ಕಣಿವೆ, ಜೂ. ೨೩: ಕಾಡಿನೊಳಗೆ ಗಿಡಗಳನ್ನು ನೆಟ್ಟು ಬೆಳೆಸಲು ಕಂಟಕವಾಗಿರುವ ಬೀಡಾಡಿ ದನಗಳ ನಿಯಂತ್ರಣಕ್ಕೆ ಮುಂದಾಗಿರುವ ಅರಣ್ಯ ಇಲಾಖೆ ರಾಜ್ಯ ಹೆದ್ದಾರಿಯ ಅಂಚಿನ ಆನೆಕಾಡು ಅರಣ್ಯದಲ್ಲಿ ಇಟಾಚಿ ಯಂತ್ರವನ್ನು ಬಳಸಿಕೊಂಡು ಬೆಳವಣಿಗೆ ಹಂತದಲ್ಲಿದ್ದ ನೂರಾರು ಗಿಡಗಳು ಹಾಗೂ ಮರಗಳನ್ನು ನೆಲಸಮ ಮಾಡಲಾಗುತ್ತಿದೆ.
ಈ ಬಗ್ಗೆ ಪತ್ರಿಕೆ ಸ್ಥಳಕ್ಕೆ ತೆರಳಿದಾಗ ಸಿಕ್ಕ ಮಾಹಿತಿ ಏನೆಂದರೆ, ಕಾಡಾನೆಗಳಿಗೆ ಪೂರಕವಾಗುವಂತಹ ಗಿಡಗಳನ್ನು ನೆಟ್ಟು ಬೆಳೆಸಲು ದನಗಳು ಒಳ ಬರದಂತೆ ಸೋಲಾರ್ ತಂತಿ ಬೇಲಿ ಕಾಮಗಾರಿ ನಿರ್ಮಿಸಲಾಗುತ್ತಿದೆ. ಅದಕ್ಕೆ ಈ ಕಾಮಗಾರಿ ನಡೆಯುತ್ತಿದೆ.
ಆದರೆ ಜಾನುವಾರುಗಳು ಅರಣ್ಯದೊಳಗೆ ನುಸುಳಲು ಅಸಾಧ್ಯವಾದ ಎತ್ತರದ ಪ್ರದೇಶದಲ್ಲೂ ಕಲ್ಲು ಬಂಡೆಗಳನ್ನು ಲೆಕ್ಕಿಸದೇ ಇಟಾಚಿ ಯಂತ್ರ ಮಣ್ಣನ್ನು ಅಗೆದು ಬಗೆದು ತೆಗೆದಿರುವ ಚಿತ್ರಣ ಹೆದ್ದಾರಿಯಲ್ಲಿ ಸಾಗುವವರಿಗೆ ಗೋಚರಿಸುತ್ತದೆ.
ಇನ್ನಾದರೂ ಅರಣ್ಯಾಧಿ ಕಾರಿಗಳು, ಇಲ್ಲಿ ಬೆಳೆದಿರುವ ಗಿಡ ಮರಗಳಿಗೆ ಘಾಸಿಯಾಗದಂತೆ ಎಚ್ಚರ ವಹಿಸಬೇಕು ಎಂಬುದು ಪರಿಸರ ಪ್ರೇಮಿಗಳ ಆಗ್ರಹ.