ಮಡಿಕೇರಿ, ಜೂ. ೨೭: ಕೋವಿಡ್ ಕಂಡುಬAದ ನಂತರದ ಈ ೧೫ ತಿಂಗಳಿನಲ್ಲಿ ಕೊಡಗಿನ ವೈದ್ಯಕೀಯ ಕ್ಷೇತ್ರಕ್ಕೆ ಹಲವೆಡೆಗಳಿಂದ ವೈದ್ಯಕೀಯ ಉಪಕರಣಗಳ ಕೊಡುಗೆಗಳ ಮಹಾಪೂರವೇ ಲಭಿಸಿದೆ. ವಿದೇಶಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ವೈದ್ಯಕೀಯ ನೆರವು ಬಂದಿದೆ. ಕೊಡಗಿಗೆ ಎಷ್ಟು ಮೌಲ್ಯದ ಉಪಕರಣಗಳು ಈವರೆಗೂ ಲಭಿಸಿವೆ? ಉಪಕರಣಗಳು ಜಿಲ್ಲೆಯ ಯಾವ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಲ್ಪಟ್ಟಿದೆ? ಬಾಕಿ ಉಳಿದಿರುವುದೆಷ್ಟು? ಉಪಯೋಗವಾಗದೇ ಉಳಿದಿರುವುದು ಎಷ್ಟು..?
ಈ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಜಿಲ್ಲೆಯ ಜನತೆ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿAದ ಕೇಳುತ್ತಿದ್ದಾರೆ. ಅಧಿಕಾರಿಗಳೇ ಮಾಹಿತಿ ನೀಡಿ.
ಈ ಮಾಹಿತಿ ಯಾಕೆ ಬೇಕು ಎಂದರೆ, ನೆನಪಿದೆಯೇ?
೨೦೧೮ರಲ್ಲಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ದೇಶದಾದ್ಯಂತಲಿನಿAದ ಕೊಡಗಿಗೆ ನೆರವು ಲಭಿಸಿತ್ತು. ಕೋಟಿಗಟ್ಟಲೆ ಮೌಲ್ಯದ ನೆರವು ಹರಿದುಬಂತು. ಕೊಡಗಿನ ಜನತೆಯ ಮೇಲಿನ ಪ್ರೀತಿ, ಕಾಳಜಿಯಿಂದ ಸಾವಿರಾರು ದಾನಿಗಳು ಸಹಾಯಕ್ಕೆ ಮುಂದಾದರು. ಈ ಸಂದರ್ಭ ಜಿಲ್ಲಾಡಳಿತ ಎಲ್ಲಾ ಕೊಡುಗೆಗಳ ಬಗ್ಗೆ ಕರಾರುವಕ್ಕಾದ ಲೆಕ್ಕ ಇಡುವಲ್ಲಿ ಪ್ರಾರಂಭಿಕ ದಿನಗಳಲ್ಲಿ ವಿಫಲವಾಗಿತ್ತು. ಹೀಗಾಗಿ ಮಳೆ ಸಂತ್ರಸ್ಥರಿಗೆ ದೊರಕಬೇಕಾದ ನೆರವು ಸಕಾಲದಲ್ಲಿ ದೊರಕದೇಹೋಯಿತು. ಬಂದಿದ್ದ ನೆರವು ಕಂಡಕAಡವರ ಪಾಲಾಯಿತು. ಕೊಡಗಿಗೆ ನೆರವು ನೀಡಿದ್ದು ಸಮರ್ಪಕವಾಗಿ ಪ್ರಯೋಜನಕ್ಕೆ ಬಾರಲಿಲ್ಲ ಎಂದು ದಾನಿಗಳೇ ಕೊರಗುವಂತಾಯಿತು. ನಿಜ ಕೂಡ ಆಗಿತ್ತು. ಕಳುಹಿಸಿದ್ದ ನೆರವಿನ ಸಾಮಗ್ರಿಗಳು ಅಗತ್ಯವುಳ್ಳವರಿಗಿಂತ ಬೇರೆಯವರ ಪಾಲಾಗಿದ್ದೇ ಹೆಚ್ಚು ಎಂಬAತಾಗಿತ್ತು.
ಆ ಕಹಿನೆನಪು ಇನ್ನೂ ಜಿಲ್ಲೆಯ ಜನತೆಯಲ್ಲಿದೆ. ಹೀಗಿರುವಾಗ ಕೋವಿಡ್ನಿಂದ ನಲುಗಿರುವ ಕೊಡಗು ಜಿಲ್ಲೆಗೂ ದೇಶವಿದೇಶಗಳಿಂದ ನೆರವು ಕಳೆದ ೧೫ ತಿಂಗಳಿನಿAದ ಲಭಿಸುತ್ತಿದೆ. ವಿವಿಧ ಸಂಘ, ಸಂಸ್ಥೆಗಳು, ಜನರು ಕೊಡಗಿನ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ತರ ಸಹಾಯ ಮಾಡಿದ್ದಾರೆ.
ಲಕ್ಷಾಂತರ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳು ಜಿಲ್ಲೆಯ ಆರೋಗ್ಯ ಇಲಾಖೆ, ವೈದ್ಯಕೀಯ ಕಾಲೇಜಿಗೆ ದೊರಕಿದೆ. ಇದೆಲ್ಲಾ ಏನಾಯಿತು, ಸರಿಯಾಗಿ ಬಳಕೆಯಾಗುತ್ತಿದೆಯೇ ಎಂಬ ಪ್ರಶ್ನೆ
(ಮೊದಲ ಪುಟದಿಂದ) ಜಿಲ್ಲೆಯ ಜನತೆಯಲ್ಲಿ ಮೂಡುತ್ತಿದೆ. ಕೊಡುಗೆ ನೀಡಿದ ದಾನಿಗಳೂ ಕೂಡ ತಾವು ಕೊಟ್ಟ ಮೌಲ್ಯಯುತ ಉಪಕರಣಗಳು, ಸಾಮಗ್ರಿಗಳು ಏನಾದವು? ಫಲಾನುಭವಿಗಳಿಗೆ ದೊರಕಿದೆಯೇ ಎಂದು ಕೇಳುವಂತಾಗಿದೆ.
ಜನರಲ್ಲಿ, ದಾನಿಗಳಲ್ಲಿ ಮೂಡಿರುವ ಸಂಶಯದ ಪ್ರಶ್ನೆಗಳನ್ನು ನಿವಾರಿಸುವುದು ಆರೋಗ್ಯ ಇಲಾಖೆ, ವೈದ್ಯಕೀಯ ಕಾಲೇಜಿನ ಪ್ರಮುಖರ ಕರ್ತವ್ಯವಾಗಿದೆ.
ಜತೆಗೆ, ದೊರಕಿರುವ ಹಲವಷ್ಟು ಆಧುನಿಕ ಉಪಕರಣಗಳ ಬಳಕೆಗೆ ಜಿಲ್ಲೆಯಲ್ಲಿ ಪರಿಣಿತ ತಂತ್ರಜ್ಞರು ಇದ್ದಾರೆಯೇ ಎಂಬ ಮಾಹಿತಿಯನ್ನೂ ನೀಡಬೇಕಾಗಿದೆ.
ಇನ್ನೂ ಯಾವೆಲ್ಲಾ ಉಪಕರಣಗಳು ಬಳಕೆಯಾಗಿಲ್ಲ. ಅವು ಎಲ್ಲಿದೆ ಎಂದೂ ತಿಳಿಸಬೇಕಾಗಿದೆ.
ಕೊಡಗಿನ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದೆ. ಹೆಚ್ಚುವರಿ ಉಪಕರಣಗಳನ್ನು ಇಂತಹ ಆರೋಗ್ಯ ಕೇಂದ್ರಗಳಿಗೆ ನೀಡಿದ್ದೇ ಆದಲ್ಲಿ ಕೋವಿಡ್ನ ಮುಂದಿನ ಅಲೆಗಳನ್ನು ಗ್ರಾಮೀಣ ಮಟ್ಟದಲ್ಲಿ ತಡೆಯುವಲ್ಲಿ ಸಹಕಾರಿಯಾಗುತ್ತದೆ. ಆದರೆ, ಕೆಲವರು ಸಂಶಯ ವ್ಯಕ್ತಪಡಿಸಿರುವಂತೆ ಗ್ರಾಮೀಣ ಪ್ರದೇಶಗಳ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಸಾಮಗ್ರಿಗಳು ತಲುಪಿದ್ದೇ ಕಡಿಮೆ.
ಕೊಡಗು ಜಿಲ್ಲೆಗೆ ಲಭಿಸಿದ ಮತ್ತು ಇನ್ನೂ ಲಭಿಸುತ್ತಿರುವ ವೈದ್ಯಕೀಯ ಸಾಮಗ್ರಿಗಳ ವಿತರಣೆಗೆ ನೋಡಲ್ ಅಧಿಕಾರಿಯ ನೇಮಕ ಅತ್ಯಂತ ಅಗತ್ಯವಾಗಿದೆ. ಇಂತಹ ಅಧಿಕಾರಿ ಸೂಕ್ತ ರೀತಿಯಲ್ಲಿ ಗ್ರಾಮೀಣ ಪ್ರದೇಶಗಳಿಗೂ ಅಗತ್ಯ ವೈದ್ಯಕೀಯ ಉಪಕರಣಗಳನ್ನು ವಿತರಿಸಬಹುದು.
