(ವರದಿ: ಜಿ.ಆರ್. ಪ್ರಜ್ವಲ್)
ಮಡಿಕೇರಿ, ಜೂ. ೨೬: ತಾ. ೨೧ ರಿಂದ ರಾಜ್ಯದಾದ್ಯಂತ ಹಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದ್ದು, ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಿದ್ದರಿಂದ ಈ ಹಿಂದಿನ ಲಾಕ್‌ಡೌನ್ ನಿಯಮಗಳೇ ಜುಲೈ ೫ರ ತನಕ ಜಿಲ್ಲೆಯಲ್ಲಿ ಜಾರಿಯಲ್ಲಿರಲಿದೆ. ಲಾಕ್‌ಡೌನ್ ಮುಂದುವರೆದಿರುವ ಕಾರಣ ಜಿಲ್ಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಓಡಾಡುವುದನ್ನು ನಿಯಂತ್ರಿಸುವ ಸಲುವಾಗಿ ನಗರ, ಪಟ್ಟಣಗಳ ಪ್ರಮುಖ ಸ್ಥಳಗಳಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತಿದೆ. ಆದರೆ ಪ್ರವಾಸಿಗರು ಮಾತ್ರ ಆರಾಮವಾಗಿ ಜಿಲ್ಲೆಯೊಳಗೆ ನುಸುಳುತ್ತಿದ್ದಾರೆ. ಬೈಕ್, ಬಾಡಿಗೆ ವಾಹನಗಳ ಮೂಲಕ ಜಿಲ್ಲೆಯಾದ್ಯಂತ ಸುತ್ತಾಡುತ್ತಿದ್ದಾರೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಮಾಂದಲಪಟ್ಟಿಗೆ ಬೆಳಂಬೆಳಿಗ್ಗೆ ವ್ಯಾನ್, ಬೈಕ್‌ಗಳಲ್ಲಿ ಲಾಕ್‌ಡೌನ್ ಬಗ್ಗೆ ಯಾವ ಮಾಹಿತಿಯೂ ಇಲ್ಲದೆ ಆಗಮಿಸುತ್ತಿದ್ದಾರೆ.
ತಾ.೨೧ ರಿಂದ ಅನ್ವಯವಾಗುವಂತೆ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ ಜಿಲ್ಲೆಗೆ ಆಗಮಿಸುವವರನ್ನು ಪ್ರತೀ ಚೆಕ್‌ಪೋಸ್ಟ್ಗಳಲ್ಲಿ ವಿಚಾರಣೆಗೊಳಪಡಿಸಿ ಕೊಡಗು ಜಿಲ್ಲೆಯಲ್ಲಿ ಅವರುಗಳು ತಂಗುವ ಸ್ಥಳದ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಕಡ್ಡಾಯವಾಗಿ ೧೪ ದಿನಗಳ ಕಾಲ ಕ್ವಾರೆಂಟೈನ್‌ಗೆ ಒಳಪಡಿಸಬೇಕು ಎಂದಿದೆ. ಆದರೆ ಇದು ಯಾರಿಗೆ ಅನ್ವಯವಾಗಲಿದೆ ಎಂಬುದು ಪ್ರಶ್ನೆಯಾಗಿದೆ. ಲಾಡ್ಜ್, ರೆಸಾರ್ಟ್, ಹೋಮ್‌ಸ್ಟೇಗಳು ಮುಚ್ಚಲ್ಪಟ್ಟಿರುವುದರಿಂದ ಈ ನಿಯಮ ಕೇವಲ, ಹೊರಜಿಲ್ಲೆಯಲ್ಲಿದ್ದು ಕೊಡಗಿನಲ್ಲಿ ವಸತಿ ಹೊಂದಿರುವ ಜಿಲ್ಲೆಯ ನಿವಾಸಿಗಳಿಗೆ ಮಾತ್ರವೇ ಎಂಬ ಅಂಶ ಇಲ್ಲಿದೆ. ಗಡಿಗಳಲ್ಲಿ ಪ್ರವೇಶ ನಿಷಿದ್ಧ ಎಂದಿಲ್ಲದಿರುವುದರಿAದ ಪ್ರವಾಸಿಗರು ಯಾವುದೇ ಸಮಸ್ಯೆ ಇಲ್ಲದಂತೆ ಜಿಲ್ಲೆಯೊಳಗೆ ಪ್ರವೇಶಿಸುತ್ತಿದ್ದಾರೆ.ಮಾಂದಲಪಟ್ಟಿಗೆ ಬಂದ ಪ್ರವಾಸಿಗರಿಗೆ ದಂಡ
