ಮಡಿಕೇರಿ, ಜೂ.೨೫ : ಜನಸಾಮಾನ್ಯರಿಗೆ ಹೊರೆಯಾಗಿರುವ ತೈಲೋತ್ಪನ್ನಗಳ ಬೆಲೆ ಹಾಗೂ ವಿದ್ಯುತ್ ಶುಲ್ಕವನ್ನು ತಕ್ಷಣ ಇಳಿಕೆ ಮಾಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲೂ ಜನರ ಸಂಕಷ್ಟವನ್ನು ಅರಿಯದೆ ಬೆಲೆ ಏರಿಕೆ ಮೂಲಕ ಕಿರುಕುಳ ನೀಡುತ್ತಿದೆ ಎಂದು ಪ್ರಮುಖರು ಟೀಕಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ ತೈಲೋತ್ಪನ್ನಗಳ ಬೆಲೆ, ವಿದ್ಯುತ್ ಶುಲ್ಕ ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಿದರೆ ಮಾತ್ರ ಜನಸಾಮಾನ್ಯರ ಬದುಕು ಸುಧಾರಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಜನರು ಕೋವಿಡ್ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಲಾಕ್‌ಡೌನ್‌ನಿಂದ ಬಡವರು, ಕೂಲಿ ಕಾರ್ಮಿಕರು, ರೈತರು, ಆಟೋ, ಟ್ಯಾಕ್ಸಿ ಚಾಲಕರು ಸೇರಿದಂತೆ ಎಲ್ಲಾ ವರ್ಗದ ಜನ ಆರ್ಥಿಕ ಹಿನ್ನಡೆಯಿಂದ ತತ್ತರಿಸಿ ಹೋಗಿದ್ದಾರೆ. ಇದರ ನಡುವೆಯೇ ಕರುಣೆ ಇಲ್ಲದ ಸರ್ಕಾರ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ಎರಡನೇ ಅಲೆಯಲ್ಲಿ ಅನೇಕರು ಮೃತಪಟ್ಟು ಕುಟುಂಬಗಳು ಅನಾಥವಾಗಿವೆ. ಈ ರೀತಿಯ ಕುಟುಂಬಗಳನ್ನು ಗುರುತಿಸಿ ಸರ್ಕಾರ ಸೂಕ್ತ ಪರಿಹಾರವನ್ನು ನೀಡಬೇಕೆಂದು ಇಂಧನ ರಸಗೊಬ್ಬರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ವೀರಾಜಪೇಟೆಯ ಗಡಿಯಾರ ಕಂಬದ ಬಳಿ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಹಾಗೂ ರಾಜ್ಯದ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯದ ಬೆಲೆ ಏರಿಕೆ ನೀತಿಯನ್ನು ತೀವ್ರವಾಗಿ ಖಂಡಿಸಿದರು. ಬಳಿಕ ತಾಲೂಕು ಕಚೇರಿಗೆ ಆಗಮಿಸಿ ಜೆಡಿಎಸ್ ಮುಖಂಡರು ತಮ್ಮ ಮನವಿಯನ್ನು ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಿರಸ್ತೇದಾರ್ ಪೊನ್ನುರವರು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ತಿಳಿಸಿದರು.

ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಮತೀನ್ ಎಸ್.ಎಚ್., ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್ , ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಜಾಶಿರ್ ಮೂರ್ನಾಡು, ಮಜೀದ್, ಅಬ್ದುಲ್ ಫಾತಹ್, ಯೋಗೇಶ್ ನಾಯ್ಡು, ಸೈಫ್ ಚಾಮಿಯಾಲ, ಅಮ್ಮತ್ತಿ ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಜಯಮ್ಮ, ಹಾಗೂ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.