*ಗೋಣಿಕೊಪ್ಪಲು, ಜೂ. ೨೪: ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗುತ್ತಿರುವ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳು ನಿರಂತರ ಅಧ್ಯಯನದಲ್ಲಿ ತೊಡಗಬೇಕು ಎಂದು ಗೋಣಿಕೊಪ್ಪಲು ಠಾಣಾಧಿಕಾರಿ ಹೆಚ್. ಸುಬ್ಬಯ್ಯ ಸಲಹೆಯಿತ್ತರು.

ಅರುವತ್ತೊಕ್ಕಲು ಮೈಸೂರಮ್ಮ ನಗರದ ಅಂಗನವಾಡಿ ಸಮುದಾಯ ಕೇಂದ್ರದಲ್ಲಿ ಉದ್ಯೋಗ ಮಾಹಿತಿ ಬಗ್ಗೆ ಮಾತನಾಡಿದ ಅವರು, ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಪಿಯುಸಿ ಮತ್ತು ಪದವಿ ತರಗತಿಯಲ್ಲಿ ತೇರ್ಗಡೆ ಹೊಂದಿವರು ಅರ್ಜಿ ಸಲ್ಲಿಸಿ ಅದಕ್ಕೆ ಸಂಬAಧಿಸಿದ ಪುಸ್ತಕಗಳನ್ನು ಪಡೆದುಕೊಂಡು ಸತತವಾಗಿ ಅಧ್ಯಯನ ಮಾಡಿದರೆ ಸಫಲರಾಗಬಹುದು ಎಂದು ತಿಳಿಸಿದರು.

೮ನೇ ತರಗತಿಯಿಂದ ಹಿಡಿದು ಹತ್ತನೇ ತರಗತಿವರೆಗಿನ ಸಮಾಜ ವಿಜ್ಞಾನ ಹಾಗೂ ವಿಜ್ಞಾನ ಪುಸ್ತಕಗಳ ಜೊತೆಗೆ ಸಾಮಾನ್ಯ ಜ್ಞಾನದ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಅಲ್ಲದೆ ಸಮಕಾಲೀನ ಘಟನೆಗಳನ್ನು ತಿಳಿದುಕೊಳ್ಳಲು ದಿನ ಪತ್ರಿಕೆಗಳನ್ನು ತಪ್ಪದೆ ಓದಬೇಕು ಎಂದು ತಿಳಿಸಿದರು.

ಬಾಳೆಲೆ ವಿಜಯಲಕ್ಷಿö್ಮ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಮಾತನಾಡಿ, ಕಂಪ್ಯೂಟರೀಕರಣ ಮತ್ತು ಖಾಸಗೀಕರಣದ ಸಂದರ್ಭದಲ್ಲಿ ಸರ್ಕಾರಿ ಉದ್ಯೋಗ ಪಡೆದುಕೊಳ್ಳುವುದು ಕಷ್ಟದ ಕೆಲಸವಾಗಿದೆ. ಸಿಗುವ ಅಲ್ಪ ಪ್ರಮಾಣದ ಉದ್ಯೋಗ ಪಡೆದುಕೊಳ್ಳಲು ಬೇಕಾದ ಅರ್ಹತೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಹೆಚ್.ಎನ್. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್, ಗಿರಿಜಾ ಹಾಜರಿದ್ದರು.