ಮಡಿಕೇರಿ, ಜೂ. ೨೮ : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಾರದೆ ಇರುವುದರಿಂದ ಹೊರ ಭಾಗದಿಂದ ಜಿಲ್ಲೆಗೆ ಆಗಮಿಸುವ ಕಾರ್ಮಿಕರಿಗೆ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯ ಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯAಡ ವೀಣಾ ಅಚ್ಚಯ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇಷ್ಟು ದಿನಗಳೇ ಕಳೆದರೂ ಕೊಡಗು ಕೋವಿಡ್ ಮುಕ್ತವಾಗುತ್ತಿಲ್ಲ. ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಪಾಸಿಟಿವಿಟಿ ಪ್ರಮಾಣ ಶೇ.೫ಕ್ಕಿಂತ ಕೆಳಗಿಳಿಯುತ್ತಿಲ್ಲ. ಪರಿಸ್ಥಿತಿ ಹೀಗಿದ್ದರೂ ಹೊರ ಜಿಲ್ಲೆಗಳಿಂದ ಗುಂಪು ಗುಂಪಾಗಿ ಕಾರ್ಮಿಕರನ್ನು ಕರೆ ತರಲಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಇರಲು ಇದೂ ಕೂಡ ಒಂದು ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಪ್ರತಿ ಚೆಕ್‌ಪೋಸ್ಟ್ನಲ್ಲಿ ಕಡ್ಡಾಯವಾಗಿ ಎಲ್ಲರನ್ನು ತಪಾಸಣೆಗೆ ಒಳಪಡಿಸಬೇಕು. ಕಾರ್ಮಿಕರು ಕೋವಿಡ್ ನೆಗೆಟಿವ್ ವರದಿ ತರುವುದು ಕಡ್ಡಾಯವೆಂದು ಜಿಲ್ಲಾಡಳಿತ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಲಾಕ್‌ಡೌನ್ ಮುಂದುವರೆದಿದ್ದರೂ ಪ್ರವಾಸಿಗರು ಆಗಮಿಸಲು ಆರಂಭಿಸಿದ್ದಾರೆ. ಜುಲೈ ೫ ರವರೆಗೆ ಕೋವಿಡ್ ಲಾಕ್‌ಡೌನ್ ಮಾರ್ಗ ಸೂಚಿ ಜಾರಿಯಲ್ಲಿರುವುದರಿಂದ ಪ್ರವಾಸಿಗರು ಬಾರದಂತೆ ತಡೆಯುವ ಕೆಲಸವನ್ನು ಜಿಲ್ಲಾಡಳಿತ ಮಾಡ ಬೇಕೆಂದು ವೀಣಾಅಚ್ಚಯ್ಯ ಒತ್ತಾಯಿಸಿದ್ದಾರೆ.