(ಮೊದಲ ಪುಟದಿಂದ) ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಾಂದಲಪಟ್ಟಿಗೆ ಕೆಲವು ದಿನಗಳಿಂದ ಪ್ರವಾಸಿಗರು ಆಗಮಿಸುತ್ತಿರುವ ಕುರಿತು ಸ್ಥಳೀಯರಾದ ಮಾಜಿ ತಾ.ಪಂ. ಸದಸ್ಯ ರಾಯ್ ತಮ್ಮಯ್ಯ ಆಕ್ಷೇಪಿಸಿದ್ದು, ಇಂದು ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಈ ಸಂದರ್ಭ ಬೆಂಗಳೂರಿನಿAದ ರಾತ್ರಿ ವೇಳೆ ಪ್ರಯಾಣಿಸಿ ಮಾಂದಲಪಟ್ಟಿ ಪ್ರವೇಶ ದ್ವಾರದ ಸಮೀಪ ನಿಲ್ಲಿಸಿದ್ದ ಓಮ್ನಿ ವಾಹನವನ್ನು ವಶಕ್ಕೆ ಪಡೆದ ಗ್ರಾಮಾಂತರ ಠಾಣೆ ಪೊಲೀಸರು ದಂಡ ವಿಧಿಸಿ ಕಳುಹಿಸಿದ್ದಾರೆ. ಮಾಂದಲಪಟ್ಟಿ ಪ್ರವೇಶ ದ್ವಾರ ಮುಚ್ಚಿದ್ದ ಕಾರಣ ಪ್ರವಾಸಿಗರು ತಮ್ಮ ವಾಹನವನ್ನು ಹೊರಗೆಯೇ ನಿಲ್ಲಿಸಿದ್ದಾಗಿ ತಿಳಿದುಬಂದಿದೆ. ಇದಲ್ಲದೆ ಸಮೀಪದ ನಂದಿ ಮೊಟ್ಟೆಯಲ್ಲಿ ಇನ್ನೆರಡು ಪ್ರವಾಸಿ ವಾಹನಗಳನ್ನು ತಡೆದು ದಂಡ ವಿಧಿಸಲಾಗಿದೆ. ಕೋಲಾರ ಜಿಲ್ಲೆಯಿಂದ ಇನೊವಾ ಹಾಗೂ ಇಯಾನ್ ವಾಹನಗಳಲ್ಲಿ ಆಗಮಿಸಿದ್ದ ಪ್ರವಾಸಿಗರಿಗೆ ದಂಡ ವಿಧಿಸಲಾಗಿದೆ. ನಂದಿ ಮೊಟ್ಟೆಯ ಬಳಿ ಇಂದಿನಿAದ ಗ್ರಾಮಾಂತರ ಠಾಣೆಯ ಪೊಲೀಸ್ ಹಾಜರಿದ್ದು ಪ್ರವಾಸಿಗರು ಬಾರದಂತೆ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿದುಬಂದಿದೆ.
ಕೆಲವು ದಿನಗಳಿಂದ ಮಾಂದಲಪಟ್ಟಿಗೆ ಬಹಳಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಲಾಕ್‌ಡೌನ್ ಇದ್ದರೂ ಇದರ ಬಗ್ಗೆ ಅರಿವಿಲ್ಲದೆ ಬರುತ್ತಿರುವ ಪ್ರವಾಸಿಗರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಕೆಲ ಪ್ರವಾಸಿಗರು ಪಾನಮತ್ತವಾಗಿ ಗಲಾಟೆ ಮಾಡಿ, ಅಲ್ಲಲ್ಲಿ ಬಾಟಲಿಗಳನ್ನು ಬಿಸಾಡಿ ಅಸ್ವಚ್ಛತೆಯ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಸ್ಥಳೀಯರಾದ ಚಂಡೀರ ರಾಜ ತಿಮ್ಮಯ್ಯ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.