ರಾಜ್ಯದ ಕಾರ್ಮಿಕ ವರ್ಗಕ್ಕೆ ಸರ್ಕಾರದ ಉಡುಗೊರೆ

ಬೆಂಗಳೂರು, ಜೂ. ೨೯: ರಾಜ್ಯದ ಕಾರ್ಮಿಕ ವರ್ಗಕ್ಕೆ ಸರ್ಕಾರ ಭರ್ಜರಿ ಉಡುಗೊರೆ ನೀಡಿದ್ದು, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಲಾಖೆ ಕಲ್ಯಾಣ ಯೋಜನೆಗಳಡಿ ನೀಡಲಾಗುವ ಧನ ಸಹಾಯದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಕರ್ನಾಟಕ ಕಾರ್ಮಿಕ ಮಂಡಳಿ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಂ ಹೆಬ್ಬಾರ್ ಅವರ ನೇತೃತ್ವದಲ್ಲಿ ನಡೆದ ೯೦ನೇ ಸಭೆಯ ನಿರ್ಣಯಗಳನ್ನು ಇಲಾಖೆ ಜಾರಿ ಮಾಡಿದ್ದು, ಈ ಮೂಲಕ ಸಹಾಯಧನದಲ್ಲಿ ಭಾರೀ ಪ್ರಮಾಣದ ಏರಿಕೆ ಮಾಡಿ ಆದೇಶಿಸಿದ್ದು, ಈ ಮೂಲಕ ಹೆಚ್ಚಿನ ಕಾರ್ಮಿಕರಿಗೆ ಸವಲತ್ತು ದೊರಕುವಂತೆ ಮಾಡಲಾಗಿದೆ. ಪ್ರಸ್ತುತ ಜಾರಿಯಲ್ಲಿ ಇರುವ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ ಪಡೆಯಲು ಇದ್ದ ವೇತನ ಮಿತಿ ೧೫,೦೦೦ ರೂ. ನಿಂದ ೨೧,೦೦೦ ರೂ. ಏರಿಕೆ ಮಾಡಲಾಗಿದೆ. ಈಗಿರುವ ಕಾರ್ಮಿಕ ವೈದ್ಯಕೀಯ ನೆರವು ಮೊತ್ತವನ್ನು ೧೦,೦೦೦ ರೂ. ನಿಂದ ೨೫,೦೦೦ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಕಾರ್ಮಿಕರ ಅಪಘಾತ ಧನ ಸಹಾಯವನ್ನು ೩,೦೦೦ ರೂ. ನಿಂದ ೧೦೦೦೦ ರೂ.ಗೆ ಏರಿಕೆ ಮಾಡಲಾಗಿದೆ. ಶೈಕ್ಷಣಿಕ ಪ್ರೋತ್ಸಾಹ ಯೋಜನೆಯಡಿ ಇಲಾಖೆಯು ೮ ರಿಂದ ೧೦ನೇ ತರಗತಿವರೆಗಿನ ಮಕ್ಕಳಿಗೆ, ಡಿಪ್ಲೋಮಾ ಐಟಿಐ ಕೋರ್ಸ್ಗೆ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿAಗ್ ಮತ್ತು ವೈದ್ಯÃಯ ಕೋರ್ಸ್ಗಳಿಗೆ ಒಂದು ಕುಟುಂಬ ಓರ್ವ ವಿದ್ಯಾರ್ಥಿಗೆ ವಾರ್ಷಿಕ ಧನ ಸಹಾಯ ನೀಡುವ ಯೋಜನೆಯ ಮಾಸಿಕ ಆದಾಯ ಮಿತಿಯನ್ನು ಏರಿಕೆ ಮಾಡಿ ಹೆಚ್ಚಿನ ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಮೃತ ಕಾರ್ಮಿಕನ ಅಂತ್ಯ ಸಂಸ್ಕಾರಕ್ಕಿದ್ದ ಧನ ಸಹಾಯವನ್ನೂ ಏರಿಕೆ ಮಾಡಲಾಗಿದ್ದು, ರೂ. ೫,೦೦೦ ಇದ್ದ ಧನ ಸಹಾಯವನ್ನು ದ್ವಿಗುಣಗೊಳಿಸಿ ೧೦,೦೦೦ ರೂ.ಗೆ ನಿಗದಿಪಡಿಸಲಾಗಿದೆ. ವಾರ್ಷಿಕವಾಗಿ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಳ್ಳುವ ಟ್ರೇಡ್ ಯೂನಿಯನ್ ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಧನ ಸಹಾಯದಲ್ಲಿ ಭಾರೀ ಏರಿಕೆ ಮಾಡಲಾಗಿದ್ದು, ಈ ಧನ ಸಹಾಯವನ್ನು ೩೦೦೦೦ ರೂ. ನಿಂದ ೧ ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಸಂಘಟಿತ ಮಹಿಳಾ ಕಾರ್ಮಿಕರಿಗೆ ಮೊದಲ ಎರಡು ಮಕ್ಕಳಿಗೆ ತಲಾ ರೂ. ೧೦,೦೦೦ ಹೆರಿಗೆ ಭತ್ಯೆ ನೀಡುವಂತಹ ಮಹತ್ವ ನಿರ್ಧಾರವನ್ನೂ ಇಲಾಖೆ ಕೈಗೊಂಡಿದ್ದು, ವಾರ್ಷಿಕ ಕ್ರೀಡಾಕೂಟ ಧನ ಸಹಾಯವನ್ನು ೫೦೦೦೦ ರೂ. ನಿಂದ ೧ ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಈ ಯೋಜನೆಗಳ ಜಾರಿಯನ್ನು ಸರ್ಕಾರದ ಯಾವುದೇ ಅನುದಾನ ಬಳಕೆ ಇಲ್ಲದೆ ಕಾರ್ಮಿಕ ಕಲ್ಯಾಣ ಮಂಡಳಿ ಸಂಪನ್ಮೂಲದಿAದಲೇ ಭರಿಸಲಾಗುವುದು ಎಂದು ತಿಳಿಸಿರುವ ಸಚಿವ ಶಿವರಾಂ ಹೆಬ್ಬಾರ್, ಈ ಸಹಾಯಧನ ಪರಿಷ್ಕರಣೆಯಿಂದ ಸಂಘಟಿತ ಕಾರ್ಮಿಕ ವಲಯಕ್ಕೆ ಹೆಚ್ಚಿನ ಅನುಕೂಲ ಆಗಲಿ ಎಂಬುದೇ ಸರ್ಕಾರದ ಉದ್ದೇಶ ಎಂದು ಹರ್ಷ ವ್ಯಕ್ತಪಡಿಸಿದರು.

ಎಸ್.ಜಿ.ಡಿ. ಸೂಚ್ಯಂಕ: ಮೂರನೇ ಸ್ಥಾನದಲ್ಲಿ ಕರ್ನಾಟಕ

ಬೆಂಗಳೂರು, ಜೂ. ೨೯: ವಿಶ್ವ ಸಂಸ್ಥೆಯು ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳು-೨೦೩೦ ರ ಸಾಧನೆ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ನೀತಿ ಆಯೋಗದ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು. ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ (ಎಸ್‌ಜಿಡಿ) ರಾಜ್ಯದ ಅಂಕ ಹಾಗೂ ಸ್ಥಾನದಲ್ಲಿ ಗಣನೀಯ ಸುಧಾರಣೆ ಆಗಿರುವ ಬಗ್ಗೆ ನೀತಿ ಆಯೋಗದ ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ರಾಜ್ಯವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಬಗ್ಗೆ ಆದ್ಯತೆ ನೀಡಬೇಕಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಗರ್ಭಿಣಿಯರು ಹಾಗೂ ಮಕ್ಕಳ ಅಪೌಷ್ಟಿಕತೆ, ಲಿಂಗ ಸಮಾನತೆ, ವಸತಿ, ಶಿಕ್ಷಣ ಮೊದಲಾದ ವಿಷಯಗಳ ಕುರಿತು ಇನ್ನಷ್ಟು ಗಮನ ಹರಿಸುವಂತೆ ನೀತಿ ಆಯೋಗವು ಸಲಹೆ ನೀಡಿದೆ. ಈಗಾಗಲೇ ಆಯವ್ಯಯದಲ್ಲಿ ರಾಜ್ಯದ ಎಲ್ಲ ಯೋಜನೆಗಳು ಎಸ್‌ಡಿಜಿ ಗುರಿ ಸಾಧನೆಯನ್ನು ಕೇಂದ್ರೀಕರಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಘೋಷಿಸಲಾಗಿದೆ. ಅದರಂತೆಯೇ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಸುಸ್ಥಿರ ಅಭಿವೃದ್ಧಿ ೨೦೩೦ ಗುರಿಗಳನ್ನು ಸಾಧಿಸುವತ್ತ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದರು. ಎಸ್.ಜಿ.