ವೀರಾಜಪೇಟೆ, ಜೂ. ೨೬: ಕೊಡಗಿನ ವಿವಿಧ ಭಾಗಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತಿದ್ದ ಚೋರರನ್ನು ಪೊಲೀಸರು ಬಂಧಿಸಿರುವ ಘಟನೆ ವೀರಾಜಪೇಟೆ ಹೊರ ವಲಯ ಅಮ್ಮತ್ತಿಯಲ್ಲಿ ನಡೆದಿದೆ. ವೀರಾಜಪೇಟೆ ಸಿದ್ದಾಪುರ ಹೊರನಾಂಡಿ ಎಸ್ಟೇಟ್ ಗುಹ್ಯ ಗ್ರಾಮದ ನಿವಾಸಿ, ಮೆಕ್ಯಾನಿಕ್ ಆಗಿರುವ ಎನ್.ಆರ್.ರಂಜಿತ್ (೨೫) ಮತ್ತು ಹೈಸ್ಕೂಲ್ ಪೈಸಾರಿ, ದೇವಿಕಾಡು ಎಸ್ಟೇಟ್ ನಿವಾಸಿ ಕೂಲಿ ಕಾರ್ಮಿಕ ಎಸ್. ಶರಣು (೨೩) ಬಂಧಿತ ಆರೋಪಿಗಳಾಗಿದ್ದಾರೆ.
ತಾ. ೨೬ ರಂದು ಬೆಳಿಗ್ಗೆ ಅಮ್ಮöತ್ತಿ ಪಟ್ಟಣದಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ವಾಹನಗಳನ್ನು ತಪಾಸಣೆ ಮಾಡುತಿದ್ದ ವೇಳೆ ಸಿದ್ದಾಪುರದಿಂದ ವೀರಾಜಪೇಟೆ ನಗರಕ್ಕೆ ಅಪರಿಚಿತ ದ್ವಿಚಕ್ರ ವಾಹನವೊಂದು ಬಂದಿದೆ. ಪೊಲೀಸರು ಆ ವಾಹನದ ದಾಖಲೆಗಳನ್ನು
(ಮೊದಲ ಪುಟದಿಂದ) ಕೇಳಿದಾಗ ಗಾಬರಿಗೊಂಡ ದ್ವಿಚಕ್ರ ಸವಾರ ರಂಜಿತ್ ಅಸಂಬದ್ಧ ಉತ್ತರ ನೀಡಿದ್ದಾನೆ. ನಂತರ ರಂಜಿತ್ನನ್ನು ತನಿಖೆಗೆ ಒಳಪಡಿಸಿದ ವೇಳೆ ರಂಜಿತ್ ತಾನು ಹಾಗೂ ಶರಣು ಸೇರಿ ತಾ. ೯ ರಂದು ಸಿದ್ದಾಪುರ ಬಳಿಯ ನೆಲ್ಯಹುದಿಕೇರಿಯಲ್ಲಿ ನಿಲ್ಲಿಸಿದ್ದ ಪ್ಯಾಶನ್ ಪ್ರೋ (ಕೆಎ-೫೪ಇ-೬೯೭೦) ಕಳ್ಳತನ ಮಾಡಿದ್ದು, ಅದನ್ನು ವೀರಾಜಪೇಟೆ ನಗರಕ್ಕೆ ಮಾರಾಟ ಮಾಡಲು ತೆರಳುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ.
ಅಲ್ಲದೆ ಪೊನ್ನಂಪೇಟೆ ಭಾಗದಿಂದ ಅಪಾಚಿ ಬೈಕ್ (ಕೆಎ-೧೨ಕೆ-೪೦೫೮) ಅನ್ನು ಕೂಡ ಇಬ್ಬರೂ ಸೇರಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕಳ್ಳತನ ಮಾಡಿದ ವಾಹನಗಳ ಗುರುತು ಪತ್ತೆಯಾಗದಂತೆ ಬಿಡಿಭಾಗಗಳನ್ನು ಬಣ್ಣವನ್ನು ಅದುಲು ಬದಲು ಮಾಡಲಾಗಿತ್ತು. ಆರೋಪಿಗಳ ವಿರುದ್ಧ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ವಾಹನ ಕಳ್ಳತನ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಿ ವಾಹನಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್ ನಿರ್ದೇಶನದ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಸಿದ್ದಲಿಂಗ ಭೀ ಬಾಣಸೆ ನೇತೃತ್ವದಲ್ಲಿ ಸಿಬ್ಬಂದಿಗಳಾದ ತೀರ್ಥಕುಮಾರ್, ರಾಮಪ್ಪ, ಶ್ರೀಕಾಂತ್, ಪುರುಷೋತ್ತಮ್ ಮತ್ತು ಚಾಲಕ ಸಂದೀಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. -ಕೆ.ಕೆ.ಎಸ್.