ಮಡಿಕೇರಿ, ಜೂ. ೨೮; ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೂ, ಸಾರಿಗೆ ಸಂಚಾರ ನಿಷೇಧವಿದ್ದರೂ ಸಂತೆಗೆAದು ಬಂದು ಬಸ್ ಅನ್ನು ಏರಿದ್ದವರನ್ನು ಕೆಳಗಿಳಿಸಿದ ಪ್ರಸಂಗ ಇಂದು ಎದುರಾಯಿತು.
ಲಾಕ್‌ಡೌನ್ ಜಾರಿಯಲ್ಲಿ ರುವದರಿಂದ ತುರ್ತುಸೇವೆಗೆ, ಸರಕಾರಿ, ಇನ್ನಿತರ ಕಚೇರಿ ಕೆಲಸಗಳಿಗೆ ಆಗಮಿಸುವ ಗುರುತಿನ ಚೀಟಿ ಹೊಂದಿರುವವರಿಗೆ ಪ್ರಯಾಣಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಆದೇಶದಂತೆ ನಿಗದಿತ ಸಮಯದಲ್ಲಿ, ಶೇ. ೫೦ ರಷ್ಟು ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಬಸ್‌ಗಳಲ್ಲಿ ಇತರ ಪ್ರಯಾಣಿಕರನ್ನೂ ಕರೆದೊಯ್ಯಲಾಗುತ್ತಿತ್ತು.
ಇಂದು ಮಧ್ಯಾಹ್ನ ೩ ಗಂಟೆಗೆ ಕುಶಾಲನಗರ ಕಡೆಗೆ ಹೊರಟ ಬಸ್‌ನಲ್ಲಿ ಆಸನದ ಮಿತಿಗಿಂತ ಹೆಚ್ಚಾಗಿ ಪ್ರಯಾಣಿಕರು ತುಂಬಿದ್ದರು. ಇದನ್ನು ಗಮನಿಸಿದ ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ, ಅಚ್ಚಾಂಡಿರ ಪವನ್ ಪೆಮ್ಮಯ್ಯ ಹಾಗೂ ಸಂಗಡಿಗರು ಜ. ತಿಮ್ಮಯ್ಯ ವೃತ್ತದ ಬಳಿಯ ಬಸ್ ಪ್ರಯಾಣಿಕರ ತಂಗುದಾಣದ ಬಳಿ ಬಸ್ ಅನ್ನು ತಡೆದು ಹೆಚ್ಚಿಗೆ ಇರುವ ಪ್ರಯಾಣಿಕರನ್ನು ಕೆಳಗಿಳಿಸುವಂತೆ ನಿರ್ವಾಹಕರನ್ನು ಆಗ್ರಹಿಸಿದರು. ಹೆಚ್ಚಿಗೆ ಇದ್ದ ಪ್ರಯಾಣಿಕರನ್ನು ಕೆಳಗಿಳಿಸಿದ ಬಳಿಕ ವಿಧಿ ಇಲ್ಲದೆ ಸಾರಿಗೆ ನಿಗಮದ ವತಿಯಿಂದ ಮತ್ತೊಂದು ಹೆಚ್ಚುವರಿ ಬಸ್‌ನ ಮೂಲಕ ಪ್ರಯಾಣಿಕರನ್ನು ಕಳುಹಿಸಿಕೊಡಲಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಘಟಕದ ವ್ಯವಸ್ಥಾಪಕಿ ಗೀತಾ ಅವರು; ಬಸ್‌ನಲ್ಲಿ ಇತರ ಪ್ರಯಾಣಿಕರು ಹತ್ತಿಕೊಂಡಿರುವ ಬಗ್ಗೆ ಗೊತ್ತಿರಲಿಲ್ಲ. ಪ್ರಯಾಣಿಕರನ್ನು ಕರೆದೊಯ್ಯಲು ಜಿಲ್ಲಾಧಿಕಾರಿಗಳಿಂದ ಯಾವದೇ ಆದೇಶ ಬಂದಿಲ್ಲ. ಆದೇಶ ಬರುವವರೆಗೂ ಸರಕಾರಿ ನೌಕರರು, ತುರ್ತು ಕೆಲಸಗಳಿಗೆ ತೆರಳುವ ಅಧಿಕೃತ ಗುರುತಿನ ಚಿಟಿ ಹೊಂದಿದವರು ಸೇರಿದಂತೆ ಶೇ. ೫೦ ರಷ್ಟು ಮಂದಿಯನ್ನು ಮಾತ್ರ ಕರೆದೊಯ್ಯ ಲಾಗುವದು. ಇತರ ಪ್ರಯಾಣಿಕರಿಗೆ ತೆರಳಲು ಅವಕಾಶವಿರುವದಿಲ್ಲ ಎಂದು ತಿಳಿಸಿದ್ದಾರೆ.
-ಟಿ.ಜಿ. ಸತೀಶ್