ಸೋಮವಾರಪೇಟೆ, ಜೂ. ೨೫: ಪ.ಪಂ. ವ್ಯಾಪ್ತಿಯ ಕರ್ಕಳ್ಳಿಯಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್ ಅಳವಡಿಕೆಗೆ ಪ.ಪಂ. ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಹಾಗೂ ಪ್ರಾಯೋಜಕರಾದ ರೋಟರಿ ಸಂಸ್ಥೆಯ ಪ್ರಮುಖರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಪಟ್ಟಣದ ಸುತ್ತಮುತ್ತಲ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಕರ್ಕಳ್ಳಿ ಯಲ್ಲಿ ಹೊಸದಾಗಿ ಸಾರ್ವಜನಿಕ ಸ್ಮಶಾನಕ್ಕೆ ಜಾಗ ಗುರುತಿಸಿದ್ದು, ಸ್ಥಳೀಯ ರೋಟರಿ ಸಂಸ್ಥೆ ಸುಮಾರು ರೂ. ೨ ಲಕ್ಷ ವೆಚ್ಚದಲ್ಲಿ ಸಿಲಿಕಾನ್ ಚೇಂಬರ್ ನೀಡುತ್ತಿದೆ.

ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಜಾಗದ ಕೊರತೆ ಇರುವ ಬಗ್ಗೆ ಗಮನ ಹರಿಸಿದ ಕಂದಾಯ ಇಲಾಖೆ, ತಾಲೂಕು ತಹಶೀಲ್ದಾರ್ ನೇತೃತ್ವದಲ್ಲಿ ಕರ್ಕಳ್ಳಿಯಲ್ಲಿ ೧.೭೫ ಎಕರೆ ಜಾಗ ಗುರುತಿಸಿ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಿದೆ. ಸ್ಥಳೀಯವಾಗಿ ಸೌದೆ ಹಾಗೂ ಪ್ರಾಕೃತಿಕ ಸಮಸ್ಯೆಗಳನ್ನು ಅರಿತ ರೋಟರಿ ಸಂಸ್ಥೆ ಇದೀಗ ಸ್ಮಶಾನದಲ್ಲಿ ಸಿಲಿಕಾನ್ ಚೇಂಬರ್ ಅಳವಡಿಸಲು ಮುಂದೆ ಬಂದಿದೆ.

ಸೋಮವಾರಪೇಟೆ ಸುತ್ತಮುತ್ತಲಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸ್ಮಶಾನವಿಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ಇದನ್ನು ಮನಗಂಡ ಕಂದಾಯ ಇಲಾಖೆ ಜಾಗ ಒದಗಿಸಿರುವುದು ಸ್ವಾಗತಾರ್ಹ. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸೇವಾ ಮನೋಭಾವನೆ ಯಿಂದ ರೋಟರಿ ಸಂಸ್ಥೆ ಸೌಲಭ್ಯ ಒದಗಿಸುತ್ತಿದೆ ಎಂದು ರೋಟರಿ ಸಂಸ್ಥೆಯ ಸಹಾಯಕ ರಾಜ್ಯಪಾಲ ರವಿರಾಜ್ ತಿಳಿಸಿದರು.

ಈ ಸಂದರ್ಭ ರೋಟರಿ ಸಂಸ್ಥೆ ಅಧ್ಯಕ್ಷ ಲಿಖಿತ್ ದಾಮೋದರ್, ಪಟ್ಟಣ ಪಂಚಾಯಿತಿ ಪ್ರಭಾರ ಅಧ್ಯಕ್ಷ ಬಿ.ಸಂಜೀವ, ಸದಸ್ಯರುಗಳಾದ ಶೀಲಾ ಡಿಸೋಜ, ಪಿ.ಕೆ. ಚಂದ್ರು, ಮಹೇಶ್, ಎಸ್. ಮಹೇಶ್, ಅಭಿಯಂತರ ಹೇಮಂತ್‌ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.