ಕೊಡ್ಲಿಪೇಟೆ, ಜೂ. ೨೫: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲುವಾಗಿಲು ಗ್ರಾಮದಲ್ಲಿ ಕೋವಿಡ್ ಲಸಿಕಾ ಆಭಿಯಾನ ನಡೆಯಿತು.
ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿನಿತ್ಯ ಲಸಿಕೆ ನೀಡಲಾಗುತ್ತಿದ್ದು, ನಿಲುವಾಗಿಲು ಗ್ರಾಮದಿಂದ ಕೊಡ್ಲಿಪೇಟೆಗೆ ಆಗಮಿಸಲು ೮ ಕಿ.ಮೀ. ದೂರ ಹಾಗೂ ವಾಹನದ ವ್ಯವಸ್ಥೆಯೂ ಇಲ್ಲದ ಹಿನ್ನೆಲೆ ಅನಾನುಕೂಲ ಉಂಟಾಗಿತ್ತು.
ಈ ಬಗ್ಗೆ ಸ್ಥಳೀಯರು ಟಾಸ್ಕ್ಫೋರ್ಸ್ ಸಮಿತಿಗೆ ಸಮಸ್ಯೆ ತೋಡಿಕೊಂಡಿದ್ದರು. ಇವರ ಬೇಡಿಕೆ ಯನ್ನು ಗಮನಿಸಿದ ಟಾಸ್ಕ್ಫೋರ್ಸ್ ಸಮಿತಿ, ನಿಲುವಾಗಿಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಲಸಿಕೆ ವಿತರಣೆಗೆ ಅವಕಾಶ ಒದಗಿಸಿದ್ದು, ೧೦೦ ಮಂದಿ ಕೋವಿಡ್ ಲಸಿಕೆ ಪಡೆದರು.
ಬೆಸೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ವತಿಯಿಂದ ಲಸಿಕೆ ಪಡೆಯಲು ಆಗಮಿಸಿದ ಎಲ್ಲರಿಗೂ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಲಾಯಿತು. ಆರೋಗ್ಯ ನಿರೀಕ್ಷಣಾಧಿಕಾರಿ ದುಂಬಿತ, ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಸುರಕ್ಷಾಧಿಕಾರಿ ಸರಸ್ವತಿ, ಕಿರಿಯ ಸುರಕ್ಷಾಧಿಕಾರಿ ವನಿತಾ, ಆಶಾ ಕಾರ್ಯಕರ್ತೆ ಪಾರ್ವತಿ,ಅಂಗನವಾಡಿ ಕಾರ್ಯಕರ್ತೆ ವನಜಾಕ್ಷಿ ಸೇರಿದಂತೆ ಇತರರು ಹಾಜರಿದ್ದರು.