ವೀರಾಜಪೇಟೆ, ಜೂ. ೨೫: ವೀರಾಜಪೇಟೆ ನಗರದಿಂದ ೨೨ ಕಿ.ಮೀ. ದೂರದ ಕೇರಳದ ಕಣ್ಣನೂರು ರಸ್ತೆಯಲ್ಲಿರುವ ಕರ್ನಾಟಕ-ಕೇರಳ ಗಡಿ ಭಾಗದ ಕೂಟುಪೊಳೆಯ ಹೊಸ ಸೇತುವೆಯ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈ ವರ್ಷದ ಮಳೆಗಾಲದ ಅಂತ್ಯಕ್ಕೆ ಅಥವಾ ಚಳಿಗಾಲದ ಪ್ರಾರಂಭದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಸುಮಾರು ಒಂದೂವರೆ ಶತಮಾನದ ಇತಿಹಾಸ ಹೊಂದಿರುವ ಹಳೆಯ ಸೇತುವೆ ಕೆಲವೆ ತಿಂಗಳುಗಳಲ್ಲಿ ನೇಪಥ್ಯ ಸೇರಲಿದೆ. ಹಳೆಯ ಸೇತುವೆಯು ತನ್ನ ಶಕ್ತಿಯನ್ನು ಕಳೆದುಕೊಂಡು ವರ್ಷಗಳೆ ಕಳೆದಿದೆ.

ಸೇತುವೆಯು ತೀರ ಇಕ್ಕಟ್ಟು ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಭಾರೀ ತೂಕದ ಸರಕು ವಾಹನಗಳ ಓಡಾಟ ಹೆಚ್ಚಾದಂತೆ ಸೇತುವೆ ಬಿರುಕು ಬಿಡಲು ಪ್ರಾರಂಭಿಸಿತು. ಈ ಹಿನ್ನೆಲೆಯಲ್ಲಿ ೨೦೦೯ರಲ್ಲಿ ಕೇರಳ ರಾಜ್ಯದ ಲೋಕೋಪಯೋಗಿ ಇಲಾಖೆಯು ಹೊಸ ಸೇತುವೆ ನಿರ್ಮಾಣದ ಚರ್ಚೆ ಮುಂದಿರಿಸಿತ್ತು.

೨೦೧೩ರ ವೇಳೆಗೆ ಉಭಯ ರಾಜ್ಯಗಳು ಚರ್ಚಿಸಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಟೆಂಡರ್ ಕರೆಯಲಾಯಿತು. ನಿರ್ಮಾಣ ಕಾರ್ಯವೂ ಕೂಡಲೇ ಪ್ರಾರಂಭ ಗೊಂಡಿತು. ಆದರೆ, ಸೇತುವೆಯ ಕಂಬಗಳ ನಿರ್ಮಾಣ ಕರ್ನಾಟಕದ ಅರಣ್ಯ ಪ್ರದೇಶವನ್ನು ಒಳಗೊಂಡಿದೆ ಮತ್ತು ಕೇರಳ ಲೋಕೋಪಯೋಗಿ ಇಲಾಖೆಯು ತಮ್ಮ ನಿರಪೇಕ್ಷಣಾ ಪತ್ರ ಕೋರಿಲ್ಲವೆಂದು ಆಕ್ಷೇಪವೆತ್ತಿ ಕರ್ನಾಟಕ ಅರಣ್ಯ ಇಲಾಖೆ ನಿರ್ಮಾಣ ಕಾರ್ಯಕ್ಕೆ ತಡೆಯೊಡ್ಡಿತ್ತು. ಆ ಮಧ್ಯೆ ಒಂದಕ್ಕಿAತ ಹೆಚ್ಚು ಬಾರಿ ಜಾಗದ ಸರ್ವೆ ಕಾರ್ಯವು ನಡೆಸಲಾಗಿತ್ತು. ೨೦೧೯ರಲ್ಲಿ ಕಾಮಗಾರಿ ಪುನರಾರಂಭಗೊAಡು ಇದೀಗ ಕೊನೆಯ ಹಂತಕ್ಕೆ ತಲುಪಿದೆ.

ಕೇರಳ ರಾಜ್ಯದ ಲೋಕೋಪಯೋಗಿ ಇಲಾಖೆಯ ಸುಪರ್ದಿಯಲ್ಲಿ ತಲಚೇರಿ-ವಳವುಪಾರ ಹೆದ್ದಾರಿ ನವೀಕರಣ ಯೋಜನೆ ಯಡಿಯಲ್ಲಿ ಈ ಅಂತರ ರಾಜ್ಯ ಸೇತುವೆ ಕಾಮಗಾರಿ ಒಳಪಟ್ಟಿದೆ. ಹಿಂದಿನ ಒಪ್ಪಂದದAತೆ ೨೦೧೮ರ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳ್ಳ ಬೇಕಾಗಿದ್ದ ಕಾಮಗಾರಿ ವಿವಿಧ ಕಾರಣ ಗಳಿಂದಾಗಿ ನಾಲ್ಕು ಬಾರಿ ಮುಂದೂಡಲಾಗಿತ್ತು. ಮಾತ್ರವಲ್ಲ ಕಳೆದ ಎರಡು ವರ್ಷಗಳ ಕೊರೊನಾ ಪರಿಸ್ಥಿತಿ ಕಾಮಗಾರಿ ವಿಳಂಬಕ್ಕೆ ಮತ್ತೊಂದು ಕಾರಣ ವಾಯಿತು. ಅಂತರ ರಾಜ್ಯ ಸರಕು ಸಾಗಣೆ ದೃಷ್ಟಿಯಿಂದ ಹಾಗೂ ಶಬರಿಮಲೆಯಂತಹ ಪುಣ್ಯ ಕ್ಷೇತ್ರಗಳ ದರ್ಶನ ದೃಷ್ಟಿಯಿಂದ ಬಹಳ ಮಹತ್ವವೆನಿಸುವ ಕೂಟುಪೊಳೆ ಸೇತುವೆಗೆ ಮುಂದೆ ಹೊಸ ರೂಪ ಲಭಿಸಲಿದೆ. ಶತಮಾನದ ಇತಿಹಾಸ ಹೊತ್ತಿರುವ ಹಳೆಯ ಸೇತುವೆ ಇತಿಹಾಸದ ಪುಟ ಸೇರಲಿದೆ.

- ರೆಹೆಮಾನ್, ವೀರಾಜಪೇಟೆ