ವೀರಾಜಪೇಟೆ, ಜೂ. ೨೮: ಮಗಳ ಮನೆಗೆಂದು ತೆರಳುತಿದ್ದ ದ್ವಿಚಕ್ರ ವಾಹನ ಸವಾರರೊಬ್ಬರು ಆಯತಪ್ಪಿ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ವೀರಾಜಪೇಟೆ ಅರಮೇರಿ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ತಾಲೂಕಿನ ಹಾಕತ್ತೂರು ಹುಲಿತಾಳ ಗ್ರಾಮದ ನಿವಾಸಿಯಾದ ಒಡಿಯಂಡ ಚೆಂಗಪ್ಪ ಪ್ರಾಯ ೬೦ ಅಪಘಾತದಲ್ಲಿ ಸಾವಿಗೀಡಾದ ವ್ಯಕ್ತಿ.
ಚೆಂಗಪ್ಪ ಅವರು ಕಂಡAಗಾಲ ಗ್ರಾಮದಲ್ಲಿ ನೆಲೆಸಿರುವ ತಮ್ಮ ಮಗಳ ಮನೆಗೆ ತೆರಳುತ್ತಿದ್ದರು. ಮಡಿಕೇರಿ ವೀರಾಜಪೇಟೆ ಮುಖ್ಯರಸ್ತೆ ಅರಮೇರಿಯಲ್ಲಿ ಮೃತರು ತೆರಳುತ್ತಿದ್ದ ಹೋಂಡ ಆಕ್ಟೀವ ವಾಹನ (ಕೆಎ-೧೨ಕ್ಯು-೧೬೮೧) ಆಯತಪ್ಪಿ ಕಟ್ಟೇರ ಪೊನ್ನಪ್ಪ ಎಂಬುವವರ ಮನೆಯ ಸನಿಹವಿರುವ ಪ್ರಪಾತಕ್ಕೆ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ಪ್ರಾಣ ಹೋಗಿದೆ. ವಾಹನ ನಜ್ಜುಗುಜ್ಜಾಗಿದೆ. ಸ್ಥಳೀಯರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಮಹಜರು ಮಾಡಿ, ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಮೃತರ ಪತ್ನಿ ಶಾಂತಿ ಪೊನ್ನಮ್ಮ ಅವರು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.