ಮಡಿಕೇರಿ, ಜೂ. ೩೦ : ಸದಾ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕಂಗೆಟ್ಟಿದ್ದ ಕೆ.ನಿಡುಗಣೆ ಗ್ರಾ.ಪಂ ವ್ಯಾಪ್ತಿಯ ಕರ್ಣಂಗೇರಿಯ ನವಗ್ರಾಮ ಮತ್ತು ಕೋಟೆಕಾಡು ಇದೀಗ ಸಮಸ್ಯೆಯಿಂದ ಮುಕ್ತವಾಗಿದೆ.
ಗ್ರಾ.ಪಂ ಸದಸ್ಯ ಜಾನ್ಸನ್ ಪಿಂಟೋ ಅವರ ಎರಡು ವರ್ಷಗಳ ಸತತ ಪ್ರಯತ್ನದ ಫಲವಾಗಿ ಸಂಬAಧಪಟ್ಟ ಅಧಿಕಾರಿಗಳು ಮಡಿಕೇರಿ ವಿದ್ಯುತ್ ಮಾರ್ಗದ ಮೂಲಕ ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಕಳೆದ ೩೦ ವರ್ಷಗಳಿಂದ ಮೈಸೂರು ರಸ್ತೆ ಸಿಂಕೋನ ತೋಟದ ಮೂಲಕ ಅರಣ್ಯ ಭಾಗದಿಂದ ತಂತಿಗಳನ್ನು ಎಳೆದು ವಿದ್ಯುತ್ ನೀಡಲಾಗಿತ್ತು. ಈ ಮಾರ್ಗದಲ್ಲಿ ಪ್ರತಿ ಮಳೆಗಾಲದಲ್ಲಿ ಮರಗಳು ಬಿದ್ದು ತಿಂಗಳುಗಟ್ಟಲೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿತ್ತು. ಗ್ರಾಮಸ್ಥರು ಕಾರ್ಗತ್ತಲಿನಲ್ಲೇ ಕಳೆಯುವ ದಿನಗಳಿದ್ದವು. ಅಲ್ಲದೆ ಕುಡಿಯುವ ನೀರಿನ ಸರಬರಾಜಿಗೂ ಅಡಚಣೆಯಾಗುತ್ತಿತ್ತು. ಇದರಿಂದ ಮುಕ್ತಿ ನೀಡುವಂತೆ ಸ್ಥಳೀಯರು ಕೋರಿಕೊಂಡ ಹಿನ್ನೆಲೆ ಜಾನ್ಸನ್ ಪಿಂಟೋ ಅವರು ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಕಡತಗಳ ವಿಲೇವಾರಿ ಶೀಘ್ರ ಆಗುವಂತೆ ನೋಡಿಕೊಂಡರು.
ಗ್ರಾಮೀಣ ಕುಡಿಯುವ ನೀರಿನ ಯೋಜನೆ ಮತ್ತು ಸೌಭಾಗ್ಯ ಯೋಜನೆಯಡಿ ಗ್ರಾಮದಲ್ಲಿ ಎರಡು ಟ್ರಾನ್ಸ್ಫಾರ್ಮರ್ ಅಳವಡಿಸಲಾಗಿದ್ದು, ಸುಮಾರು ೫.೫೦ ಲಕ್ಷ ರೂ.ಗಳನ್ನು ಇದಕ್ಕಾಗಿ ಖರ್ಚು ಮಾಡಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭ ಮಾತನಾಡಿದ ಸದಸ್ಯ ಜಾನ್ಸನ್ ಪಿಂಟೋ ಇದೀಗ ಮಡಿಕೇರಿ ಮಾರ್ಗದ ಮೂಲಕ ಅಡಚಣೆ ರಹಿತ ವಿದ್ಯುತ್ ಸರಬರಾಜಾಗುತ್ತಿದ್ದು, ೬೦ ಕ್ಕಿಂತ ಹೆಚ್ಚಿನ ಮನೆಗಳಿಗೆ ಇದರ ಲಾಭ ದೊರೆಯಲಿದೆ ಎಂದು ತಿಳಿಸಿದರು.
ಮಡಿಕೇರಿ ಸೆಸ್ಕ್ ಉಪ ವಿಭಾಗದ ಅಭಿಯಂತರ ಸಂಪತ್, ಸಿಬ್ಬಂದಿ ಬೋರೇಗೌಡ ಮತ್ತಿತರರು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಈ ಕಾರ್ಯದಲ್ಲಿ ಗ್ರಾಮಸ್ಥರು ಕೂಡ ಕೈಜೋಡಿಸಿದರು.