ದೇಶದಲ್ಲಿ ೪೮ ಡೆಲ್ಟಾ ಪ್ಲಸ್ ಪ್ರಕರಣ

ನವದೆಹಲಿ, ಜೂ. ೨೫: ದೇಶದಲ್ಲಿ ಇಲ್ಲಿಯವರೆಗೆ ೪೫,೦೦೦ ಮಾದರಿಗಳ ಪೈಕಿ ೪೮ ‘ಡೆಲ್ಟಾ ಪ್ಲಸ್' ಕೋವಿಡ್ ರೂಪಾಂತರ ಪ್ರಕರಣಗಳು ಪತ್ತೆಯಾಗಿದ್ದು, ಮಹಾರಾಷ್ಟçದಲ್ಲಿ ಅತಿ ಹೆಚ್ಚು ಅಂದರೆ ೨೦ ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ತಿಳಿಸಿದೆ. ತಮಿಳುನಾಡಿನಲ್ಲಿ ಒಂಬತ್ತು, ಮಧ್ಯಪ್ರದೇಶದಲ್ಲಿ ಏಳು, ಕೇರಳದಲ್ಲಿ ಮೂರು, ಪಂಜಾಬ್ ಮತ್ತು ಗುಜರಾತ್‌ನಲ್ಲಿ ತಲಾ ಎರಡು ಪ್ರಕರಣಗಳು ಪತ್ತೆಯಾಗಿವೆ. ಇನ್ನು ಆಂಧ್ರಪ್ರದೇಶ, ಒಡಿಶಾ, ರಾಜಸ್ಥಾನ, ಜಮ್ಮು ಮತ್ತು ಕರ್ನಾಟಕದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ೯೦ ಪ್ರತಿಶತ ಕೋವಿಡ್ ೧೯ ಪ್ರಕರಣಗಳು ಬಿ .೧.೬೧೭.೨ (ಡೆಲ್ಟಾ) ರೂಪಾಂತರಿ. ಮಹಾರಾಷ್ಟç, ದೆಹಲಿ, ಪಂಜಾಬ್, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನ ೧೭೪ ಜಿಲ್ಲೆಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಡೆಲ್ಟಾ ಪ್ಲಸ್ ಬಗ್ಗೆ ಆತಂಕಪಡಬೇಕಿಲ್ಲ ; ಸಚಿವ ಸುಧಾಕರ್

ಬೆಂಗಳೂರು, ಜೂ. ೨೫: ಕೋವಿಡ್ ಡೆಲ್ಟಾ ಪ್ಲಸ್ ವೈರಾಣುವಿನ ಬಗ್ಗೆ ಹೆಚ್ಚೇನೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಡೆಲ್ಟಾ ಪ್ಲಸ್ ವೈರಾಣುವಿನ ಒಂದು ಪ್ರಕರಣ ಬೆಂಗಳೂರಿನಲ್ಲಿ ಮತ್ತು ಇನ್ನೊಂದು ಪ್ರಕರಣ ಮೈಸೂರಿನಲ್ಲಿ ಕಂಡುಬAದಿದೆ. ಮೈಸೂರಿನ ರೋಗಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು. ಈ ಹೊಸ ವೈರಾಣುವಿನಿಂದ ಸೋಂಕಿತರಿಗೆ ಹೆಚ್ಚು ಸಮಸ್ಯೆಯೇನೂ ಆಗಿಲ್ಲ. ಇವರ ಸಂಪರ್ಕಿತರಿಗೂ ಪರೀಕ್ಷೆ ನಡೆಸಿದಾಗ ನೆಗೆಟಿವ್ ವರದಿ ಬಂದಿದೆ. ಆದ್ದರಿಂದ ಈ ವೈರಾಣು ಬಗ್ಗೆ ವಿಶೇಷವಾಗಿ ಆತಂಕಪಡುವ ಅಗತ್ಯವಿಲ್ಲ. ಪ್ರತಿ ದಿನ ಜೀನೋಮ್ ಸೀಕ್ವೆನ್ಸಿಂಗ್ ಆಗುತ್ತಿರುತ್ತದೆ. ಈ ವೇಳೆ ವೈರಾಣು ಪತ್ತೆಯಾಗುತ್ತದೆ ಎಂದರು.

