ಮಡಿಕೇರಿ, ಜೂ. ೨೭: ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಕಲಾವಿದರನ್ನು ಗುರುತಿಸಿ ಕನ್ನಡ ನಾಡಿನ ಖ್ಯಾತ ರಂಗ ನಿರ್ದೇಶಕ ಸಿ.ಜಿ.ಕೃಷ್ಣಸ್ವಾಮಿ ಹೆಸರಿನಲ್ಲಿ ನೀಡಲಾಗುವ ೨೦೨೧-೨೨ನೇ ಸಾಲಿನ ಸಿ.ಜಿ.ಕೆ. ರಂಗಪುರಸ್ಕಾರ ಪ್ರಶಸ್ತಿ ಕೊಡಗು ಜಿಲ್ಲೆಯಿಂದ ಕೊಡಗಿನ ರಂಗಭೂಮಿ ಸಂಸ್ಥೆಯಾದ ‘ಸೃಷ್ಟಿ’ಯಲ್ಲಿ ಸೇವೆ ಸಲ್ಲಿಸಿದ ಕಲಾವಿದರಾದ ಚೆಪ್ಪುಡೀರ ಉತ್ತಪ್ಪ ಮತ್ತು ಮಾದೇಟಿರ ಬೆಳ್ಳಿಯಪ್ಪ ಇವರಿಗೆ ಸಂದಿವೆ.

ಚೆಪ್ಪುಡೀರ ಉತ್ತಪ್ಪ ಸೃಷ್ಟಿ ಸಂಸ್ಥೆ ಅಧ್ಯಕ್ಷರಾಗಿ, ನಟನಾಗಿ, ರಂಗ ಗಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಅಪ್ಪಚ್ಚ ಕವಿಯ ಹಾಡುಗಳ ಧ್ವನಿ ಸುರುಳಿಗೆ ಸ್ವರ ನೀಡಿದ್ದಾರೆ.

ಮಾದೇಟಿರ ಬೆಳ್ಳಿಯಪ್ಪ ಅದ್ಭುತ ನಟ, ಸೃಷ್ಟಿ ಕೊಡಗು ರಂಗದ ಕಲಾವಿದನಾಗಿ, ನೀನಾಸಂ ಪದವೀಧರ. ಅನೇಕ ನಾಟಕಗಳಲ್ಲಿ ನಟಿಸಿರುವ ಇವರು ರಂಗ ನಿರ್ದೇಶಕರು ಕೂಡ ಆಗಿದ್ದಾರೆ.

೨೦೦೦ದಿಂದ ಪ್ರಾರಂಭವಾದ ಈ ರಂಗ ಪುರಸ್ಕಾರದಲ್ಲಿ ಇದುವರೆಗೆ ಕೊಡಗಿನ ೧೦ ಕಲಾವಿದರಿಗೆ ಈ ಪುರಸ್ಕಾರ ದೊರಕಿದೆ. ಪ್ರತಿಷ್ಠಾನದ ಕೊಡಗಿನ ಸಂಚಾಲಕಿ ಅನಿತಾ ಕಾರ್ಯಪ್ಪ ಈ ಇಬ್ಬರು ಕಲಾವಿದರ ಹೆಸರನ್ನು ಶಿಫಾರಸು ಮಾಡಿದ್ದರು. ಕೋವಿಡ್ ಲಾಕ್‌ಡೌನ್ ನಂತರ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ರಂಗಭೂಮಿ ಪ್ರತಿಷ್ಠಾನ ಕೊಡಗು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.