ಸೊಮವಾರಪೇಟೆ, ಜೂ. ೩೦; ಅಜ್ಜಿ ಮನೆಗೆ ತೆರಳಿದ್ದ ಅಕ್ಕ ತಮ್ಮ ಬಿಡುವಿನ ವೇಳೆಯಲ್ಲಿ ಆಟವಾಡಲು ಉಯ್ಯಾಲೆ ಕಟ್ಟಿಕೊಂಡಿದ್ದ ಸೀರೆಯೇ ಕೊರಳಿಗೆ ಉರುಳಾಗಿ ಎರಡು ಜೀವಗಳನ್ನು ಕಸಿದುಕೊಂಡ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಇಲ್ಲಿಗೆ ಸಮೀಪದ ಗಣಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಂಜಿಗನಹಳ್ಳಿ ಗ್ರಾಮದ ನಿವಾಸಿ ಗಿರೀಶ್ (ರಾಜಾ), ಜಯಂತಿ ದಂಪತಿಯರ ಪುತ್ರಿ ಮನೀಕಾ ್ಷ(೧೫), ಪುತ್ರ ಪೂರ್ಣೇಶ್ (೧೩) ಮೃತಪಟ್ಟ ದುರ್ದೈವಿ ಮಕ್ಕಳು.

ಗಿರೀಶ್ ಹಾಗೂ ಜಯಂತಿ ಇಂದು ಕೊಣನೂರಿಗೆ ಶುಂಠಿ ಕೆಲಸಕ್ಕೆಂದು ತೆರಳಿದ್ದ ಸಂದರ್ಭ ಮಕ್ಕಳು ಸಮೀಪದಲ್ಲೇ ಇರುವ ತಮ್ಮ ಅಜ್ಜ ರಾಮಣ್ಣ ಹಾಗೂ ಅಜ್ಜಿ ಸರಸ್ವತಿ ಅವರ ಮನೆಗೆ ಹೋಗಿದ್ದಾರೆ. ಬೆಳಿಗ್ಗೆ ಅಜ್ಜ, ಅಜ್ಜಿ ಪಕ್ಕದಲ್ಲೇ ಇರುವ ತೋಟಕ್ಕೆ ಕೆಲಸಕ್ಕೆ ತೆರಳುವ ಸಂದರ್ಭ ಮಕ್ಕಳಿಬ್ಬರು ಎರಡು ಸೀರೆಗಳನ್ನು ಮನೆಯ ಛಾವಣಿಯ ಬಿಟ್ಟಕ್ಕೆ ಕಟ್ಟಿಕೊಂಡು ಜೋಕಾಲಿ ಆಡುತ್ತಿದ್ದರು. ಮಧ್ಯಾಹ್ನ ಬಂದು ನೋಡುವಾಗ ಇಬ್ಬರು ಮಕ್ಕಳು ಬೇರೆ ಬೇರೆ ಸೀರೆಯಲ್ಲಿ ಕೊರಳಿಗೆ ಉರುಳಾಗಿ ನೇತಾಡುತ್ತಿದ್ದುದು ಗೋಚರಿಸಿದೆ. ಪಕ್ಕದಲ್ಲೇ ಜೋಕಾಲಿ ಏರಲು ಬಳಸಿದ್ದ ಕುರ್ಚಿಯೂ ಇತ್ತು.

ಘಟನೆಯಿಂದ ದಿಗ್ಭಾçಂತರಾದ ಅಜ್ಜ, ಅಜ್ಜಿ, ಮಕ್ಕಳ ಪೋಷಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಠಾಣಾಧಿಕಾರಿ ಶ್ರೀಧರ್, ಸಿಬ್ಬಂದಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ.ಪಾಂಡು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸಾವನ್ನಪ್ಪಿದ ಮನೀಕ್ಷಾ ಭಾಗಮಂಡಲ ಮೊರಾರ್ಜಿ ವಸತಿ ಶಾಲೆಯಲ್ಲಿ ೯ ರಿಂದ ೧೦ನೇ ತರಗತಿಗೆ ಹಾಗೂ ಪೂರ್ಣೇಶ್ ಗಣಗೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ

೭ ರಿಂದ ೮ನೇ ತರಗತಿಗೆ ತೇರ್ಗಡೆ ಹೊಂದಿದ್ದರು. - ವಿಜಯ್