ಕೊಡಗಿಗೆ ನೀಡಿದ್ದ ಕೊಡುಗೆಗಳು ಸಾರ್ಥಕವಾಗಿ ಬಳಕೆಯಾಗಿದೆ ಎಂಬುದು ಮನದಟ್ಟಾದರೆ ದಾನಿಗಳಿಗೂ ಸಮಾಧಾನ. ಮತ್ತಷ್ಟು ಕೊಡುಗೆ ನೀಡಲು ಮನಸ್ಸು ಬರುತ್ತದೆ. ಇತರ ದಾನಿಗಳಿಗೂ ಕೂಡ ತಾವೂ ಕೊಡುಗೆ ನೀಡೋಣ ಎಂಬ ಮನೋಭಾವಕ್ಕೆ ಕಾರಣವಾಗುತ್ತದೆ.
ಕೊಡಗಿಗೆ ಅಗತ್ಯಕ್ಕಿಂತ ಹೆಚ್ಚಿನ ವೈದ್ಯಕೀಯ ಉಪಕರಣ ಬಂದಿದ್ದೇ ಆದಲ್ಲಿ ಅದನ್ನೂ ತಿಳಿಸಬೇಕು. ಆಗ ದಾನಿಗಳು ನಾಡಿನ ಇತರ ಜಿಲ್ಲೆಗಳಿಗೆ ಅಗತ್ಯವಾಗಿರುವ ನೆರವು ನೀಡಲು ಮುಂದಾಗುತ್ತಾರೆ. ಇಲ್ಲಿ ಸ್ವಾರ್ಥಕ್ಕಿಂತ ನಾಡಿನ ಎಲ್ಲಾ ಜನತೆಯ ಆರೋಗ್ಯದ ಕಾಳಜಿ ಮುಖ್ಯವಾಗಬೇಕು.
ಕಳೆದ ೧೫ ತಿಂಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಕ್ಸಿಮೀಟರ್ ಸೇರಿದಂತೆ ಸಣ್ಣಪುಟ್ಟ ಉಪಕರಣಗಳು ಕೂಡ ದೊರಕಿದೆ. ಇವೆಲ್ಲಾ ಹೇಗೆ ಬಳಕೆಯಾಗುತ್ತಿದೆ ಎಂಬ ಮಾಹಿತಿ ಪಾರದರ್ಶಕವಾಗಿ ಬೇಕಾಗಿದೆ.
ಇಲ್ಲದೇ ಹೋದಲ್ಲಿ, ಮುಂದೊAದು ದಿನ ದಾನಿಗಳು, ಯಾಕಾದರೂ ಕೊಡಗಿಗೆ ಕೊಡುಗೆ ನೀಡಿದೆ ಎಂದು ಬೇಸರ ಪಡುವಂತಾಗಬಾರದು. ಜನರೂ ಕೂಡ ಕೊಡಗಿಗೆ ಲಭಿಸಿದ ವೈದ್ಯಕೀಯ ಕೊಡುಗೆ ಸರಿಯಾಗಿ ಉಪಯೋಗವಾಗಲಿಲ್ಲ ಎಂದು ಮರುಗುವಂತೆ ಆಗಬಾರದು. ಯಾವುದೇ ಕಾರಣಕ್ಕೂ ಕೊಡಗಿನ ಹೆಸರು ಹಾಳಾಗಬಾರದು.
ಹೀಗಾಗಿಯೇ ಜಿಲ್ಲೆಯ ಜನತೆಯ ಪರವಾಗಿ ಆರೋಗ್ಯ ಇಲಾಖೆ, ವೈದ್ಯಕೀಯ ಕಾಲೇಜು ಆಡಳಿತಗಾರರು ತಮಗೆ ಈವರೆಗೆ ದೊರಕಿದ ಉಪಕರಣಗಳು ಮತ್ತು ಸದ್ಯಕ್ಕಿರುವ ಉಪಕರಣಗಳ ಮಾಹಿತಿಯನ್ನು ಪಾರದರ್ಶಕ ರೀತಿಯಲ್ಲಿ ನೀಡಿ ಎಲ್ಲಾ ಸಂಶಯಗಳನ್ನು ಪರಿಹರಿಸಲೇಬೇಕು.
-ಅನಿಲ್ ಎಚ್.ಟಿ.