ಶಾಲೆ ಆರಂಭ ಕುರಿತು ಸೋಮವಾರ ತೀರ್ಮಾನ

ಬೆಂಗಳೂರು, ಜೂ. ೨೫: ರಾಜ್ಯದಲ್ಲಿ ಶಾಲೆಗಳ ಆರಂಭದ ಬಗ್ಗೆ ಸೋಮವಾರ ತಜ್ಞರ ಸಭೆ ಕರೆಯಲಾಗಿದೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭ ಕುರಿತಂತೆ ಸೋಮವಾರದಂದು ಅಧಿಕಾರಿಗಳು, ತಜ್ಞರ ಸಭೆಯನ್ನು ಕರೆದಿದ್ದು ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ, ನಿರ್ಧಾರ ಪ್ರಕಟಿಸಲಾಗುತ್ತದೆ ಎಂದರು. ಸದ್ಯಕ್ಕೆ ವಿದ್ಯಾಗಮದ ಮೂಲಕ ಶಾಲಾ ಶೈಕ್ಷಣಿಕ ಚಟುವಟಿಕೆ ನಡೆಯುತ್ತಿದೆ, ಕಲಿಕಾ ದಿನಚರಿ ಬಗ್ಗೆ ಯೋಜನೆ ಮಾಡಿದ್ದೇವೆ. ಶಾಲಾ ಆರಂಭದ ಬಗ್ಗೆ ತಜ್ಞರು ಅಭಿಪ್ರಾಯ ನೀಡಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಖಾಸಗಿ ಶಾಲಾ ಶುಲ್ಕ ಕುರಿತಂತೆ ಪ್ರತಿಕ್ರಿಯಿಸಿದ ಸುರೇಶ್ ಕುಮಾರ್, ಈ ಸಂಬAಧ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ತೀರ್ಪಿನ ನಂತರ ಚರ್ಚಿಸಿ ಅಂತಿಮ ಕ್ರಮ ಕೈಗೊಳ್ಳವುದಾಗಿ ಹೇಳಿದರು.

ಕಪ್ಪು ಶಿಲೀಂಧ್ರದ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿಡುವಂತೆ ಸೂಚನೆ

ಬೆಂಗಳೂರು, ಜೂ. ೨೫: ಕಪ್ಪು ಶಿಲೀಂಧ್ರದ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿಡುವಂತೆ ಹಾಗೂ ಲಭ್ಯವಿರುವ ಹಾಸಿಗೆಗಳ ವಿವರವನ್ನು ಪ್ರದರ್ಶಿಸುವಂತೆ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಹೊರಡಿಸಿರುವ ಸುತ್ತೋಲೆಯಲ್ಲಿ, ಸರ್ಕಾರಿ ವೈದ್ಯಕೀಯ ಕಾಲೇಜು, ಜಿಲ್ಲಾ ಆಸ್ಪತ್ರೆಗಳು ಹಾಗೂ ತಾಲೂಕು ಆಸ್ಪತ್ರೆಗಳಿಗೆ ಕಪ್ಪು ಶಿಲೀಂಧ್ರ ಸೋಂಕಿತರನ್ನು ದಾಖಲಿಸಿಕೊಂಡು, ಚಿಕಿತ್ಸೆ ಒದಗಿಸಲು ಈಗಾಗಲೇ ಸೂಚಿಸಲಾಗಿದೆ ಎಂದಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ವ್ಯವಸ್ಥೆಯಡಿ ಚಿಕಿತ್ಸೆಗೆ ಅಗತ್ಯ ಹಾಸಿಗೆಗಳನ್ನು ಕಾಯ್ದಿರಿಸಿ, ಸೋಂಕಿತರಿಗೆ ಚಿಕಿತ್ಸೆ ನೀಡಬೇಕು. ಜೊತೆಗೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಲಭ್ಯವಿರುವ ಹಾಸಿಗೆಗಳ ವಿವರ, ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರೋಗಿಗಳ ಸಂಖ್ಯೆ ಒಳಗೊಂಡ ಮಾಹಿತಿಯನ್ನು ಗೋಚರಿಸುವಂತೆ ಪ್ರದರ್ಶಿಸಬೇಕು ಎಂದು ಸೂಚಿಸಿದ್ದಾರೆ.