ಡಿ. ಇಂಡಿಯಾ ೨೦೨೦- ೨೧ ವರದಿಯ ಪ್ರಕಾರ ೭೨ ಸೂಚ್ಯಂಕ ಪಡೆದಿರುವ ಆಂಧ್ರ ಪ್ರದೇಶ ಹಾಗೂ ಗೋವಾ ರಾಜ್ಯಗಳೊಂದಿಗೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ೧೬ ಸುಸ್ಥಿರ ಅಭಿವೃದ್ಧಿ ಗುರಿಗಳ ಪೈಕಿ ಕರ್ನಾಟಕ ರಾಜ್ಯ ೭ನೇ ಗುರಿ ಸಾಧಿಸುವಲ್ಲಿ ಮೊದಲನೇ ಸ್ಥಾನದಲ್ಲಿದೆ. ಉಳಿದ ಒಂಭತ್ತು ಗುರಿಗಳ ಸಾಧನೆಯಲ್ಲಿ ಮುಂಚೂಣಿಯಲ್ಲಿದ್ದು, ಬಾಕಿ ೫ ಗುರಿಗಳ ಸಾಧನೆಯಲ್ಲಿ ಸಹ ಉತ್ತಮ ಸಾಧನೆ ತೋರುತ್ತಿದೆ. ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ, ವಾಣಿಜ್ಯ ಮತ್ತು ಕೈಗಾರಿಕೆ, ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ನಗರಾಭಿವೃದ್ಧಿ (ಪೌರಾಡಳಿತ), ಇ-ಆಡಳಿತ, ವಸತಿ ಇಲಾಖೆ (ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ), ವಿತ್ತೀಯ ಮತ್ತು ಸಾಂಖ್ಯಿಕ ನಿರ್ದೇಶನಾಲಯಗಳು ಹೊಸ ಕ್ರಮವನ್ನು ಜಾರಿಗೆ ತರುತ್ತಿವೆ. ಇದು ರಾಜ್ಯದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸುಧಾರಿಸಲಿದೆ ಅಲ್ಲದೆ ನಾಗರಿಕರಿಗೆ ಉತ್ತಮ ಹಾಗೂ ಸುಸ್ಥಿರ ಭವಿಷ್ಯವನ್ನು ಒದಗಿಸಲಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಇಂದು ಕೊರೊನಾ ಅಬ್ಬರ

ಬೆಂಗಳೂರು, ಜೂ. ೨೯: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆಯಾಗಿದ್ದು ಇಂದು ೩,೨೨೨ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೨೮,೪೦,೪೨೮ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೯೩ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೪,೯೨೯ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಇಂದು ೭೫೩ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೧೨,೭೪೬ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿಗೆ ೧೬ ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ ೧೪,೭೨೪ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೭,೧೯,೪೭೯ಕ್ಕೆ ಏರಿಕೆಯಾಗಿದೆ. ೮೫,೯೯೭ ಸಕ್ರಿಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೨೬,೬೭೦ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೩,೨೨೨ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೨.೫೪ಕ್ಕೆ ಇಳಿದಿದೆ.