ಅವಳಿ ಸ್ಫೋಟ ಭಯೋತ್ಪಾದಕ ದಾಳಿ: ದಿಲ್ಬಾಗ್ ಸಿಂಗ್

ನವದೆಹಲಿ, ಜೂ. ೨೭: ಜಮ್ಮು ವಿಮಾನ ನಿಲ್ದಾಣದ ಹೈ ಸೆಕ್ಯುರಿಟಿ ಭಾರತೀಯ ವಾಯುಪಡೆಯ ನಿಲ್ದಾಣದಲ್ಲಿ ಸಂಭವಿಸಿದ ಅವಳಿ ಸ್ಫೋಟ ಭಯೋತ್ಪಾದಕ ದಾಳಿ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಪೊಲೀಸರು, ಐಎಎಫ್ ಮತ್ತು ಇತರ ಏಜೆನ್ಸಿಗಳು ದಾಳಿಯ ಬಗ್ಗೆ ತನಿಖೆ ನಡೆಸುತ್ತಿವೆ. ಮುಂಜಾನೆ ೧.೪೦ರ ಸುಮಾರಿಗೆ ಎರಡು ಸ್ಫೋಟಕಗಳು ತುಂಬಿದ ಡ್ರೋನ್‌ಗಳು ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಐಎಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಆರು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟಗಳು ನಡೆದಿವೆ. ಮೊದಲ ಸ್ಫೋಟ ನಗರದ ಸತ್ವಾರಿ ಪ್ರದೇಶದಲ್ಲಿ ಐಎಎಫ್ ನಿರ್ವಹಿಸುತ್ತಿದ್ದ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದ ಮೊದಲ ಅಂತಸ್ತಿನ ಕಟ್ಟಡದ ಮೇಲೆ ಬಿದ್ದು ಛಾವಣಿ ಧ್ವಂಸಗೊAಡಿದೆ. ಎರಡನೆಯದು ನೆಲದ ಮೇಲೆ ಬಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಯುಪಡೆಯ ಉಪ ಏರ್ ಚೀಫ್, ಏರ್ ಮಾರ್ಷಲ್ ಹೆಚ್.ಎಸ್. ಅರೋರ ಅವರ ಜೊತೆ ಮಾತುಕತೆ ನಡೆಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಇಳಿಮುಖ: ೩,೬೦೪ ಪ್ರಕರಣ ಪತ್ತೆ

ಬೆಂಗಳೂರು, ಜೂ. ೨೭: ರಾಜ್ಯದಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಕಡಿಮೆಯಾಗುತ್ತಿದ್ದು ಇಂದು ೩,೬೦೪ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೨೮,೩೪,೬೩೦ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೮೯ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೪,೭೪೩ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಇಂದು ೭೮೮ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೧೧,೪೩೦ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ ೧೧ ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ ೭,೬೯೯ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೬,೯೮,೮೨೨ಕ್ಕೆ ಏರಿಕೆಯಾಗಿದೆ. ಇನ್ನು ೧,೦೧,೦೪೨ ಸಕ್ರೀಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೬೪,೬೩೬ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೩,೬೦೪ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೨.೧೮ಕ್ಕೆ ಇಳಿದಿದೆ.

ಕಂಚಿನ ಪದಕ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ

ಹೆಲ್ಸಿಂಕಿ, ಜೂ. ೨೭: ಫಿನ್‌ಲ್ಯಾಂಡ್‌ನಲ್ಲಿ ನಡೆದ ಕುರ್ಟೇನ್ ಕ್ರೀಡಾಕೂಟದಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಕಂಚಿನ ಪದಕ ಗೆದ್ದಿದ್ದಾರೆ. ನೀರಜ್ ಚೋಪ್ರಾ ಅವರು ೮೬.೭೯ ಮೀಟರ್ ದೂರಕ್ಕೆ ಎಸೆದಿದ್ದು, ಕಂಚಿನ ಪದಕ ಗೆದ್ದಿದ್ದಾರೆ ಎಂದು ಅಧಿಕೃತ ಒಲಿಂಪಿಕ್ಸ್ ವೆಬ್‌ಸೈಟ್ ವರದಿ ಮಾಡಿದೆ. ಜರ್ಮನಿಯ ಜೋಹಾನ್ಸ್ ವೆಟ್ಟರ್ ೯೩.೫೯ ಮೀಟರ್ ಬೃಹತ್ ಎಸೆತದಿಂದ ಚಿನ್ನ ಗೆದ್ದರೆ, ಕೆಶೋರ್ನ್ ವಾಲ್ಕಾಟ್ ಅವರು ೮೯.೧೨ ಮೀಟರ್ ದೂರಕ್ಕೆ ಎಸೆದು ಬೆಳ್ಳಿ ಪದಕ ಗೆದ್ದಿದ್ದಾರೆ.