ಮಾನವಸಮಾಜಕ್ಕೆ ಈ ಘಟನೆಯು ಹೇಗೆ ಪ್ರಭಾವವನ್ನು ಬೀರಬಲ್ಲುದು ಹೀಗೆ ಹಲವು ಕೋನಗಳಿಂದ ನಡೆದ ಘಟನೆಯನ್ನು ವೀಕ್ಷಿಸಿ, ಅನಂತರ ಅವನ್ನು ವರದಿಯಾಗಿ ಮಾಡಿ ಓದುಗರ ಮುಂದೆ ಇರಿಸುತ್ತವೆ. ಹೀಗೆ ಸಮಾಜದ ಮುಂದೆ ಮಾಹಿತಿಗಳನ್ನು ನೀಡುವ ಪತ್ರಿಕೆಗಳು ಜವಾಬ್ದಾರಿಯುತವಾಗಿ ತಮ್ಮ ಹೊಣೆಯನ್ನು ನಿರ್ವಹಿಸಬೇಕಾಗುತ್ತವೆ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಪತ್ರಿಕೆಗಳು ಪರಸ್ಪರ ಪೈಪೋಟಿಗಿಳಿದು, ತಮ್ಮ ಪತ್ರಿಕೆಗಳು ಹೆಚ್ಚು ಜನರನ್ನು ಆಕರ್ಷಿಸಬೇಕು, ತಮ್ಮ ವರದಿಗಳು ಹೆಚ್ಚು ಜನರನ್ನು ತಲುಪಬೇಕು ಎಂಬ ಆದಮ್ಯ ಛಲದಿಂದ ವರದಿಗಳನ್ನು ನೀಡುವಲ್ಲಿ ವೈವಿಧ್ಯತೆಯನ್ನು ತೋರುತ್ತವೆ. ಹಾಗಾಗಿ ನಡೆದ ಘಟನೆಗಳಿಗೆ ಸಾಕಷ್ಟು ರಂಗನ್ನು ಸಹ ಬಳಿದು ಓದುಗರು ಇದರಿಂದ ಆಕರ್ಷಿತರಾಗುವಂತೆ ಮಾಡುತ್ತವೆ. ಒಂದು ಉತ್ತಮ ವಾರ್ತಾಪತ್ರಿಕೆಯು ತನ್ನನ್ನು ಉತ್ತುಂಗಕ್ಕೇರಿಸಿಕೊಳ್ಳಲು ಹಲವಾರು ಅಂಶಗಳನ್ನು ಹೊಂದಿರಬೇಕು.

ಪತ್ರಿಕೆಗಳಲ್ಲಿ ಬರುವ ಸುದ್ದಿಗಳು ಸತ್ಯವಾಗಿರಬೇಕು. ಕೇವಲ ಊಹಾಪೋಹಗಳಿಂದ ಹೀಗೆ ಘಟನೆ ನಡೆಯಿತು ಎಂದು ಬಿಂಬಿಸಲೆಣಿಸಬಾರದು. ಇಲಿ ಹೋದರೆ ಅಲ್ಲಿ ಹುಲಿ ಹೋಯಿತು ಎಂಬ ಅತಿಶಯೋಕ್ತಿಯೂ ಸಲ್ಲದು. ವಾಸ್ತವವಾಗಿ ಏನು ಘಟನೆ ನಡೆಯಿತು ಎಂಬುದನ್ನು ಪ್ರಕಟಿಸಬೇಕು. ವರದಿಗಳು ವಸ್ತುನಿಷ್ಟೆಯಿಂದ ಕೂಡಿರಬೇಕು. ಅನಗತ್ಯ ವಿಚಾರಗಳನ್ನು ಹಿಗ್ಗಿಸಿ, ಎಳೆದು ಅನಂತರ ಏನಾಯಿತು ಎಂಬುದನ್ನು ಚುಟುಕಾಗಿ ಹೇಳಿದರೆ ಅದನ್ನು ಜನರು ಮೆಚ್ಚುವುದಿಲ್ಲ.