ಮಾಜಿ ಕಾರ್ಪೊರೇಟರ್ ಹತ್ಯೆ - ಇಬ್ಬರ ಬಂಧನ

ಬೆAಗಳೂರು, ಜೂ. ೨೫: ಬಿಜೆಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆಯ ಪ್ರಮುಖ ಆರೋಪಿಗಳಾದ ಪೀಟರ್ ಮತ್ತು ಸೂರ್ಯನನ್ನು ಪೊಲೀಸರು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸುಮನಹಳ್ಳಿಯ ಶನಿ ಮಹಾತ್ಮ ದೇವಸ್ಥಾನದ ಬಳಿ ಆರೋಪಿಗಳು ಪೊಲೀಸರಿಗೆ ಸಿಕ್ಕಿದ್ದಾರೆ. ನಿನ್ನೆ ಬೆಳಿಗ್ಗೆ ಹತ್ಯೆ ನಡೆದಿದ್ದು ಕೇವಲ ೨೪ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವ ಮೂಲಕ ಪೊಲೀಸರು ತಮ್ಮ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಗೆ ಆರಂಭದಲ್ಲಿ ಪೊಲೀಸರು ಶರಣಾಗುವಂತೆ ಹೇಳಿದರೂ ಕೇಳಲಿಲ್ಲ. ಪೊಲೀಸರ ಮೇಲೆ ದಾಳಿಗೆ ಮುಂದಾದರು, ಆಗ ಅನಿವಾರ್ಯವಾಗಿ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದರು. ಇನ್ಸ್ಪೆಕ್ಟರ್‌ಗಳಾದ ಶಿವಾನಂದ್ ಮತ್ತು ಚಿದಾನಂದ್ ರವರು ಫೈರಿಂಗ್ ಮಾಡಿ ಬಂಧಿಸಿದ್ದಾರೆ. ನಿನ್ನೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಪಿಗಳನ್ನು ೨೪ ಗಂಟೆಗಳಲ್ಲಿಯೇ ಬಂಧಿಸಲಾಗುವುದು ಎಂದು ಹೇಳಿದ್ದರು. ಗೃಹ ಸಚಿವರು ಕೂಡ ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಇದೀಗ ಪೊಲೀಸರು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.

