ಮಡಿಕೇರಿ, ಜೂ. ೨೬: ಕ್ರೀಡೆಯಲ್ಲಿನ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಕ್ರೀಡಾ ತರಬೇತಿಗಾಗಿ ನೀಡಲಾಗುವ ದ್ರೋಣಾಚಾರ್ಯ ಪ್ರಶಸ್ತಿಗೆ ಹಾಕಿ ಇಂಡಿಯಾ ಕೊಡಗಿನವರಾದ ಬೊಳ್ಳೆಪಂಡ ಜೆ. ಕಾರ್ಯಪ್ಪ ಅವರ ಹೆಸರನ್ನು ಶಿಫಾರಸು ಮಾಡಿದೆ.

ಕಳೆದ ಹಲವು ವರ್ಷಗಳಿಂದ ಭಾರತದ ಹಾಕಿ ತಂಡದ ವಿವಿಧ ವಿಭಾಗಗಳಲ್ಲಿ ತರಬೇತುದಾರರಾಗಿರುವ ಬಿ.ಜೆ. ಕಾರ್ಯಪ್ಪ ಅವರು ಪ್ರಸ್ತುತ ಭಾರತ ಜೂನಿಯರ್ ತಂಡದ ಕೋಚ್ ಆಗಿದ್ದಾರೆ. ಕಳೆದ ಸಾಲಿನಲ್ಲಿಯೂ ದ್ರೋಣಾಚಾರ್ಯ ಪ್ರಶಸ್ತಿಗೆ ಇವರ ಹೆಸರು ಶಿಫಾರಸ್ಸುಗೊಂಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕಾರ್ಯಪ್ಪ ಅವರು ಅವಕಾಶ ವಂಚಿತರಾಗಿದ್ದರು.

ಇದೀಗ ಸತತ ಎರಡನೆಯ ವರ್ಷವೂ ಇವರ ಹೆಸರು ಹಾಕಿ ಇಂಡಿಯಾದ ಮೂಲಕ ಶಿಫಾರಸ್ಸುಗೊಂಡಿದ್ದು, ಈ ಬಾರಿ ಈ ಪ್ರತಿಷ್ಠಿತ ಪ್ರಶಸ್ತಿ ಇವರಿಗೆ ಲಭ್ಯವಾಗುವ ಆಶಾಭಾವನೆ ಇದೆ. ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಅವರ ಹುಟ್ಟು ಹಬ್ಬದ ದಿನವಾದ ಆಗಸ್ಟ್ ೨೯ ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇದಕ್ಕೆ ನೇಮಕಗೊಳ್ಳುವ ಪ್ರಮುಖರ ಸಮಿತಿಯ ಮೂಲಕ ಈ ಬಗ್ಗೆ ಅಂತಿಮ ನಿರ್ಧಾರವಾಗಬೇಕಿದೆ.