ಸತ್ಯವಾದ ಘಟನೆಯನ್ನು ಬಹಳ ಎಚ್ಚರಿಕೆಯಿಂದ ಅನಾವರಣಗೊಳಿಸಬೇಕು. ಧರ್ಮ ಎಂಬುದು ಬಹಳ ಸಂವೇದನಾಶೀಲ ವಿಷಯವಾಗಿರುವುದರಿಂದ ಯಾವುದೇ ಧರ್ಮದವರೂ ಉದ್ವೇಗಗೊಳ್ಳದಂತೆ ಮಾಹಿತಿಯನ್ನು ಹೊರತರಬೇಕು. ಆ ಧರ್ಮದವರ ಪ್ರಾರ್ಥನಾಮಂದಿರದ ಪಾವಿತ್ರö್ಯತೆಯನ್ನು ಇನ್ನೊಂದು ಧರ್ಮದವರು ಕೆಡಿಸಿದರು ಎಂಬುದು ಸತ್ಯವಾಗಿದ್ದರೂ ಅದನ್ನು ಪತ್ರಿಕೆಗಳಲ್ಲಿ ಹಾಕುವಾಗ ಬಹಳ ಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಸಮಾಜದ ಸ್ವಾಸ್ಥö್ಯವನ್ನು ಕೆಡಿಸುವ, ಜನರ ಶಾಂತಿಯನ್ನು ಹಾಳುಗೆಡಹುವ, ಜನರನ್ನು ಉದ್ರೇಕಗೊಳಿಸುವ ವಿಷಯಗಳು ಎಂದಿಗೂ ಸಲ್ಲ. “ಸತ್ಯಮಪ್ರಿಯಂನ ಬ್ರುಯಾತ್” ಎಂಬುದರ ಬಗ್ಗೆ ತಿಳಿದಿರಬೆಕು.

ಒಂದು ಪ್ರದೇಶದ ಅಥವಾ ಸ್ಥಳೀಯವಾದ ಸಮಸ್ಯೆಗಳನ್ನು ಸರಕಾರದ ಮುಂದಿರಿಸುವ ಯತ್ನಗಳನ್ನು ಪತ್ರಿಕೆಗಳು ಮಾಡಬೇಕು. ನಡೆಯುತ್ತಿರುವ ಭ್ರಷ್ಟಾಚಾರ, ಜನರ ಕಣ್ಣಿಗೆ ಬೂದಿಬಳಿದು ಹೊಸ ಸಮಸ್ಯೆಗಳನ್ನು ಸೃಷ್ಟಿಸಿ ಆ ಮೂಲಕ ತನ್ನ ರಾಜಕೀಯ ಬಲವನ್ನು ವೃದ್ಧಿಸಿಕೊಳ್ಳುವ ಪುಡಾರಿಗಳ ಹುನ್ನಾರವನ್ನು ಜನರಿಗೆ ತಿಳಿಸಬೇಕು. ಆಮೆಯ ವೇಗದಲ್ಲಿ ಚಲಿಸುತ್ತಿರುವ ಸರಕಾರದ ಕಾರ್ಯಕ್ರಮಗಳ ಬಗ್ಗೆಯೂ ಸಹ ಆಧಾರಸಹಿತವಾಗಿ ಜನರಿಗೆ ತೋರಿಸಬೇಕು.

ಸಂವಿಧಾನದ ನಾಲ್ಕನೆಯ ಅಂಗ ಎನ್ನಿಸುವ ಪತ್ರಿಕೆಗಳು ಹೀಗೆ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ವಹಿಸಿದಾಗ ಮಾತ್ರ, ಸಮಾಜಕ್ಕೆ ಒಳ್ಳೆಯದಾಗಬಹುದು, ದೇಶದ ಬೆಳವಣಿಗೆಯಾಗ ಬಹುದು, ನಾಗರಿಕರಿಕರ ಪ್ರಜ್ಞೆಯು ಜಾಗೃತವಾಗಬಹುದು.

- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು.