ಮಡಿಕೇರಿ, ಜೂ. ೨೪: ಮಡಿಕೇರಿ ನಗರಸಭಾ ವ್ಯಾಪ್ತಿಗೆ ಒಳಪಡುವ ೧೯ನೇ ವಾರ್ಡ್ನಲ್ಲಿ ಮೂಲಭೂತ ಸಮಸ್ಯೆಗಳು ಕಾಡುತ್ತಿದ್ದು, ತಕ್ಷಣ ಜಿಲ್ಲಾಡಳಿತ ಹಾಗೂ ನಗರಸಭೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ೧೯ನೇ ವಾರ್ಡ್ನ ಕಾಂಗ್ರೆಸ್ ಬೂತ್ ಸಮಿತಿ ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ಸಮಿತಿಯ ಪ್ರಮುಖರು ಕುಡಿಯುವ ನೀರು, ಸ್ವಚ್ಛತೆ, ರಸ್ತೆ ಮತ್ತು ಸೇತುವೆ ದುರಸ್ತಿ ಕುರಿತು ಗಮನ ಸೆಳೆದರು.

ಅಗ್ನಿಶಾಮಕ ದಳದ ಕಚೇರಿ, ಡೈರಿ ಫಾರ್ಮ್, ಪ್ರಗತಿ ಲೇಔಟ್, ಕನ್ನಿಕಾ ಬಡಾವಣೆ, ರೈಫಲ್ ರೇಂಜ್, ಬಾಲಕೃಷ್ಣ ಲೇಔಟ್, ಡಿ.ಆರ್. ವಸತಿಗೃಹ ಹಾಗೂ ಸುಬ್ರಮಣ್ಯನಗರ ಪ್ರದೇಶ ವಾರ್ಡ್ ಸಂಖ್ಯೆ ೧೯ಕ್ಕೆ ಒಳಪಡುತ್ತದೆ. ನಗರದ ಹೃದಯ ಭಾಗದಲ್ಲಿ ರಾಜಕಾಲುವೆ ಹರಿಯುತ್ತಿದ್ದು, ಅದು ಡೈರಿ ಫಾರ್ಮ್, ಬಾಲಕೃಷ್ಣ ಲೇಔಟ್, ಮೈತ್ರಿ ಹಾಲ್ ಹಾಗೂ ಸುಬ್ರಮಣ್ಯ ನಗರದ ಮೂಲಕ ಹರಿಯುತ್ತದೆ. ಈ ಕಾಲುವೆಗೆ ನಗರದ ಸುಮಾರು ೨೦ ವಾರ್ಡ್ಗಳಿಂದ ನೀರು ಹರಿದು ಬರುತ್ತದೆ. ಡಿ.ಆರ್. ವಸತಿಗೃಹದ ಮೇಲ್ಭಾಗದಲ್ಲಿರುವ ಕೆರೆಯಿಂದಲೂ ನೀರು ಬಂದು ಕಾಲುವೆ ಸೇರುತ್ತದೆ. ಇದೇ ಪ್ರದೇಶದಲ್ಲಿ ನಗರಕ್ಕೆ ಶುದ್ಧ ನೀರು ಪೂರೈಕೆ ಮಾಡುವ ಒಂದು ನೀರು ಶುದ್ಧೀಕರಣ ಘಟಕವಿದ್ದು, ಇದರಿಂದ ವಾರಕ್ಕೆ ಮೂರು ಬಾರಿ ಕಲುಷಿತ ನೀರನ್ನು ಹೊರ ಬಿಡಲಾಗುತ್ತದೆ. ಈ ನೀರು ವಸತಿಗೃಹ ಬಳಿ ಇರುವ ಕೆರೆಗೆ ಸೇರುತ್ತದೆ. ಕಸ ವಿಲೇವಾರಿ ಘಟಕದಿಂದಲೂ ನೀರು ಬಂದು ಸೇರುತ್ತಿದ್ದು, ಈ ಎಲ್ಲಾ ನೀರು ಒಟ್ಟಾಗಿ ಪಂಪ್‌ಹೌಸ್ ಬಳಿ ರಾಜ ಕಾಲುವೆಗೆ ಸೇರುತ್ತದೆ. ೨೦೧೮ರಲ್ಲಿ ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪದಲ್ಲಿ ಅಗ್ನಿಶಾಮಕ ದಳದ ಕಚೇರಿ ಬಳಿ ಬರೆ ಕುಸಿದು ರೈಫಲ್ ರೇಂಜ್‌ಗೆ ಇದ್ದ ಲಿಂಕ್ ರಸ್ತೆ ಕುಸಿದಿದೆ. ಮುಳಿಯ ಲೇಔಟ್ ಎದುರು ಸುಬ್ರಮಣ್ಯ ನಗರದಲ್ಲಿ ಬರೆ ಕುಸಿದು ಅಲ್ಲಿನ ಮನೆಗಳಿಗೆ ಹೋಗಲು ದಾರಿ ಕ್ಲಿಷ್ಟಕರವಾಗಿದೆ, ಅಲ್ಲದೆ ಆ ಮನೆಗಳು ಅಪಾಯದಂಚಿನಲ್ಲಿವೆ. ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯದ ಬಳಿ ಎರಡು ಕಡೆಗಳಲ್ಲಿ ಬರೆ ಕುಸಿದು ಅಕ್ಕಪಕ್ಕದ ನಿವಾಸಿಗಳು ಆತಂಕದಲ್ಲಿದ್ದಾರೆ.

