*ಗೋಣಿಕೊಪ್ಪ, ಜೂ. ೨೭: ನಗರದ ಉಮಾಮಹೇಶ್ವರಿ ಬಡಾವಣೆಯ ೧ನೇ ವಿಭಾಗದ ದಿಲೀಪ್ ಅವರ ಮನೆಗೆ ಅತಿಥಿಯಾಗಿ ಬಂದ ನಾಗರಹಾವನ್ನು ಸ್ನೇಕ್ ಬಾವೆ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಭಾನುವಾರ ಮಧ್ಯಾಹ್ನ ಸಮಯ ಸಮೀಪದ ತೋಟದಿಂದ ಬಂದ ಹಾವು ದಿಲೀಪ್ ಅವರ ಹೂ ತೋಟದಲ್ಲಿ ಪ್ರತ್ಯಕ್ಷವಾಗಿದೆ.

ಸರಿಸೃಪ ಕಂಡ ವಿದ್ಯಾರ್ಥಿನಿ ಮನ್ಮಿತಾ ಪೋಷಕರಿಗೆ ಮಾಹಿತಿ ನೀಡಿದ ಕಾರಣ ಸಣ್ಣ ಮಕ್ಕಳು ವಯಸ್ಕರು ಇರುವ ಮನೆಯೊಳಗೆ ಹಾವು ನುಸುಳಿ ಉಂಟಾಗುವ ಅನಾಹುತವನ್ನು ತಪ್ಪಿಸಲು ಸಾಧ್ಯವಾಗಿದೆ.

೫ ಅಡಿ, ಗೋಧಿ ಬಣ್ಣ ಹೊಂದಿರುವ ಹಾವು ಜನರ ಗದ್ದಲಕ್ಕೆ ಸೌದೆ ಜೋಡಿಸಿಟ್ಟ ಸ್ಥಳದಲ್ಲಿ ರಕ್ಷಣೆ ಪಡೆದುಕೊಂಡಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಬಾವೆ ಕ್ಷಣಾರ್ಧದಲ್ಲಿ ಸೆರೆಹಿಡಿದು ತಿತಿಮತಿ ಅರಣ್ಯದ ಕಡೆ ಸಾಗಿದರು.