ವೀರಾಜಪೇಟೆ, ಜೂ. ೨೭: ವೀರಾಜಪೇಟೆಯ ದಖನಿ ಮೊಹಲ್ಲಾ ನಿವಾಸಿ ಮೌಂಟನ್‌ವ್ಯೂ ಶಾಲೆಯ ಸ್ಥಾಪಕ ಸಯ್ಯದ್ ನಝೀರ್ ಅಹಮದ್ ತಮ್ಮ ೬೪ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಮುಖ್ಯ ಶಿಕ್ಷಕಿ ಸಯ್ಯದಾ ಅಸ್ಮಾ ನಿಖತ್ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ವೀರಾಜಪೇಟೆಯ ಮುಸ್ಲಿಂ ಖಬರಸ್ಥಾನದಲ್ಲಿ ನಡೆಯಿತು.
ಮೌಂಟನ್‌ವ್ಯೂ ಶಾಲೆಯ ಅಧ್ಯಕ್ಷ, ಕೊಡಗು ಜಿಲ್ಲಾ ಖಾಸಗಿ ಅನುದಾನ ರಹಿತ ಶಾಲಾ ಒಕ್ಕೂಟದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಉತ್ತಮ ಕ್ರೀಡಾಪಟು ಹಾಗೂ ಕ್ರೀಡಾ ಸಂಯೋಜಕರಾಗಿದ್ದ ನಝೀರ್‌ರವರು ಉದಯೋನ್ಮುಖ ಕ್ರಿಕೆಟ್ ಆಟಗಾರರಾಗಿದ್ದರು. ೭೦-೮೦ರ ದಶಕಗಳಲ್ಲಿ ವೀರಾಜಪೇಟೆಯ ಪ್ರತಿಷ್ಠಿತ ವೈ.ಎಂ.ಸಿ.ಸಿ. ಕ್ರಿಕೆಟ್ ಕ್ಲಬ್‌ನ್ನು ಸ್ಥಾಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವರ್ಷಗಳ ಹಿಂದೆ ತಮ್ಮ ದಖನಿ ಮೊಹಲ್ಲಾದಲ್ಲಿರುವ ನಿವಾಸದ ಬಳಿ ಗಣೇಶೋತ್ಸವ ಸಂದರ್ಭದಲ್ಲಿ ವಿಜಯ ವಿನಾಯಕ ಉತ್ಸವ ಸಮಿತಿಯೊಂದನ್ನು ರಚಿಸಿ ಕೋಮುಸೌಹಾರ್ದಕ್ಕೂ ಕೊಡುಗೆ ನೀಡಿದ್ದರು.
ಸಯ್ಯದ್ ನಝೀರ್‌ರವರ ನಿಧನಕ್ಕೆ ಕೊಡಗು ಜಿಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಕೊಟ್ರಂಗಡ ತಿಮ್ಮಯ್ಯ, ವೈ.ಎಂ.ಸಿ.ಸಿ. ಕ್ರಿಕೆಟ್ ಸಂಸ್ಥೆ, ವಿಜಯ ವಿನಾಯಕ ಸಮಿತಿ ದಖನಿ ಮೊಹಲ್ಲಾ, ಮುಸ್ಲಿಂ ಒಕ್ಕೂಟ ವೀರಾಜಪೇಟೆ ಹಾಗೂ ಪ್ರಗತಿ ಶಾಲೆಯ ಭಾತ್ಮೀದಾರರಾದ ಎಂ.ಎಸ್. ಪೂವಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.