ಡಿಜಿಟಲ್ ನ್ಯಾಯಾಧೀಕರಣ : ಮಾಹಿತಿ ನೀಡುವಂತೆ ಸೂಚನೆ

ಬೆಂಗಳೂರು, ಜೂ. ೨೫: ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗದ ಹಿನ್ನೆಲೆ ರಾಜ್ಯದ ಅರೆ ನ್ಯಾಯಿಕ ಪ್ರಾಧಿಕಾರಗಳು ಹಾಗೂ ಮೇಲ್ಮನವಿ ನ್ಯಾಯಾಧೀಕರಣಗಳಿಗೂ ಕಲಾಪ ನಡೆಸಲು ವೀಡಿಯೋ ಕಾನ್ಫರೆನ್ಸ್ ಸೌಲಭ್ಯ ಒದಗಿಸುವ ಕುರಿತಂತೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಸರ್ಕಾರಿ ಭೂಮಿ ಒತ್ತುವರಿ ಆರೋಪ ಪ್ರಕರಣವೊಂದರ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಕೋವಿಡ್ ಕಾರಣಕ್ಕಾಗಿ ತಹಶೀಲ್ದಾರ್ (ಅರೆ ನ್ಯಾಯಿಕ ಅಧಿಕಾರ ಹೊಂದಿರುವ) ಒತ್ತುವರಿ ಕುರಿತ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು. ಅಲ್ಲದೇ, ಕೊರೊನಾ ಸೋಂಕು ಉಲ್ಭಣಿಸಿರುವ ಹಿನ್ನೆಲೆ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ನಡೆಸುವ ಅರೆ ನ್ಯಾಯಿಕ ಪ್ರಾಧೀಕಾರಗಳ ವಿಚಾರಣಾ ಕಲಾಪಗಳು, ಮೇಲ್ಮನವಿ ನ್ಯಾಯಾಧೀಕರಣಗಳ ವಿಚಾರಣೆ, ಲೋಕಾಯುಕ್ತ ನ್ಯಾಯಾಲಯದ ಕಲಾಪಗಳು ನಡೆಯುತ್ತಿಲ್ಲ ಎಂದು ವಿವರಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ಇದೀಗ ೩ನೇ ಅಲೆ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಅರೆ ನ್ಯಾಯಿಕ ಪ್ರಾಧಿಕಾರಿಗಳು ಮತ್ತು ಮೇಲ್ಮನವಿ ನ್ಯಾಯಾಧಿಕರಣಗಳಿಗೆ ವೀಡಿಯೋ ಕಾನ್ಫರೆನ್ಸ್ ಸೌಲಭ್ಯ ಅಳವಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ವಿಪತ್ತು ಎದುರಾದ ಸಂದರ್ಭಗಳಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ರಾಜ್ಯದ ಎಲ್ಲ ಸಾರ್ವಜನಿಕ ಪ್ರಾಧೀಕಾರಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅದರಂತೆ, ರಾಜ್ಯದ ಎಲ್ಲಾ ಅರೆ ನ್ಯಾಯಿಕ ಪ್ರಾಧೀಕಾರಿಗಳು ಮತ್ತು ಮೇಲ್ಮನವಿ ನ್ಯಾಯಾಧೀಕರಣಗಳು ತಮ್ಮ ಮುಂದಿರುವ ಪ್ರಕರಣಗಳನ್ನು ತಡೆಯಿಲ್ಲದೇ ವಿಚಾರಣೆ ನಡೆಸಲು ವೀಡಿಯೋ ಕಾನ್ಫರೆನ್ಸ್ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ತುರ್ತು ಅಗತ್ಯವಿರುವ ಕಡೆ ಆದ್ಯತೆ ಮೇರೆಗೆ ಸೌಲಭ್ಯ ಕಲ್ಪಿಸಬೇಕು. ಪ್ರಸ್ತುತ ಎಷ್ಟು ಕಡೆ ಸೌಲಭ್ಯವಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜುಲೈ ೧೩ಕ್ಕೆ ಮುಂದೂಡಿತು.

ರವಿಶAಕರ್ ಪ್ರಸಾದ್ ಟ್ವಿಟರ್ ಖಾತೆ ತಾತ್ಕಾಲಿಕ ಸ್ಥಗಿತ

ನವದೆಹಲಿ, ಜೂ. ೨೫: ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರ ವೈಯಕ್ತಿಕ ಖಾತೆಯನ್ನು ಟ್ವಿಟರ್ ಸುಮಾರು ೧ ಗಂಟೆಗಳ ಕಾಲ ಸ್ಥಗಿತಗೊಳಿಸಿತ್ತು. ಟಿವಿ ಚರ್ಚೆಗಳ ತುಣುಕುಗಳನ್ನು ಪೋಸ್ಟ್ ಮಾಡುವ ಮೂಲಕ ಟ್ವಿಟರ್ ಕಾಪಿರೈಟ್ ಕಾನೂನು ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಟ್ವೀಟರ್ ನನ್ನ ಖಾತೆಯನ್ನು ಒಂದು ಗಂಟೆ ಕಾಲ ನಿರ್ಬಂಧಿಸಿ, ನಂತರ ಅನ್‌ಲಾಕ್ ಮಾಡಿತ್ತು ಎಂದು ರವಿಶಂಕರ್ ಪ್ರಸಾದ್ ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ.