ಕೂಡಿಗೆ, ಜೂ. ೨೩: ತೋಟಗಾರಿಕಾ ಇಲಾಖೆ ವತಿಯಿಂದ ಬೆಳೆಸಲಾದ ತೆಂಗಿನ ಗಿಡಗಳನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ರೈತರಿಗೆ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತೆಂಗಿನ ಗಿಡಗಳನ್ನು ಪಡೆಯಲು ರೈತರು ತಮ್ಮ ಜಮೀನಿನ ಆರ್ಟಿಸಿಯ ಪ್ರತಿ ಮತ್ತು ಆಧಾರ್ ಕಾರ್ಡ್ನ ಪ್ರತಿ ಒಂದು ಗಿಡಕ್ಕೆ ಸರಕಾರ ನಿಗದಿ ಮಾಡಿದ ರೂ. ೭೦ ಆಗಿರುತ್ತದೆ ಎಂದು ಹಾರಂಗಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ತಿಳಿಸಿದರು.
ಈ ಕ್ಷೇತ್ರದಲ್ಲಿ ರೈತರಿಗೆ ವಿತರಣೆ ಮಾಡಲು ೧೩,೭೩೦ ಗಿಡಗಳನ್ನು ಬೆಳೆಸಲಾಗಿದೆ. ರೈತರ ಜಮೀನಿನ ಆರ್ಟಿಸಿ ಪ್ರಕಾರ ರೈತರಿಗೆ ಕನಿಷ್ಟ ೩೦ ರಿಂದ ಗರಿಷ್ಠ ೬೦ ಗಿಡಗಳನ್ನು ನೀಡಲಾಗುವುದು ಎಂದು ವರದರಾಜ್ ಶಾಸಕರಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಿರುವ ರೂ. ೮ ಲಕ್ಷ ವೆಚ್ಚದ ೪೦ ಲಕ್ಷ ಲೀಟರ್ ಸಾಮರ್ಥ್ಯದ ನೀರು ಶೇಖರಣಾ ಘಟಕಗಳನ್ನು ವೀಕ್ಷಿಸಿದ ಶಾಸಕರು ಅದರೊಳಗೆ ಸಾಕಾಣೆ ಮಾಡಿರುವ ಮೀನುಗಳಿಗೆ ಆಹಾರ ಹಾಕಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಬಾಸ್ಕರ್ ನಾಯಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಆರ್. ಮಂಜುಳ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗಣೇಶ್, ತಾಲೂಕು ಅಕ್ರಮ ಸಕ್ರಮ ಸಮಿತಿಯ ಸದಸ್ಯ ಭರತ್ ಮಾಚಯ್ಯ , ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಚಂದ್ರು, ದಿನೇಶ್, ಮಣಿ ಸೇರಿದಂತೆ ಕೂಡು ಮಂಗಳೂರು ಗ್ರಾಮ ಪ್ರಮುಖರಾದ ಮಂಜುನಾಥ, ಗುರುಲಿಂಗಪ್ಪ, ಪ್ರಭಾಕರ್, ಕುಮಾರಸ್ವಾಮಿ, ಶಾಸಕರ ಆಪ್ತ ಸಹಾಯಕ ರವಿ ಸೇರಿದಂತೆ ರೈತರು ಹಾಜರಿದ್ದರು.
ಈ ಸಂದರ್ಭ ಶಾಸಕರು ‘ಶಕ್ತಿ’ ಪತ್ರಿಕೆಯಲ್ಲಿ ಪ್ರಕಟವಾದ ಹಾರಂಗಿಯ ತೋಟಗಾರಿಕಾ ಇಲಾಖೆಯು ಹೆಚ್ಚುವರಿಯಾಗಿ ೪೫ ಎಕರೆಗಳಷ್ಟು ಪ್ರದೇಶದಲ್ಲಿ ಗಿಡಗಳನ್ನು ಬೆಳೆಸುವ ಸುದ್ದಿಯನ್ನು ಗಮನಿಸಿ ಸ್ಥಳವನ್ನು ಪರಿಶೀಲನೆ ಮಾಡಿ ಅಧಿಕಾರಿ ವರ್ಗದವರನ್ನು ಶ್ಲಾಘಿಸಿದರು.