ಪೊಲೀಸ್ ವಸತಿ ಗೃಹದ ಹಿಂಬದಿಯಲ್ಲಿ ತೋಡು ಹರಿಯು ತ್ತಿದ್ದು, ಅದರ ಮೇಲ್ಭಾಗದ ಬರೆ ಕುಸಿದಿದ್ದು, ಇಲ್ಲಿರುವ ಮನೆಗಳಿಗೆ ಹಾನಿಯಾಗಿದೆ. ಪ್ರತಿವರ್ಷ ಮಳೆ ಗಾಲದಲ್ಲಿ ಕನ್ನಿಕಾ ಲೇಔಟ್ ಮತ್ತು ಪ್ರಗತಿ ಲೇಔಟ್‌ನಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥ ವಾಗುತ್ತಿದೆ. ೧೯ನೇ ವಾರ್ಡ್ನಲ್ಲಿ ಇಷ್ಟೆಲ್ಲಾ ಸಮಸ್ಯೆ ಗಳಿದ್ದರೂ ಕಳೆದ ಮೂರು ವರ್ಷಗಳಿಂದ ಯಾವುದೇ ಶಾಶ್ವತ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ ಎಂದು ಸಮಿತಿಯ ಪ್ರಮುಖರು ಆರೋಪಿಸಿದರು.

ಡೈರಿ ಫಾರ್ಮ್ನಿಂದ ವಿದ್ಯಾ ನಗರ ಬಡಾವಣೆಯಲ್ಲಿ ನಗರಸಭೆ ಸರಹದ್ದು ಮುಗಿಯುವವರೆಗೆ ರಾಜಕಾಲುವೆಗೆ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು. ರೈಫಲ್ ರೇಂಜ್‌ನಲ್ಲಿ ಪೊಲೀಸ್ ವಸತಿಗೃಹದ ಬಳಿ ನೀರು ಹರಿದು ರಾಜಕಾಲುವೆಗೆ ಸೇರುವ ಮಾರ್ಗದಲ್ಲಿ ಕಾಡು ಕಡಿದು ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು. ಗಾಳಿಬೀಡು ಮುಖ್ಯ ರಸ್ತೆ ರಾಜಕಾಲುವೆ ಒತ್ತಾಗಿದ್ದು, ಹಲವು ವರ್ಷಗಳಿಂದ ಕನ್ನಿಕಾ ಲೇಔಟ್ ಮುಂಭಾಗದಲ್ಲಿ ರಸ್ತೆ ಮಳೆಗಾಲದಲ್ಲಿ ಕೊರೆಯಲ್ಪಡುತ್ತಿದೆ. ಈ ರಸ್ತೆಯನ್ನು ಸಂರಕ್ಷಿಸಲು ಅಗತ್ಯ ಯೋಜನೆ ರೂಪಿಸಬೇಕು. ಗಾಳಿಬೀಡು ಮುಖ್ಯರಸ್ತೆ ಮೈತ್ರಿಹಾಲ್ ಜಂಕ್ಷನ್‌ನಲ್ಲಿರುವ ಕಿರುಸೇತುವೆಯ ಕೆಳಭಾಗದಲ್ಲಿ ಕುಸಿದಿದ್ದು, ಸಂಚಾರ ವ್ಯವಸ್ಥೆಗೆ ಧಕ್ಕೆ ಬರುವ ಆತಂಕವಿದೆ. ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು.

ಈ ಎಲ್ಲಾ ಕಾಮಗಾರಿಗಳನ್ನು ಪ್ರಾಕೃತಿಕ ವಿಕೋಪದಡಿ ತುರ್ತೆಂದು ಪರಿಗಣಿಸಿ ಅಗತ್ಯ ಅನುದಾನ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಮನವಿ ಪತ್ರ ಸಲ್ಲಿಸುವ ಸಂದರ್ಭ ಬೂತ್ ಸಮಿತಿ ಅಧ್ಯಕ್ಷ ಎಂ. ಸುದಯ್ ನಾಣಯ್ಯ, ಕಾರ್ಯದರ್ಶಿ ವೇದ ಹರೀಶ್, ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ಎಂ. ಅಯ್ಯಪ್ಪ, ಮಡಿಕೇರಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಂಡೀರ ಸದಾ ಮುದ್ದಪ್ಪ, ಪ್ರಮುಖರಾದ ಬಿ.ಎಸ್. ಹರಿಶ್ಚಂದ್ರ ಮತ್ತಿತರರು ಹಾಜರಿದ್ದರು.