ಸೋಮವಾರಪೇಟೆ, ಜೂ. ೨೮: ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನಸಾಮಾನ್ಯರ ಮೇಲೆ ದುಬಾರಿ ಹಾಗೂ ಅವೈಜ್ಞಾನಿಕ ತೆರಿಗೆಯನ್ನು ಹೇರಿದ್ದು, ಇಂತಹ ತೆರಿಗೆ ಪದ್ಧತಿಯನ್ನು ಕೂಡಲೆ ಹಿಂಪಡೆಯ ಬೇಕೆಂದು ಆಗ್ರಹಿಸಿ ಜೆಡಿಎಸ್ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಜನವಿರೋಧಿ, ಬಡವರ, ಕಾರ್ಮಿಕರ, ದೀನದಲಿತರ ವಿರೋಧಿ ನೀತಿಯನ್ನು ಪಾಲಿಸುತ್ತಿದೆ. ಬಡವರ ಬದುಕು ಸಂಕಷ್ಟದಲ್ಲಿದೆ. ಇಂಧನ ಬೆಲೆ ಶತಕ ದಾಟಿದೆ. ದಿನಬಳಕೆಯ ವಸ್ತುಗಳನ್ನು ಕೊಳ್ಳಲು ಅಸಾಧ್ಯ ಎನ್ನುವಂತಾಗಿದೆ. ಕೂಡಲೆ ಸರ್ಕಾರ ಬೆಲೆ ಇಳಿಕೆಗೆ ಯೋಜನೆಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಸರ್ವಾಧಿಕಾರಿ ನೀತಿಯನ್ನು ಜನರ ಮೇಲೆ ಹೇರುತ್ತ ತೆರಿಗೆ ವಿಧಿಸಿದೆ. ಕೂಡಲೆ ತೆರಿಗೆ ಒತ್ತಡವನ್ನು ಕಡಿಮೆ ಮಾಡಬೇಕು. ತಪ್ಪಿದಲ್ಲಿ ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೆ.ಎಂ.ಬಿ. ಗಣೇಶ್ ಎಚ್ಚರಿಸಿದರು.
ಕೊರೊನಾ ಲಾಕ್‌ಡೌನ್‌ನಿಂದ ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಕೃಷಿ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರಾಸಾಯನಿಕ ಗೊಬ್ಬರಗಳಿಗೆ ಹೆಚ್ಚಿನ ಸಬ್ಸಿಡಿ ಘೋಷಿಸಬೇಕು. ಕೋವಿಡ್‌ಗೆ ಬಲಿಯಾದವರಿಗೆ ತಲಾ ೫ ಲಕ್ಷ ರೂ.ಗಳ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಅಲ್ಪಸಂಖ್ಯಾತ ಘಟಕದ ಇಸಾಕ್ ಖಾನ್, ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಎ.ಜಿ. ವಿಜಯ್, ತಾಲೂಕು ಅಧ್ಯಕ್ಷ ಸಿ.ಎಸ್. ನಾಗರಾಜ್, ಮಹಿಳಾ ಘಟಕದ ಕ್ಷೇತ್ರ ಸಮಿತಿ ಅಧ್ಯಕ್ಷೆ ಎಂ.ಎ. ರುಬೀನಾ, ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ, ಪ್ರಮುಖರಾದ ಜಲಾ ಹೂವಯ್ಯ, ಭರತ್ ಭೀಮಯ್ಯ, ಮಂದಣ್ಣ, ಸ್ವಾಗತ್‌ಗೌಡ, ಆದರ್ಶ್, ಅಜಿತ್, ವಿನಯ್, ಸಂಭ್ರಮ್ ಮತ್ತಿತರರು ಇದ್ದರು.