ಮಡಿಕೇರಿ, ಜೂ.೨೭: ಪ್ರವಾಸಿಗರು ಮತ್ತು ಕಾರ್ಮಿಕರು ಒಂದು ವಾರದವರೆಗೆ ಕೊಡಗು ಜಿಲ್ಲೆಗೆ ಬಾರದಿರಲಿ. ಜುಲೈ ೫ ರ ಲಾಕ್ ಡೌನ್‌ವರೆಗೆ ಹೊರಗಿನಿಂದ ಬರುವಿಕೆಯನ್ನು ಸ್ಥಗಿತಗೊಳಿಸಿ ಸಂಚಾರ ನಿಯಂತ್ರಣವನ್ನು ಬಿಗಿಗೊಳಿಸಲಾಗುತ್ತದೆ ಎಂದು ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ “ಶಕ್ತಿ” ಯೊಂದಿಗೆ ಖಡಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ಮುಕ್ತ ನುಡಿ ಹೀಗಿದೆ:-“ಕೊಡಗು ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚು ಕಡಿಮೆ ಅಗುತ್ತಿದೆ. ಹೀಗಿರುವಾಗ ವಾರಾಂತ್ಯಗಳಲ್ಲಿ ರಾಜ್ಯ ಮತ್ತು ಅಂತರ್ ರಾಜ್ಯದ ಪ್ರವಾಸಿಗರು ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲೆ ಒಳಗೆ ಬಿಟ್ಟರೆ ಸ್ವಯಂ ಕೃತ ಅಪರಾಧ ಅಗುತ್ತದೆ. ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಅನ್‌ಲಾಕ್ ಅಗಿದೆ. ಈ ನಿಟ್ಟಿನಲ್ಲಿ ಕೊಡಗಿಗೆ ಪ್ರವಾಸಿಗರು ಬರುವುದು ಸರಿ ಅಲ್ಲ. ಜಿಲ್ಲೆಯಲ್ಲಿ ದಿನನಿತ್ಯ ಕೊರೊನಾ ಸೋಂಕಿನ ಪ್ರಕರಣದ ಪಾಸಿಟಿವ್ ರೇಟ್ ಕಣ್ಣಾಮುಚ್ಚಾಲೆ ಅಡುತ್ತಿದೆ. ಪಾಸಿಟಿವ್ ರೇಟ್ ಕನಿಷ್ಟ ಸರಾಸರಿ ಶೇ. ೫ ಕ್ಕಿಂತ ಕೆಳಗಿಳಿಯುವವರೆಗೆ ಜಿಲ್ಲೆಯಲ್ಲಿ ಆತಂಕವಿದೆ.