ಕೂಡಿಗೆ, ಜೂ. ೨೭: ಅದೊಂದು ಬಡ ಕುಟುಂಬ. ಹೇಗೋ ಜೋಪಡಿಯಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ, ಮಳೆ ಅವರ ನೆಲೆಯನ್ನು ಕಸಿದುಕೊಂಡಿದೆ. ಇದ್ದ ಜೋಪಾಡಿ ಕುಸಿದು ಬಿದ್ದಿದೆ. ಇದೀಗ ಕೊಟ್ಟಿಗೆಯೇ ಅವರಿಗೆ ಆಶ್ರಯ ತಾಣವಾಗಿದ್ದು, ಯಾವುದೇ ಮೂಲಭೂತ ಸೌಲಭ್ಯ ಇಲ್ಲದೆ ಮುಂದೇನೂ ಎಂಬ ಚಿಂತೆಯಲ್ಲಿದ್ದಾರೆ.

ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬಸವನತ್ತೂರು ಗ್ರಾಮದ ಆನೆಕೆರೆ ಸಮೀಪದಲ್ಲಿ ಕಳೆದ ೨೦ ವರ್ಷಗಳಿಂದ ನೆಲೆಸಿದ್ದ ಜೇನುಕುರುಬರ ರಾಜಣ್ಣ, ನಾಗಮ್ಮ ಅವರ ಜೋಪಡಿ ಮಳೆಗೆ ಕುಸಿದು ಹೋಗಿತ್ತು. ಅದೃಷ್ಟವಶಾತ್ ಮನೆ ಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದರು. ಇದೀಗ ಮನೆ ಕಳೆದುಕೊಂಡ ಅವರು ಸೌದೆ ಕೊಟ್ಟಿಗೆಯಲ್ಲಿ ಕಷ್ಟದಾಯಕ ಜೀವನ ಸಾಗಿಸುತ್ತಿದ್ದಾರೆ. ಇವ ರೊಂದಿಗೆ ೭ ವರ್ಷದ ಮೊಮ್ಮಗಳು ಪವಿತ್ರ ಕೂಡ ಇದ್ದು, ಪರ್ಯಾಯ ವ್ಯವಸ್ಥೆಗೆ ಮನವಿ ಮಾಡಿದ್ದಾರೆ.

ಚುನಾವಣೆ ಸಂದರ್ಭ ರಾಜಣ್ಣ ಮತ್ತು ನಾಗಮ್ಮ ವಾಸಿಸುವ ಸ್ಥಳಕ್ಕೆ ಹಲವು ರಾಜಕೀಯ ನಾಯಕರು ಆಗಮಿಸಿ ನಿಮಗೆ ಹೊಸ ಮನೆ ನಿರ್ಮಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಆ ಭರವಸೆ, ಭರವಸೆಯಾಗಿಯೇ ಉಳಿದ ಪರಿಣಾಮ ಜೋಪಡಿಯನ್ನು ಇದೀಗ ಕಳೆದುಕೊಂಡು ಕುಟುಂಬ ಕಂಗಾಲಾಗಿದೆ.

ದಾಖಲೆಗಳಿಲ್ಲ

ಇವರುಗಳ ಬಳಿ ಮತದಾನದ ಗುರುತಿನ ಚೀಟಿ ಹೊರತುಪಡಿಸಿದರೆ ಬೇರೆ ಯಾವುದೇ ದಾಖಲೆಗಳಿಲ್ಲ. ಅಧಾರ್ ಕಾರ್ಡ್ ಅಥವಾ ಸರ್ಕಾರದ ವತಿಯಿಂದ ಸೌಲಭ್ಯಗಳನ್ನು ಪಡೆಯಲು ಯಾವುದೇ ದಾಖಲೆಯನ್ನು ಹೊಂದಿಲ್ಲ. ಇದುವರೆಗೂ ನ್ಯಾಯಬೆಲೆ ಅಂಗಡಿಗಳಿAದ ಯಾವುದೆ ಪಡಿತರ ವಸ್ತುಗಳು ಈ ಕುಟುಂಬಕ್ಕೆ ಲಭ್ಯವಾಗಿಲ್ಲ. ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನೀಡುವ ಗಿರಿಜನ ಯೋಜನೆ ಆಹಾರ ಸೌಲಭ್ಯಗಳನ್ನು ಕೆಲ ವರ್ಷಗಳವರೆಗೆ ನೀಡಿದರು.

ಒಂದು ವರ್ಷಗಳಿಂದ ಅದು ಕೂಡ ದೊರೆಯುತ್ತಿಲ್ಲ. ಕುಟುಂಬ ಅಕ್ಕಪಕ್ಕ ಗ್ರಾಮದ ಜಮೀನಿನಲ್ಲಿ ಕೂಲಿ ಕೆಲಸ ಮಾಡಿ ಅದರಿಂದ ಬಂದ ಹಣದಲ್ಲಿ ತಮ್ಮ ಮೊಮ್ಮಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದಾರೆ.

ಇರುವ ಜಾಗ ತೀವ್ರ ಇಕ್ಕಟ್ಟಾಗಿದ್ದು, ಅದಲ್ಲದೆ ಮಳೆ ನೀರು ಸೋರುತ್ತದೆ. ಇದನ್ನು ಮನಗಂಡು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಮತ್ತು ಸಿಬ್ಬಂದಿಗಳು ಪ್ಲಾಸ್ಟಿಕ್ ಹೊದಿಕೆೆ ನೀಡಿದರೂ ಕೂಡ ಗಾಳಿ-ಮಳೆಗೆ ಹಾರಿ ಹೋಗುತ್ತಿದೆ. ಕಳೆದ ಇಪ್ಪತ್ತು ವರ್ಷಗಳಿಂದ ವಾಸಿಸುತ್ತಿರುವ ಈ ಬಡ ಕುಟುಂಬದ ಮನೆಗೆ ವಿದ್ಯುತ್ ವ್ಯವಸ್ಥೆಯು ಇಲ್ಲದೆ ಇತ್ತ ನ್ಯಾಯ ಬೆಲೆ ಅಂಗಡಿಯಲ್ಲಿ ಸೀಮೆಎಣ್ಣೆಯು ಸಹ ಸಿಗದೆ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದೇವೆ ಎಂದು ರಾಜಣ್ಣ ತಮ್ಮ ನೋವು ತೋಡಿಕೊಂಡಿದ್ದಾರೆ.

ಸಂಬAಧಿಸಿದ ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಗಿರಿಜನ ಅಭಿವೃದ್ಧಿ ಯೋಜನೆ ಅಧಿಕಾರಿ ವರ್ಗದವರು ಸ್ಥಳ ಪರಿಶೀಲನೆ ನಡೆಸಿ, ತುರ್ತಾಗಿ ಇಲಾಖೆಯ ವತಿಯಿಂದ ಸಿಗುವ ಸೌಲಭ್ಯದ ಮೂಲಕ ನೊಂದವರಿಗೆ ಬೆಳಕಾಗಬೇಕಾಗಿದೆ.

- ಕೆ.ಕೆ. ನಾಗರಾಜಶೆಟ್ಟಿ.