ಗೋಣಿಕೊಪ್ಪ ವರದಿ: ಅರಮೇರಿ ಎಸ್‌ಎಂಎಸ್ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಸುಮಾರು ಎಂಟು ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿನಾಯಕ ಶಾಲೆ, ಲಯನ್ಸ್, ಸೇಕ್ರೇಡ್ ಹಾರ್ಟ್ಸ್, ಕೂರ್ಗ್ ವ್ಯಾಲಿ, ರಾಜ ರಾಜೇಶ್ವರಿ, ಭಾರತೀಯ ವಿದ್ಯಾಭವನ್ ಕೊಡಗು ವಿದ್ಯಾಲಯ ಶಾಲೆಗಳ ಸುಮಾರು ೬೫ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಾದ ಕೆ.ಡಿ. ನಿಮಿತ, ಎಂ. ದಿಶಾ, ಕೆ.ಡಿ. ಸಮೀಕ್ಷಾ ಕಾರ್ಯಕ್ರಮ ನಡೆಸಿಕೊಟ್ಟರು.

ಆನ್‌ಲೈನ್ ಮೂಲಕ ಯೋಗ ಗುರು ಪುಟ್ಟಿಚಂಡ ಬಿದ್ದಪ್ಪ ಯೋಗಾಸನ ಮಾಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಯೋಗ ಅಭ್ಯಾಸದಿಂದ ವಿದ್ಯಾರ್ಥಿ ಜೀವನದಲ್ಲಿ ಒತ್ತಡ ನಿಭಾಯಿಸಿಕೊಂಡು ಕಲಿಕೆಯಲ್ಲಿ ಸಾಧನೆ ಮಾಡುವ ಬಗ್ಗೆ ತಿಳಿಸಿಕೊಟ್ಟರು. ವಜ್ರಾಸನ, ಧನುರಾಸನ, ಸ್ವಸ್ತಿಕಾಸನ, ಸೂರ್ಯ ನಮಸ್ಕಾರ, ಧ್ಯಾನ ನಡೆಸಿಕೊಟ್ಟರು. ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಎಂ.ಸಿ. ಸಚಿನ್, ಪ್ರಾಂಶುಪಾಲೆ ಡಾ. ರೇಖಾ ಚಿಣ್ಣಪ್ಪ ಇದ್ದರು.

ಕೊಡಗು ನಾಟ್ಯಾಂಜಲಿ ನೃತ್ಯ ಸಂಸ್ಥೆ ಅಮ್ಮತ್ತಿ, ಮೂರ್ನಾಡು, ಗೋಣಿಕೊಪ್ಪ, ವೀರಾಜಪೇಟೆ ಶಾಖೆಗಳಿಂದ ಆನ್‌ಲೈನ್ ಮೂಲಕ ಯೋಗ ದಿನಾಚರಣೆ ಆಚರಿಸಲಾಯಿತು. ಯೋಗ ಶಿಕ್ಷಕರಾದ ಶ್ವೇತ, ಕಾವ್ಯಶ್ರೀ ಅವರೊಂದಿಗೆ ಸುಮಾರು ೧೬೦ ವಿದ್ಯಾರ್ಥಿಗಳು ಯೋಗಾಸನ ಮಾಡಿದರು. ಕಲಾವಿದೆ ಹೇಮಲತ ಕಾಂತರಾಜ್ ಮಾರ್ಗದರ್ಶನ ನೀಡಿದರು.

ಕೊಡಗು ನಾಟ್ಯಾಂಜಲಿ ನೃತ್ಯ ಸಂಸ್ಥೆ

ಮಡಿಕೇರಿ: ಕೊಡಗು ನಾಟ್ಯಾಂಜಲಿ ನೃತ್ಯ ಸಂಸ್ಥೆಯ ಮೂರ್ನಾಡು, ಅಮ್ಮತ್ತಿ, ಗೋಣಿಕೂಪ್ಪ, ವೀರಾಜಪೇಟೆ ಶಾಖೆಗಳ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಮನೆಗಳಲ್ಲಿಯೇ ಯೋಗ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು. ವಿದುಷಿ ಹೇಮಲತಾ ಕಾಂತರಾಜ್ ಅವರ ಮಾರ್ಗ ದರ್ಶನದಲ್ಲಿ ನೃತ್ಯ ಸಂಸ್ಥೆಯ ಶಿಕ್ಷಕರಾದ ಶ್ವೇತಾ ಹಾಗೂ ಕಾವ್ಯಶ್ರೀ ಅವರುಗಳು ವಿದ್ಯಾರ್ಥಿಗಳಿಂದ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸುಮಾರು ೧೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.