ಗೋಣಿಕೊಪ್ಪ ವರದಿ, ಜೂ. ೨೫: ಕೃಷಿ ವಿಜ್ಞಾನ ಕೇಂದ್ರದ ನಾಲ್ವರು ವಿಜ್ಞಾನಿಗಳು ರೈತ ರೊಂದಿಗೆ ಏಕಕಾಲದಲ್ಲಿ ಆನ್ಲೈನ್ ಮೂಲಕ ಪ್ರಶ್ನೋತ್ತರದಲ್ಲಿ ಭಾಗವಹಿಸಿ ಕೃಷಿ ಪೂರಕ ಸಲಹೆ ನೀಡಿದರು. ಹೊರ ಜಿಲ್ಲೆ ಸೇರಿದಂತೆ ಸುಮಾರು ೩೫ ರೈತರು ಭಾಗವಹಿಸಿ ಸಲಹೆ ಪಡೆದುಕೊಂಡರು.
ಮಳೆಗಾಲ ಇರುವುದರಿಂದ ಮುಂಜಾಗೃತೆಯಾಗಿ ಜಾನುವಾರು ಗಳಿಗೆ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಿಕೊಳ್ಳುವಂತೆ ಪಶು ವೈದ್ಯ ಡಾ. ಸುರೇಶ್ ಸಲಹೆ ನೀಡಿದರು.
ತೋಟಗಾರಿಕೆ ಬಗ್ಗೆ ವಿಜ್ಞಾನಿ ಡಾ. ಪ್ರಭಾಕರ್ ಸಲಹೆ ನೀಡಿದರು. ಅಡಿಕೆ ತೋಟದಲ್ಲಿ ಹೆಚ್ಚು ಬಿಸಿಲು ತಾಗುವುದರಿಂದ ಕರಿಮೆಣಸು ಕೃಷಿ ಹೆಚ್ಚು ಸೂಕ್ತವಲ್ಲ, ಎರಡನೇ ಹಂತದ ನೆರಳು ಗಿಡ ಬೆಳೆಸಿಕೊಂಡು ಕರಿಮೆಣಸು ಬಳ್ಳಿ ಬೆಳೆಯಬಹುದು. ಗ್ಲೆರಿಸಿಡಿಯ ಮರ ನೆರಳಿನ ಗಿಡವಾಗಿ ಬೆಳೆಸುವುದು ಸೂಕ್ತ ಎಂದು ಅವರು ತಿಳಿಸಿದರು.
ಜಾಯಿಕಾಯಿ ಕೃಷಿ ಕರಾವಳಿಗೆ ಸೂಕ್ತವಾಗಿದ್ದು, ಮನೆ ಬಳಕೆಗೆ ಮಾತ್ರ ಬೆಳೆಸಬಹುದು. ಬಳ್ಳಿಗಳ ಬುಡಕ್ಕೆ ಹಾಕಬೇಕಾದ ರೋಗ ನಿರೋಧಕ ದ್ರಾವಣ, ಪೋಷಕಾಂಶದ ಬಳಕೆ ಬಗ್ಗೆ ತಿಳಿಸಿಕೊಟ್ಟರು.
ಡಾ. ವೀರೇಂದ್ರಕುಮಾರ್ ಹಾಗೂ ಡಾ. ಕೆ.ಎ. ದೇವಯ್ಯ ಬೋರ್ಡೋದ್ರಾವಣ ಸಿಂಪಡಣೆ ಬಗ್ಗೆ ಸಲಹೆ ನೀಡಿದರು. ಶಿಲೀಂದ್ರ ನಿಯಂತ್ರಣಕ್ಕೆ ಬೋರ್ಡೋ ಸಿಂಪಡಣೆಗೆ ಕೂಡ ಸೂಕ್ತವಾಗಿದೆ. ವೈಜ್ಞಾನಿಕವಾಗಿ ಕ್ರಮಕೈಗೊಳ್ಳಬೇಕು.
ಮುಂಗಾರು ಸಂದರ್ಭ ಕೂಡ ಇದರ ಬಳಕೆ ಪ್ರಯೋಜನಕ್ಕೆ ಬರಲಿದೆ ಎಂದು ತಿಳಿಸಿದರು. ಭತ್ತ ಕೃಷಿಗೆ ಬೇಕಾದ ಗೊಬ್ಬರ ನಿರ್ವಹಣೆ, ತಳಿಗಳ ಆಯ್ಕೆ ಬಗ್ಗೆ ಮಾಹಿತಿ ನೀಡಿದರು.