ಮಡಿಕೇರಿ, ಜೂ. ೩೦: ಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಸಮಿತಿಯು ಡ್ರಗ್ಸ್ ವಿರುದ್ಧ ಜಾಗೃತಿ ಆಂದೋಲನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇತ್ತೀಚೆಗೆ ಜಿಲ್ಲಾ ಸಮಿತಿಯ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಸಂದೇಶ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಫ್ ಕೊಡಗು ಜಿಲ್ಲಾಧ್ಯಕ್ಷ ಶಾಫಿ ಸಅದಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್‌ಎಸ್‌ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಂ.ಎಸ್.ಎA. ಅಬ್ದುಲ್ ರಶೀದ್ ಝೈನಿ ಅಲ್‌ಕಾಮಿಲ್ ಮಾದಕ ಪದಾರ್ಥಗಳ ಕಂಪೆನಿಗಳು ಮಾದಕ ವಸ್ತುಗಳನ್ನು ಯುವಸಮೂಹಕ್ಕೆ ತಲುಪಿಸಲು ಯಾವೆಲ್ಲಾ ತಂತ್ರಗಳನ್ನು ಹೂಡುತ್ತವೆಯೋ ಅವುಗಳಿಗೆ ಪ್ರತಿತಂತ್ರವನ್ನು ಹೂಡದಿದ್ದರೆ ಅದರ ನಿರ್ಮೂಲನೆ ಅಸಾಧ್ಯ ಎಂದರು.

ಮುಖ್ಯ ಭಾಷಣ ಮಾಡಿದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸದಸ್ಯರೂ ಕರ್ನಾಟಕ ಮುಸ್ಲಿಂ ಜಮಾಅತ್ ಇದರ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಾಫಿ ಸಅದಿ, ಗ್ರಾಮ ಗ್ರಾಮಗಳಲ್ಲೂ ಅಮಲು ಪದಾರ್ಥಗಳನ್ನು ಬಳಸುವ ತರುಣರನ್ನು ಎಚ್ಚರಿಸಬೇಕು. ಪೊಲೀಸ್ ಇಲಾಖೆಯೊಂದಿಗೆ ಸಂಘ ಸಂಸ್ಥೆಗಳು ಕೂಡ ಕೈಜೋಡಿಸಿದರೆ ಬದಲಾವಣೆ ಸಾಧ್ಯ ಎಂದರು.

ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ದುಶ್ಚಟಗಳಿಗೆ ಬಿದ್ದವರನ್ನು ಸಮಾಜ ದೂರವಿಡುತ್ತದೆ. ಕೌಟುಂಬಿಕವಾಗಿಯೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನಾವು ದುಶ್ಚಟಗಳಿಂದ ದೂರವಿರಬೇಕೆಂದು ಕಿವಿಮಾತು ಹೇಳಿದರು.

ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಹಿರಿಯ ವಕೀಲ ಕೆ.ಎಂ. ಕುಂಞ ಅಬ್ದುಲ್ಲಾ, ಕೊಡಗು ಜನಾಂದೋಲನ ವೇದಿಕೆಯ ಮುಖಂಡ ವಿ.ಪಿ. ಶಶಿಧರ್, ಪೊಲೀಸ್ ಠಾಣಾಧಿಕಾರಿ ಎಸ್. ಮಂಜುನಾಥ್, ಎಸ್‌ಎಸ್‌ಎಫ್‌ನ ರಾಜ್ಯ ನಾಯಕ ಯಾಕೂಬ್ ಮಾಸ್ಟರ್ ಕೊಳಕೇರಿ ಮುಂತಾದವರು ಮಾತನಾಡಿದರು.